ಮಡಿಕೇರಿ, ಸೆ. 2: ಕೇಂದ್ರ ಸರಕಾರ ಕಾರ್ಮಿಕ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಂದು ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಮುಷ್ಕರದೊಂದಿಗೆ ಬಂದ್ ಕರೆಗೆ ಕೊಡಗು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸ್ಪಂದನೆ ಕಂಡು ಬಂದಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಲವು ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದ್ದು, ಹೊರತಾಗಿ ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಮುಷ್ಕರದ ಬಿಸಿ ಅಷ್ಟಾಗಿ ಗೋಚರಿಸಿಲ್ಲ. ಕೊಡಗಿನ ಪ್ರಮುಖ ಹಬ್ಬವಾದ ಕೈಲು ಮುಹೂರ್ತಕ್ಕೆ ಮುನ್ನಾ ದಿನ ಮುಷ್ಕರದ ಕರೆ ಇದ್ದದ್ದೂ ಹೆಚ್ಚಿನ ಸ್ಪಂದನದ ಕೊರತೆಗೆ ಕಾರಣವೆನ್ನಬಹುದು.
ಸರಕಾರಿ ಕಚೇರಿಗಳು, ಶಾಲಾ - ಕಾಲೇಜುಗಳು, ಖಾಸಗಿ ಬಸ್, ಆಟೋ ಸಂಚಾರ ಎಂದಿನಂತಿತ್ತು. ವಾಣಿಜ್ಯ ಬ್ಯಾಂಕ್ಗಳು ಮುಚ್ಚಲ್ಪಟ್ಟಿದ್ದು, ಬಿಎಸ್ಎನ್ಎಲ್, ಎಲ್ಐಸಿ, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ ಐಎನ್ಟಿಯುಸಿ, ಸಿಐಟಿಯು, ಎಐಟಿಯುಸಿ, ಟಿಯುಸಿಸಿ ಸೇರಿದಂತೆ ಸುಮಾರು 14 ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗಿದ್ದವು.
ಅಕ್ಷರದಾಸೋಹ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾದ್ದರಿಂದ ಶಿಕ್ಷಕರು ಹಾಗೂ ಎಸ್ಡಿಎಂಸಿಯವರು ಬಿಸಿಯೂಟ ತಯಾರಿಸಿ ವಿದ್ಯಾರ್ಥಿಗಳಿಗೆ ಉಣ ಬಡಿಸಿರುವದಾಗಿ ಡಿಡಿಪಿಐ ಬಸವರಾಜ್ ತಿಳಿಸಿದರು. ಕಾರ್ಮಿಕ ಪೋಷಕರ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಇತ್ತು. ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 10ರಷ್ಟು ವ್ಯತ್ಯಾಸವಾಗಿದೆ ಇದು ಹೊರತುಪಡಿಸಿದರೆ, ಎಲ್ಲವೂ ಸಹಜವಾಗಿತ್ತು. ಕೈಲುಮುಹೂರ್ತ ಹಬ್ಬದ ಅಂಗವಾಗಿ ಹೆಚ್ಚಾಗಿ ದಕ್ಷಿಣ ಕೊಡಗು ಹಾಗೂ ಇತರ ಕೆಲವೆಡೆ ಶಾಲೆಗಳಿಗೆ ವಿವೇಚನಾ ರಜೆಯನ್ನೂ ಸ್ಥಳೀಯವಾಗಿ ನೀಡಲಾಗಿತ್ತ್ತು ಎಂದು ಡಿಡಿಪಿಐ ಮಾಹಿತಿ ನೀಡಿದರು.
ಕೆಎಸ್ಆರ್ಟಿಸಿ ಬಸ್ಗಳು ಜಿಲ್ಲೆಯೊಳಗೆ ಓಡಾಟ ನಡೆಸಿವೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗಮನಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ತಿಳಿಸಿದರು. ಬೆಳಿಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಇತ್ತು. ಆದರೆ ಹಾಸನ, ಮೈಸೂರು ಕಡೆಗಳಿಂದ ಜಿಲ್ಲೆಗೆ ಯಾವದೇ ಬಸ್ ಬಂದಿಲ್ಲ.
(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಹೊರ ಭಾಗಕ್ಕೆ ಬಸ್ ಸಂಚಾರ ನಂತರ ಸ್ಥಗಿತಗೊಂಡಿದ್ದಾಗಿ ಅವರು ತಿಳಿಸಿದರು. ಮಡಿಕೇರಿಯಿಂದ ಮೈಸೂರು - ಬೆಂಗಳೂರಿನತ್ತ ತೆರಳಿದ ಬಸ್ಗಳು ಕುಶಾಲನಗರ ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದಾಗಿ ಅವರು ತಿಳಿಸಿದರು. ಜಿಲ್ಲೆಯ ಇತರೆಡೆಗಳಲ್ಲಿಯೂ ಜನಜೀವನ ಎಂದಿನಂತಿತ್ತು.
ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಹಲವು ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಸುದರ್ಶನ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಘೋಷಣೆಗಳೊಂದಿಗೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದ ಕಾರ್ಮಿಕರನ್ನು ಹಾಗೂ ಬೆಳೆಗಳನ್ನು ರಕ್ಷಿಸುವಂತೆ ಆಗ್ರಹಿಸಿದರು. ಅಲ್ಲದೆ ಕಾರ್ಮಿಕರಿಗೆ ಕನಿಷ್ಟ ವೇತನ ರೂ. 18000 ನಿಗದಿ ಪಡಿಸಬೇಕು. ಖಾಸಗೀಕರಣ ಮತ್ತು ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಎನ್.ಎಂ. ಮುತ್ತಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕೆಲ ಕಾರ್ಮಿಕ ಸಂಘಟನೆಗಳ ಅಭಿಪ್ರಾಯವನ್ನು ಕೇಳದೆ ಕೇವಲ ಬಿಜೆಪಿ ಪರವಾಗಿರುವ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಮಾತ್ರ ಕೇಳುತ್ತಿದೆ. ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ಸಂದರ್ಭ ಕಠಿಣ ನಿಯಮಾವಳಿಯನ್ನು ರೂಪಿಸಿದೆ. ಕಾರ್ಮಿಕರ ಪಿಎಫ್ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದೆ. ಕಾರ್ಮಿಕರ ಬೆನ್ನುಮೂಳೆಯನ್ನು ಮುರಿಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಮಿಕ ಮುಖಂಡರಾದ ಡಾ. ಐ. ಆರ್. ದುರ್ಗಾಪ್ರಸಾದ್, ಹೆಚ್.ಎಂ. ಸೋಮಪ್ಪ, ವಿ.ಜೆ. ಅಂತೋಣಿ, ಜನಾರ್ಧನ, ಹೆಚ್.ಬಿ. ರಮೇಶ್, ಎ. ಮಹಾದೇವ, ಕೆ.ಪಿ. ಕಾವೇರಮ್ಮ, ಎನ್.ಡಿ. ಕುಟ್ಟಪ್ಪ, ಎಂ.ಎ. ಉಸ್ಮಾನ್ ಹಾಗೂ ಇನ್ನಿತರರು ನೇತೃತ್ವ ವಹಿಸಿದ್ದರು.
ಶನಿವಾರಸಂತೆ : ಕಾರ್ಮಿಕರ ಸಂಘಟನೆಗಳ ಮುಷ್ಕರಕ್ಕೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿಯ ಕೆಲವು ಖಾಯಂ ನೌಕರರು ಇಂದು ಮಡಿಕೇರಿಗೆ ತೆರಳಿದ್ದು, ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದು, ಪಂಚಾಯಿತಿ ಕಚೇರಿಯ ಕುರ್ಚಿಗಳಲ್ಲೂ ಖಾಲಿಯಾಗಿ ರುವದನ್ನು ಕಂಡು ವಾಪಾಸು ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.
ಪಂಚಾಯಿತಿ ಕಚೇರಿಗೆ ಆಗಮಿಸಿದ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಪಂಚಾಯಿತಿಯ ಖಾಯಂ ನೌಕಕರಿಗೆ ಪಂಚಾಯಿತಿ ವತಿಯಿಂದ ತಿಂಗಳಿಗೆ ರೂ. 8 ಸಾವಿರ ಸಂಬಳ ನೀಡುತ್ತಿದ್ದು, ಇನ್ನೂ ಹೆಚ್ಚಿಗೆ ಸಂಬಳ ನೀಡಬೇಕೆಂದರೆ, ಪಂಚಾಯಿತಿಯನ್ನೆ ಮಾರಬೇಕಾಗುತ್ತದೆ ಎಂದು ಹೇಳಿದರು.
ಪಂಚಾಯಿತಿ ಕಚೇರಿ ಬಾಗಿಲು ತೆಗೆದಿದೆ, ಕೆಲವು ಖಾಯಂ ನೌಕರರು ಮಡಿಕೇರಿ ಕಾರ್ಮಿಕರ ಸಂಘಟನೆಗಳ ಮುಷ್ಕರಕ್ಕೆ ತೆರಳಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲಿ, ಕಾರ್ಯದರ್ಶಿ ಗಳಾಗಲಿ, ನೌಕರ ವರ್ಗದವರಾಗಲಿ, ಪಂಚಾಯಿತಿ ಕಚೇರಿಯಲ್ಲಿ ಯಾರು ಇಲ್ಲ. ಕುರ್ಚಿಗಳೆಲ್ಲಾ ಖಾಲಿಯಾಗಿವೆ. ಇವರಿಗೆ ಜವಾಬ್ದಾರಿಕೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರಸಂತೆಯಲ್ಲಿ ಸರಕಾರಿ ಬಸ್ಗಳ ಓಡಾಟವಿರಲಿಲ್ಲ. ಖಾಸಗಿ ಬಸ್ಗಳು, ಖಾಸಗಿ ವಾಹನಗಳು ಓಡಾಡುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ಶನಿವಾರಸಂತೆ ಪಂಚಾಯಿತಿ ಕಚೇರಿ ಹೊರತು ಪಡಿಸಿ, ಎಲ್ಲಾ ಕಚೇರಿಗಳು ಖಾಸಗಿ ಬ್ಯಾಂಕುಗಳು, ಅಂಚೆ ಕಚೇರಿ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ವೀರಾಜಪೇಟೆ : ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಮುಷ್ಕರ - ಬಂದ್ ವೀರಾಜಪೇಟೆಯಲ್ಲಿ ಯಶಸ್ಸು ಕಂಡಿಲ್ಲ ದಿನನಿತ್ಯದಂತೆ ಪಟ್ಟಣದಲ್ಲಿ ಬೆಳಿಗ್ಗೆ ಯಿಂದಲೆ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರಿಗಳು, ಹೊಟೇಲ್, ಕಚೇರಿಗಳು, ಬ್ಯಾಂಕ್ ವಹಿವಾಟು ನಡೆದವು. ಖಾಸಗಿ ವಾಹನಗಳು, ಬಸ್ಸುಗಳ ಸಂಚಾರ ಎಂದಿನಂತೆ ಕಂಡು ಬಂತು. ಕೈಲ್ಮುಹೂರ್ತ ಹಾಗೂ ಗೌರಿ-ಗಣೇಶ ಹಬ್ಬ ಇರುವದರಿಂದ ಗ್ರಾಮೀಣ ಪ್ರದೇಶದ ಜನತೆ ಪಟ್ಟಣದಲ್ಲಿ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದರು.
ಸೋಮವಾರಪೇಟೆ : ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಮತ್ತು ದೇಶವ್ಯಾಪಿ ಮುಷ್ಕರಕ್ಕೆ ಸೋಮವಾರಪೇಟೆಯಲ್ಲಿ ನಿರೀಕ್ಷಿತ ಬೆಂಬಲ ವ್ಯಕ್ತವಾಗದೇ, ಜನಜೀವನ ಎಂದಿನಂತೆ ನಡೆಯಿತು.
ಸೋಮವಾರಪೇಟೆಯ ಒಂದೆರಡು ಬ್ಯಾಂಕ್ಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಅಂಗಡಿಮುಂಗಟ್ಟುಗಳು ತೆರೆದಿದ್ದವು. ವ್ಯಾಪಾರ ವಹಿವಾಟು ಎಂದಿನಂತೆ ಜರುಗಿದವು. ಕಾರ್ಮಿಕ ವರ್ಗವೂ ಬಂದ್ನಿಂದ ದೂರ ಉಳಿದು ಎಂದಿನ ಕೆಲಸ ಕಾರ್ಯ ಗಳಲ್ಲಿ ತೊಡಗಿದ್ದು ಕಂಡುಬಂತು. ಕಾರ್ಮಿಕ ಸಂಘಟನೆಗಳ ಕರೆಯ ನಡುವೆಯೂ ಬಹುತೇಕ ಕಾರ್ಮಿಕರು ತೋಟ ಸೇರಿದಂತೆ ಇನ್ನಿತರ ಕೆಲಸಗಳಿಗೆ ಎಂದಿನಂತೆ ಹಾಜರಾದರು.
ಒಂದೆರಡು ಎಸ್ಟೇಟ್ ಗಳಿಂದ ಕಾರ್ಮಿಕರು ಮಡಿಕೇರಿ ಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದುದನ್ನು ಹೊರತು ಪಡಿಸಿದರೆ ಉಳಿದವರು ಕೂಲಿ ಕೆಲಸಕ್ಕೆ ಹಾಜರಾದರು. ಸೋಮವಾರಪೇಟೆ ಪಟ್ಟಣದಲ್ಲಿ ಬೆಳಗ್ಗಿನಿಂದಲೂ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಹೊಟೇಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರೆ, ಆಟೋಗಳು, ಖಾಸಗಿ ಬಸ್ಗಳ ಓಡಾಟ ಸರಾಗವಾಗಿ ನಡೆಯಿತು. ಸರ್ಕಾರಿ ಬಸ್ಗಳು ಮಾತ್ರ ನಿಲ್ದಾಣ ಬಿಟ್ಟು ಕದಲಲಿಲ್ಲ. ಸಂಜೆ 5 ಗಂಟೆವರೆಗೂ ನಿಲ್ದಾಣದಲ್ಲಿದ್ದ ಸರ್ಕಾರಿ ಬಸ್ಗಳು ನಂತರ ತೆರಳಿದವು. ಒಟ್ಟಾರೆ ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ ಕರೆಗೆ ಸೋಮವಾರಪೇಟೆ ಓಗೊಡಲಿಲ್ಲ.
ಕುಶಾಲನಗರ : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಭಾರತ್ ಬಂದ್ಗೆ ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್ಗಳು ಹೊರತು ಪಡಿಸಿ ಖಾಸಗಿ ಬಸ್, ಆಟೋಗಳು, ಟ್ಯಾಕ್ಸಿ, ಟೆಂಪೋಗಳ ಸೇವೆ ಎಂದಿನಂತೆ ಸಂಚಾರ ನಡೆಯಿತು. ಮಡಿಕೇರಿಯಿಂದ ಹಾಸನ ತೆರಳುವ ಬಸ್ಗಳು ಹೊರತುಪಡಿಸಿ ಮೈಸೂರು ಕಡೆಗೆ ಯಾವದೇ ಸರಕಾರಿ ಬಸ್ಗಳು ತೆರಳಲಿಲ್ಲ.
ಕುಶಾಲನಗರದಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ನಡೆದವು. ಬ್ಯಾಂಕ್, ಬಿಎಸ್ಎನ್ಎಲ್ ಕೇಂದ್ರಗಳು ಬಹುತೇಕ ತಮ್ಮ ವಹಿವಾಟು ಸ್ಥಗಿತಗೊಳಿಸಿದ್ದವು. ಕುಶಾಲನಗರ ಸಮೀಪದ ಕೊಪ್ಪ ಭಾರತಮಾತಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ಕೈಗಾರಿಕಾ ಬಡಾವಣೆಯಲ್ಲಿ ಚಟುವಟಿಕೆಗಳು ಎಂದಿನಂತೆ ನಡೆದವು.