ಮಡಿಕೇರಿ, ಆ. 23: ನಗರ ಸಭಾ ವ್ಯಾಪ್ತಿಯಲ್ಲಿ ಕಾಮಗಾರಿಗಳ ಕೆಲಸ ನಿರ್ವಹಿಸುವ ಗುತ್ತಿಗೆದಾರ ಕಾರ್ಮಿಕರ ಭವಿಷ್ಯನಿಧಿ ಸಂದಾಯವಾಗದೆ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ ಕಾರ್ಮಿಕ ನ್ಯಾಯಾಲಯದ ಆದೇಶದಂತೆ ಕಾರ್ಮಿಕ ಇಲಾಖೆ ನಗರಸಭೆಯ ನಾಲ್ಕು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಸುಮಾರು ರೂ. 97ಲಕ್ಷಗಳಷ್ಟು ಹಣವನ್ನು ಭವಿಷ್ಯ ನಿಧಿಗೆ ಜಮಾ ಮಾಡಿಕೊಂಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಲೋಪಗಳಿಗೆ ಪೌರಾಯುಕ್ತರು ಹಾಗೂ ಲೆಕ್ಕ ನಿರ್ವಹಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ.

ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ ಅವರ ಅಧ್ಯಕ್ಷತೆಯಲ್ಲಿಂದು ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಆರಂಭವಾಗುತ್ತಿದ್ದಂತೆ ಸ್ವಾಗತಕ್ಕೂ ಅವಕಾಶ ನೀಡದೆ, ವಿಷಯ ಪ್ರಸ್ತಾಪಿಸಿದ ಸದಸ್ಯ ಅಮೀನ್ ಮೊಹಿಸಿನ್, ನಗರಸಭೆಯ ನಾಲ್ಕು ಬ್ಯಾಂಕ್ ಖಾತೆಗಳು ಜಪ್ತಿಯಾಗಿ ರೂ. 97ಲಕ್ಷ ಭವಿಷ್ಯ ನಿಧಿಗೆ ಹೋಗಿದೆ. ಗುತ್ತಿಗೆದಾರರು ಹಣ ಪಾವತಿಸದ ಹಿನ್ನೆಲೆಯಲ್ಲಿ

ನಗರಸಭೆ ಭರಿಸಬೇಕೆಂದು ಕಾರ್ಮಿಕ ನ್ಯಾಯಾಲಯದ ಆದೇಶದಂತೆ ಈ ಕ್ರಮ ಜರುಗಿದೆ. ಆದರೆ ಈ ವಿಚಾರವನ್ನು ಅಧ್ಯಕ್ಷರಾದಿಯಾಗಿ ಯಾವದೇ ಸದಸ್ಯರುಗಳ ಗಮನಕ್ಕೆ ತಾರದೆ ಮುಚ್ಚಿಟ್ಟಿರುವ ಬಗ್ಗೆ ಪ್ರಶ್ನಿಸಿದರು. ಖಾತೆಗಳು ಜಪ್ತಿಯಾಗಿರುವದರ ವಿರುದ್ಧ ಪೌರಾಯುಕ್ತರು, ವಕೀಲರ ಮೂಲಕ ತಡೆಯಾಜ್ಞೆ ತಂದಿದ್ದಾರೆ. 2011ರಿಂದ ಈ ಬೆಳವಣಿಗೆ ನಡೆಯುತ್ತಿದ್ದು, ಯಾವದನ್ನೂ ಪ್ರತಿನಿಧಿಗಳ ಗಮನಕ್ಕೆ ತಂದಿಲ್ಲ. ಇದೀಗ ಭವಿಷ್ಯ ನಿಧಿ ಹಣಕ್ಕೂ ಬಡ್ಡಿ ಕೂಡ ಪಾವತಿಸ ಬೇಕಾದ ಅನಿವಾರ್ಯತೆ ಎದುರಾಗ ಲಿದೆ. ಇದು ನಗರಸಭೆಗೆ ಮತ್ತೊಂದು ಹೊರೆಯಾಗಲಿದೆ ಎಂದು ಹೇಳಿದರು.

ಈ ಸಂಬಂಧ 37 ಬಾರಿ ವಿಚಾರಣೆ ನಡೆದಿದೆ. ಆದರೆ ನಗರಸಭಾ ಅಧಿಕಾರಿಗಳು ಯಾವದೇ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಈ ರೀತಿ ಜಪ್ತಿಯಾಗಿದೆ. ಒಂದು ವೇಳೆ ಅಧಿಕಾರಿಗಳು ಪ್ರತಿನಿಧಿಗಳ ಗಮನಕ್ಕೆ ತಂದಿದ್ದರೆ ವಕೀಲರ ಮೂಲಕ ಪ್ರಕರಣ ಇತ್ಯರ್ಥ ಪಡಿಸಬಹುದಿತ್ತೆಂದು ಹೇಳಿದರು.

ಸದಸ್ಯರುಗಳಾದ ಕೆ.ಎಸ್. ರಮೇಶ್, ಟಿ.ಎಸ್. ಪ್ರಕಾಶ್ ಅವರುಗಳು ಮಾತನಾಡಿ, ಭವಿಷ್ಯ ನಿಧಿ ಹಣವನ್ನು ತುಂಡು ಗುತ್ತಿಗೆದಾರರು ಭರಿಸುವ ಅವಶ್ಯಕತೆಯಿಲ್ಲ. ಟೆಂಡರ್ ಪಡೆದುಕೊಂಡು ನಿರಂತರ ಕೆಲಸ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ. ಆದರೆ, ಪೌರಾಯುಕ್ತರು 30ಮಂದಿ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿ ಹಣ ಭರಿಸುವಂತೆ ಸೂಚಿಸಿದ್ದಾರೆ. ಇದು ಸರಿಯಲ್ಲ. ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.

ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ ಭವಿಷ್ಯ ನಿಧಿ ಪಾವತಿಸಲು ರೀತಿ, ನಿಯಮಗಳಿವೆ. ಗುತ್ತಿಗೆದಾರರ ಮೇಲೆ ಹೊರೆ ಹಾಕುವ ಕೆಲಸ ಮಾಡಬೇಡಿ, ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಮಾಹಿತಿ ನೀಡಿದ ಬಳಿಕ ಸಭೆ ಆರಂಭಿಸುವಂತೆ ಹೇಳಿದರು.

ಸದಸ್ಯ ಪ್ರಕಾಶ್ ಮಾತನಾಡಿ ಈ ಬಗ್ಗೆ 6 ತಿಂಗಳ ಹಿಂದೆಯೇ ನೋಟೀಸ್ ಬಂದಿದ್ದರೂ ಅಧಿಕಾರಿ ಗಳು ನಿರ್ಲಕ್ಷಿಸಿದ್ದಾರೆ. ಆಯುಕ್ತರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ದ್ದಾರೆ. ತಮ್ಮ ಗಮನಕ್ಕೆ ತಂದಿಲ್ಲ. ಅವರೇ ಹೊಣೆಗಾರರು, ಈ ಹಣವನ್ನು ಆಯುಕ್ತರು ಹಾಗೂ ಲೆಕ್ಕಾಧಿಕಾರಿಗಳೇ ಬಡ್ಡಿ ಸಹಿತ ಭರಿಸಬೇಕೆಂದು ಆಗ್ರಹಿಸಿದರು. ಆಡಳಿತ ಪಕ್ಷ ಸದಸ್ಯ ಕೆ.ಎಂ. ಗಣೇಶ್ ಮಾತನಾಡಿ, ಸಿವಿಲ್ ಗುತ್ತಿಗೆದಾರರು ಪಾವತಿಸುವ ಹಾಗಿಲ್ಲ. ಬ್ಯಾಂಕ್ ಖಾತೆ ಜಪ್ತಿ ಬಗ್ಗೆ ತಡೆಯಾಜ್ಞೆ ತರುವ ಪ್ರಕ್ರಿಯೆ ಒಂದು ತಿಂಗಳಿನಿಂದ ನಡೆಯುತ್ತಿ ದ್ದರೂ ಯಾರದೇ ಗಮನಕ್ಕೆ ತರದಿರುವದು ಸರಿಯಲ್ಲ. ಪೌರಾಯುಕ್ತರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಇದಕ್ಕೆ ಅವರೇ ನೇರ ಹೊಣೆ ಎಂದು ಆರೋಪಿಸಿ ದರು.

ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ವಿಚಾರ ಇಷ್ಟೊಂದು ಗಂಭೀರವಾಗಿರುವಾಗ ಸದಸ್ಯರುಗಳ ಗಮನಕ್ಕೆ ಯಾಕೆ ತಂದಿಲ್ಲ. ಹಿರಿಯ ಸದಸ್ಯರಾಗಿ ತನಗೇ ವಿಚಾರ ಗೊತ್ತಿಲ್ಲ. ಇದು ಖಂಡನೀಯವೆಂದರು. ಸದಸ್ಯೆ ತಜಸ್ಸುಂ ಮತ್ತಿತರರು ಮಾತನಾಡಿ, ಸಣ್ಣ ಪುಟ್ಟ, ಅಭಿವೃದ್ಧಿ ಕೆಲಸಗಳಿಗೆ ಹಣ ಕೇಳಿದರೆ, ಅನುದಾನವಿಲ್ಲವೆಂದು ಹೇಳುತ್ತಾರೆ. ಇಲ್ಲಿ ನೋಡಿದರೆ ನಗರಸಭೆ ಹಣವೆಲ್ಲ ಪೋಲಾಗು ತ್ತಿದೆಯೆಂದು ಆರೋಪಿಸಿದರು.

ಮಾಹಿತಿ ಬಯಸಿದ ಸಂದರ್ಭ ಮಾತನಾಡಿದ ಪೌರಾಯುಕ್ತರು ಎಲ್ಲಾ ಗುತ್ತಿಗೆದಾರರು ಭವಿಷ್ಯ ನಿಧಿ ಪಾವತಿ ಮಾಡಬೇಕೆಂಬ ನಿಯಮವಿದೆ. ಪಾವತಿಯಾಗದ್ದರಿಂದ ಕಾರ್ಮಿಕ ನ್ಯಾಯಾಲಯ ಸ್ವಯಂ ಮೊಕದ್ದಮೆ ದಾಖಲಿಸಿಕೊಂಡ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದೆ. ಹಾಗಾಗಿ ತ್ವರಿತವಾಗಿ ತಡೆಯಾಜ್ಞೆ ತರಬೇಕಾದುದರಿಂದ ಕಾನೂನು ಸಲಹೆ ಪಡೆದು ತಡೆಯಾಜ್ಞೆ ತಂದಿರುವದಾಗಿ ಹೇಳಿದರು. ಅಧ್ಯಕ್ಷೆ ಶ್ರೀಮತಿ ಬಂಗೇರ ಮಾತನಾಡಿ, ನಗರ ಸಭೆಯ ಎಲ್ಲಾ ತಪ್ಪುಗಳಿಗೆ ಆಯುಕ್ತರೇ ಕಾರಣ, ಅವರ ವಿರುದ್ಧ ನಿರ್ಣಯ ಕೈಗೊಳ್ಳಲು ಸಲಹೆ ನೀಡುವಂತೆ ಸದಸ್ಯರಲ್ಲಿ ಕೋರಿದರು.

ಜಪ್ತಿ ಮಾಡಿದ ಮೇಲೆ ತಡೆ ಯಾಜ್ಞೆ ತಂದು ಪ್ರಯೋಜನವಾದರೂ ಏನೂ ಎಂದು ಪ್ರಶ್ನಿಸಿದ ಸದಸ್ಯರುಗಳು ಇದಕ್ಕೆ ಪೌರಾಯುಕ್ತರು ಹಾಗೂ ಲೆಕ್ಕಾಧಿಕಾರಿಗಳನ್ನು ಹೊಣೆಗಾರರ ನ್ನಾಗಿ ಮಾಡಬೇಕು. ನ್ಯಾಯಾಲಯದ ಪ್ರಕ್ರಿಯೆ ಮುಗಿಯುವವರೆಗೆ ವಿಧಿಸ ಲಾಗುವ ಬಡ್ಡಿಯನ್ನು ಅವರುಗಳೇ ಭರಿಸುವಂತಾಗಬೇಕೆಂದು ಆಗ್ರಹಿಸಿ ದರು. ಅಂತಿಮವಾಗಿ ಆಡಳಿತ ಸದಸ್ಯ ಕೆ.ಎಂ. ಗಣೇಶ್ ಅವರ ಸಲಹೆಯಂತೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.