ಕುಶಾಲನಗರ, ಜೂ. 30: ಚಿಕ್ಲಿಹೊಳೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು ಜಲಾಶಯ ಬಹುತೇಕ ಭರ್ತಿಯಾಗಿದೆ. ಹೆಚ್ಚುವರಿ ನೀರು ಕಾಲುವೆ ಮೂಲಕ ನದಿಗೆ ಹರಿಯಲಾರಂಭಿಸಿದೆ.

ಜಿಲ್ಲೆಯ ಪುಟ್ಟ ಜಲಾಶಯವಾದ ಚಿಕ್ಲಿಹೊಳೆ ಜಲಾಶಯದ ಗರಿಷ್ಠ ಮಟ್ಟ 872.6 ಅಡಿಗಳಾಗಿದ್ದು, ಅಣೆಕಟ್ಟಿನಲ್ಲಿ 0.18 ಟಿಎಂಸಿ ನೀರು ಸಂಗ್ರಹವಾಗಿದೆ. 30 ಕ್ಯುಸೆಕ್ಸ್ ಪ್ರಮಾಣ ನೀರು ಒಳಹರಿವಿದ್ದು ಹೆಚ್ಚುವರಿ ನೀರು ಅಣೆಕಟ್ಟಿನಿಂದ ಹೊರಬೀಳುವ ನೀರಿನ ದೃಶ್ಯ ನಯನಮನೋಹರವಾಗಿ ಗೋಚರಿಸುತ್ತಿದೆ.

ಹಾರಂಗಿ ಜಲಾಶಯಕ್ಕೆ ಒಂದು ತಿಂಗಳ ಅವಧಿಯಲ್ಲಿ 2.7 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ. ಜಲಾಶಯದಲ್ಲಿ ಇದೀಗ 3.4 ಟಿಎಂಸಿ ನೀರಿನ ಸಂಗ್ರಹವಿದ್ದು ಜಲಾಶಯಕ್ಕೆ ಗುರುವಾರ ಸಂಜೆಯ ವೇಳೆಗೆ 4177 ಕ್ಯೂಸೆಕ್ಸ್ ಪ್ರಮಾಣದ ನೀರಿನ ಒಳಹರಿವು ಕಂಡುಬಂದಿದೆ.

ಜೂನ್ ತಿಂಗಳ ಅವಧಿಯಲ್ಲಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಒಟ್ಟು 131.80 ಮಿಮೀ ಪ್ರಮಾಣದ ಮಳೆ ಬಿದ್ದ ಬಗ್ಗೆ ವರದಿಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಗೆ 280.8 ಮಿಮೀ ಪ್ರಮಾಣದ ಮಳೆ ಬಿದ್ದ ಬಗ್ಗೆ ದಾಖಲೆ ಕಂಡುಬಂದಿದೆ. ಈ ಬಾರಿ ಮುಂಗಾರು ಮಳೆ ವಿಳಂಭವಾದ ಹಿನ್ನಲೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕ್ಷೀಣಿಸಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು ಇದೀಗ 2831.60 ಅಡಿಗಳಷ್ಟು ನೀರು ಕಂಡುಬಂದಿದ್ದು ಜಲಾಶಯದ ಗರಿಷ್ಠ ಸಂಗ್ರಹ ಪ್ರಮಾಣ 8.5 ಟಿಎಂಸಿಯಾಗಿದೆ.

ಗುರುವಾರ ಸಂಜೆಯ ವೇಳೆಗೆ ಜಲಾಶಯದಲ್ಲಿ 3.4 ಟಿಎಂಸಿ ಪ್ರಮಾಣದ ನೀರು ಸಂಗ್ರಹವಾಗಿದೆ.