ಕೂಡಿಗೆ, ಜು. 28: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಪ್ರದೇಶದಲ್ಲಿ ಕಳೆದ 30 ವರ್ಷಗಳ ಹಿಂದೆ ತಮ್ಮ ಜಮೀನುಗಳನ್ನ ಕಳೆದುಕೊಂಡ ಅತ್ತೂರು, ಯಡವನಾಡು ಗ್ರಾಮಸ್ಥರು ಭರವಸೆಗಳನ್ನು ಎದುರು ನೋಡುವಂತಾಗಿದೆ.
ಈಗಿರುವ ಸ್ಥಳವನ್ನು ಕಂದಾಯ ಗ್ರಾಮವನ್ನಾಗಿಸುವ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಕಳೆದ 20 ವರ್ಷಗಳಿಂದಲೂ ಜಿಲ್ಲೆಯ ಉಸ್ತುವಾರಿ ಸಚಿವರುಗಳಿಗೆ, ಕ್ಷೇತ್ರದ ಶಾಸಕರುಗಳಿಗೆ ರಾಜ್ಯ ಸರ್ಕಾರದ ಕಂದಾಯ ಕಾರ್ಯದರ್ಶಿಗಳಿಗೆ, ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಈ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿಸುವ ಬಗ್ಗೆ ಸರ್ವೇ ಕಾರ್ಯಕ್ಕೆ ಆದೇಶಿಸದೇ ಅರಣ್ಯ ಇಲಾಖೆಯವರು ಮೀಸಲು ಅರಣ್ಯ ಎಂಬ ನೆಪದಲ್ಲಿ ಅನೇಕ ಎಡರು-ತೊಡರುಗಳನ್ನು ನೀಡುತ್ತಾ ಬಂದರೂ ಇದುರೆಗೂ ತಮ್ಮ ಈ ಎರಡು ಗ್ರಾಮಗಳ ಅಳಲುಗಳಿಗೆ ಸ್ಪಂದಿಸದಿರುವ ಜನಪ್ರತಿನಿಧಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಎರಡು ಗ್ರಾಮಗಳನ್ನೊಳಗೊಂಡಂತೆ ನೂರಾರು ಗ್ರಾಮಸ್ಥರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ಜಿಲ್ಲೆಯ 4 ಉಸ್ತುವಾರಿ ಸಚಿವರುಗಳಿಗೆ ಕಂದಾಯ ಗ್ರಾಮವನ್ನಾಗಿಸುವ ಬಗ್ಗೆ ಮನವಿ ಸಲ್ಲಿಸಿ, ಸಮರ್ಪಕವಾಗಿ ಕ್ರಮ ಕೈಗೊಳ್ಳುವದರ ಬಗ್ಗೆ ಬೇಡಿಕೆಯಿಟ್ಟರೂ ಇದುವರೆಗೂ ಯಾವದೇ ಕ್ರಮ ಕೈಗೊಳ್ಳದೆ ನಿರಾಶ್ರಿತರ ಗ್ರಾಮವನ್ನಾಗಿ ಮಾಡಿರುವದು ಸರಿಯಾದ ಕ್ರಮವಲ್ಲ ಎಂದು ಗ್ರಾಮದ ಪ್ರಮುಖರುಗಳಾದ ಲವ ನಂಜಪ್ಪ, ಯೋಗೇಶ್, ಮನೋಜ್, ಶ್ರೀನಿವಾಸ್, ಮಾದಪ್ಪ ಸೇರಿದಂತೆ ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಇತ್ತೀಚೆಗೆ ಹಾರಂಗಿ ಪ್ರವಾಸಿ ಮಂದಿರದಲ್ಲಿ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿರುವ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿ ತೆರಳಿರುವದಾಗಿ ಅವರು ತಿಳಿಸಿದ್ದಾರೆ.
ಈ ಗ್ರಾಮ ಮುಳುಗಡೆಯ ಪ್ರದೇಶವಾಗಿದ್ದು, ಅತ್ತೂರು ಗ್ರಾಮಕ್ಕೆ ನೀರಾವರಿ ನಿಗಮದ ವತಿಯಿಂದ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ, ಯಡವನಾಡು ಗ್ರಾಮಕ್ಕೆ ಯಾವದೇ ರೀತಿಯ ಸೌಲಭ್ಯಗಳನ್ನು ಒದಗಿಸದೇ ಅನಾಥಗೊಳಿಸಿದ್ದಾರೆ ಎಂದು ಸಚಿವರ ಗಮನಕ್ಕೆ ತರಲಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳ ಒಳಗೆ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿ, ಡಿನೋಟಿಫಿಕೇಷನ್ ಕಾರ್ಯ ಪೂರ್ಣಗೊಳಿಸದಿದ್ದರೇ, ವಿಧಾನಸೌಧ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.