ಮಡಿಕೇರಿ. ಅ.15 : ಸಾವಿರಾರು ವರ್ಷಗಳ ಇತಿಹಾಸವಿರುವ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವದು ಸ್ವಾಗತಾರ್ಹವೆಂದು ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಹರೀಶ್ ಜಿ. ಆಚಾರ್ಯ ತಿಳಿಸಿದ್ದಾರೆ.
ಭಕ್ತರ ಭಾವನೆಗಳಿಗೆ ಅಡ್ಡಿ ಯಾಗುವ ಯಾವದೇ ಬೆಳವಣಿಗೆಗಳು ಜೀವನದಿ ಕಾವೇರಿಯ ಕ್ಷೇತ್ರ ತಲಕಾವೇರಿಯಲ್ಲಿ ಆಗಬಾರದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಬ್ರಹ್ಮಗಿರಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡ ಬೇಕೆಂದು ಸಂಸ್ಥೆ ಮಾಡಿಕೊಂಡ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿದೆ ಎಂದು ಹೇಳಿದ್ದಾರೆ. ಪ್ರವಾಸಿ ಗರು ಧಾರ್ಮಿಕ ಕೇಂದ್ರಗಳ ನಿಯಮ ವನ್ನು ಉಲ್ಲಂಘಿಸು ತ್ತಿದ್ದರೆ ಅವುಗಳಿಗೆ ಕಡಿವಾಣ ಹಾಕಬೇಕೆ ಹೊರತು ಭಕ್ತರ ಹಕ್ಕುಗಳನ್ನು ಕಸಿದುಕೊಳ್ಳುವದು ಎಷ್ಟು ಸರಿ ಎಂದು ಹರೀಶ್ ಆಚಾರ್ಯ ಪ್ರಶ್ನಿಸಿದ್ದಾರೆ. ಹಿಂದಿನ ದಿನಗಳಲ್ಲಿ ಮೂಲ ನಿವಾಸಿಗಳು ಹಾಗೂ ಭಕ್ತರು ಬ್ರಹ್ಮಗಿರಿಗೆ ಹೋಗಿ ಪ್ರಾರ್ಥಿಸುವದು, ಪ್ರಕೃತಿ ಸೌಂದರ್ಯ ನೋಡಿ ಸಂತೋಷ ಪಡುವದು ಸಾಮಾನ್ಯವಾಗಿತ್ತು ಎಂದಿದ್ದಾರೆ.