ಗೋಣಿಕೊಪ್ಪಲು, ಜ.22: ಬಾಳೆಲೆ-ದೇವನೂರು ವ್ಯಾಪ್ತಿಯಲ್ಲಿ ತಾ.19 ಮತ್ತು ತಾ.20 ರಂದು ಪ್ರತ್ಯಕ್ಷವಾಗಿದ್ದ ಹುಲಿ ಅಲ್ಲಿನ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಅವರ ಲೈನ್ಮನೆಯ ಕಾರ್ಮಿಕ ಬೊಳ್ಳ ಅಲಿಯಾಸ್ ಕರಿಯ (55) ಎಂಬಾತನ ಮೇಲೆ ಧಾಳಿ ಮಾಡಿ ಕಾಲ್ಕಿತ್ತಿದ್ದ ಹುಲಿ ಇಂದು ನಿಟ್ಟೂರು ಗ್ರಾಮದ ಚೆಕ್ಕೇರ ಅಯ್ಯಪ್ಪ ಅವರ ಗದ್ದೆ ಸಮೀಪ ಲಕ್ಷಣ ತೀರ್ಥ ನದಿ ದಡದ ಪೈಸಾರಿ ಪ್ರದೇಶದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಗೋಚರ ವಾಗಿದೆ. ಸಮೀಪದಲ್ಲಿಯೇ ಕಾಫಿ ಕಣದಲ್ಲಿ ಕಾಫಿ ಕಾವಲಿಗೆ ಸೂರ್ಯ ಅಯ್ಯಪ್ಪ ಅವರು ಸುಮಾರು 10 ಮಂದಿ ಕಾರ್ಮಿಕರನ್ನು ನಿಯೋಜಿಸಿದ್ದು, ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಶೌಚಕ್ಕಾಗಿ ನದಿಗೆ ತೆರಳಿದ ಸಂದರ್ಭ ಸುಮಾರು 10 ವರ್ಷ ಪ್ರಾಯದ ಗಂಡು ಹುಲಿ ಸತ್ತು ಬಿದ್ದಿರುವದು ಗೋಚರವಾಗಿದೆ.
ಹುಲಿ ಸಂರಕ್ಷಿತ ಅಭಯಾರಣ್ಯ ದಲ್ಲಿ ಆಗಿಂದಾಗ್ಗೆ ತಮ್ಮ ಸರಹದ್ದಿನ ಅಧಿಪತ್ಯಕ್ಕಾಗಿ, ಆಹಾರಕ್ಕಾಗಿ, ಸಂಗಾತಿಗಾಗಿ ಗಂಡು ಹುಲಿಗಳ ನಡುವೆ ಕಾದಾಟ ಸಾಮಾನ್ಯ. ಇಲ್ಲಿ ಬಲಿಷ್ಠ ಹುಲಿಗೆ ಮಾತ್ರ ವಾಸ್ತವ್ಯಕ್ಕೆ ಅವಕಾಶ. ಕಾದಾಟದಲ್ಲಿ ಸೋಲ ನ್ನಪ್ಪಿದ ಹುಲಿ ಅಲ್ಲಿಂದ ಪಲಾಯನ ಮಾಡುವದು ಅನಿವಾರ್ಯ. ಇದೀಗ ಮೃತಪಟ್ಟ ಹುಲಿಯೂ ಇತ್ತೀಚೆಗೆ ನಾಗರಹೊಳೆಯಲ್ಲಿ ಕಾದಾಟ ನಡೆಸಿದ್ದು ಒಂದು ಕಣ್ಣನ್ನು ಕಳೆದುಕೊಂಡಿದೆ. ಮೂಗಿನ ಮೇಲ್ಭಾಗ, ತಲೆ, ಹೊಟ್ಟೆ ಭಾಗದಲ್ಲೆಲ್ಲಾ ಮಾರಣಾಂತಿಕ ಗಾಯ ಕಂಡು ಬಂದಿದ್ದು, ಹಸಿವನ್ನು ತಣಿಸಲು ದೇವನೂರು ಗ್ರಾಮ ಪ್ರವೇಶಿಸಿರ ಬಹುದು ಎಂದು ಅರಣ್ಯ ಇಲಾಖಾಧಿಕಾರಿಗಳು ಅಂದಾಜಿಸಿ ದ್ದಾರೆ. ಇದೇ ಸಂದರ್ಭ ಹುಲಿಯು ಅಡ್ಡೇಂಗಡ ನವೀನ್ ಅವರ ಎರಡು ಹಸು ಹಾಗೂ ಮಲ್ಚೀರ ರಂಜನ್ ಅವರ ಒಂದು ಹಸುವಿನ ತಲೆ ಭಾಗ ಹಾಗೂ ಹೊಟ್ಟೆ ಭಾಗಕ್ಕೆ ತನ್ನ ಪಂಜಿನಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ, ಕೊಲ್ಲಲು ವಿಫಲ ಯತ್ನ ನಡೆಸಿತ್ತು. ಹುಲಿಯ ಮುಖದ ಭಾಗದಲ್ಲಿ ಗಂಭೀರ ಗಾಯವಾದ ಹಿನ್ನೆಲೆ ಭಾರೀ ಗಾತ್ರದ ಬೇಟೆ ಪ್ರಾಣಿಯನ್ನು ಕೊಂದು ಭಕ್ಷಿಸಲು ವಿಫಲವಾಗಿತ್ತು. ಇದೇ ಸಂದರ್ಭ ಹಸಿವು ತಣಿಸಲು ಮುಳ್ಳು ಹಂದಿಯೊಂದನ್ನು ಬೇಟೆಯಾಡಿ ಶೇ.80 ಭಾಗ ಭಕ್ಷಣೆ ಮಾಡಿದ್ದು, ಹುಲಿ ಬಾಯಿಯ ಸಮೀಪವೇ ಮುಳ್ಳು ಹಂದಿಯ ಮುಳ್ಳೊಂದು ಚುಚ್ಚಿಕೊಂಡಿದೆ. ಉಳಿದ ಮುಳ್ಳು ಹಂದಿ ಮಾಂಸದ ಭಾಗವನ್ನು ಮಾಜಿ ಜಿ.ಪಂ.ಸದಸ್ಯ ಅರಮಣಮಾಡ ರಂಜನ್ ಇಂದು ಹುಲಿ ಸಾವನ್ನಪ್ಪಿದ ಸ್ಥಳಕ್ಕೆ ತಂದು ಪ್ರದರ್ಶಿಸಿದರು. ಇದು ಅಲ್ಲದೆ, ಹುಲಿ ಸಾವನ್ನಪ್ಪಿದ ಸ್ಥಳದ 10 ಮೀಟರ್ ಅಂತರದಲ್ಲಿ ಕಾಡುಹಂದಿಯ ಕಳೇಬರ ಕಂಡು ಬಂದಿದ್ದು, ಶೇ.50 ಭಾಗ ಹುಲಿರಾಯ ಭಕ್ಷಣೆ ಮಾಡಿದೆ ಎನ್ನಲಾಗುತ್ತಿದೆ.
ಹುಲಿಯ ಮೈಯಲ್ಲೆಲ್ಲಾ ಎದುರಾಳಿ ಹುಲಿ ಉಗುರಿನ ಗಾಯವಿದ್ದು, ಅಲ್ಲಲ್ಲಿ ಕೀವು ತುಂಬಿಕೊಂಡಿದೆ. ದೇವನೂರು ತಾರಾ ಅಯ್ಯಮ್ಮ ಅವರ ಕಾಫಿ ತೋಟದಿಂದ ತಾ.20 ರಂದು ಬೆಳಗ್ಗಿನ ಜಾವ ಧಾಳಿ ನಡೆಸಿ ಲಕ್ಷ್ಮಣ ತೀರ್ಥ ನದಿ ದಾಟಿ ಸುಮಾರು 1 ಕಿ.ಮೀ. ಕ್ರಮಿಸಿ ಸರಹದ್ದಿನಲ್ಲಿರುವ ಬಿದಿರು ಕಾಡು ಪೈಸಾರಿ ಜಾಗದಲ್ಲಿ ಎರಡು ಮೂರು ಸ್ಥಳದಲ್ಲಿ ಆಶ್ರಯ ಪಡೆದ ಕುರುಹು ಇದೆ. ಜತೆಗೆ ಗಾಯದ ನೋವಿನಿಂದ ನರಳಾಟದೊಂದಿಗೆ ತಾ.21 ರಂದು ರಾತ್ರಿಯೇ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಹುಲಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದ 80 ಮಂದಿಯ ತಂಡ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿ, ಅಭಯಾರಣ್ಯದಲ್ಲಿ, ಕುರುಚಲು ಕಾಡುಗಳ ನಡುವೆ ‘ದ್ರೋಣ್’ ಆಧುನಿಕ ತಂತ್ರಜ್ಞಾನದೊಂದಿಗೆ ಹುಡುಕಾಟ ನಡೆಸಿದರೂ, ಗಾಯಗೊಂಡ ಹುಲಿ ಮತ್ತೆ ಕಾಡಿಗೆ ತೆರಳದೆ ನಿಟ್ಟೂರು ಗ್ರಾಮದೆಡೆಗೆ ಬಂದಿದೆ. ಇದರಿಂದಾಗಿ 14 ಕ್ಯಾಮೆರಾ ಕಣ್ಣಿಗೂ ಬೀಳದೆ, ಅಭಿಮನ್ಯು, ದ್ರೋಣ ಹಾಗೂ ಕೃಷ್ಣ ಸಾಕಾನೆಯೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರೂ ಹುಲಿಯ ಇರುವು ಪತ್ತೆಯಾಗಿರಲಿಲ್ಲ. ಅಭಯಾರಣ್ಯದಲ್ಲಿ ಸಾಧಾರಣವಾಗಿ 8-12 ವರ್ಷ ಮಾತ್ರ ಹುಲಿ ಬದುಕಿ ಉಳಿದರೆ, ಮೃಗಾಲಯ ಇತ್ಯಾದಿ ಪ್ರಾಣಿ ಸಂಗ್ರಹಾಲಯದಲ್ಲಿ ಒಂದು ಹುಲಿಯ ಸರಾಸರಿ ಆಯಸ್ಸು 20 ವರ್ಷ ಎನ್ನಲಾಗುತ್ತಿದೆ.
ನಾಗರಹೊಳೆಯ ಹುಲಿ ಯೋಜನೆಯ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್ ಸಮ್ಮುಖದಲ್ಲಿ ಹುಲಿ ಕಳೇಬರ ಪರೀಕ್ಷೆಯನ್ನು ಹುಣಸೂರು ವನ್ಯಜೀವಿ ವೈದ್ಯ ಡಾ. ಉಮಾಶಂಕರ್ ನೆರವೇರಿಸಿದರು. ಬಳಿಕ ಕಟ್ಟಿಗೆಯನ್ನು ಪೇರಿಸಿ, ಸುಡಲಾಯಿತು. ಹುಲಿಗಳ ನಡುವಿನ ಕಾದಾಟದಿಂದಾಗಿಯೇ ಮಾರಣಾಂತಿಕ ಗಾಯಗಳುಂಟಾಗಿ ಸಾವನ್ನಪ್ಪಿರುವದಾಗಿ ಡಾ. ಉಮಾಶಂಕರ್ ತಿಳಿಸಿದ್ದಾರೆ. ಸ್ಥಳದಲ್ಲಿ ಕೊಡಗು ವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಕೊಡಗು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಎಂ.ಎಂ.ಜಯ, ನಾಗರಹೊಳೆ ಪ್ರಬಾರ ಎಸಿಎಫ್ ಪ್ರಸನ್ನಕುಮಾರ್, ತಿತಿಮತಿ, ವೀರಾಜಪೇಟೆ, ಕಲ್ಲಳ ವಲಯದ ವಲಯಾರಣ್ಯಾಧಿ ಕಾರಿಗಳಾದ ಶಿವಕುಮಾರ್, ಗೋಪಾಲ್, ಕಿರಣ್ಕುಮಾರ್, ಡಬ್ಲ್ಯು ಟಿ ಓ ವೈದ್ಯ ಡಾ.ಶಾಂತನು, ವನ್ಯಜೀವಿ ವೈದ್ಯರಾದ ಡಾ. ನಾಗರಾಜ್, ಡಾ. ಮದನ್, ವೀರಾಜಪೇಟೆ ಅರಣ್ಯಾಧಿ ಕಾರಿ ಕೆ.ಕೆ.ಪೂವಯ್ಯ, ಬಾಳೆಲೆ ಪೆÇಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ನಿಟ್ಟೂರು ಗ್ರಾ.ಪಂ.ಅಧ್ಯಕ್ಷೆ ಕಾಡ್ಯಮಾಡ ಅನಿತಾ ಸಮ್ಮುಖದಲ್ಲಿ ಗ್ರಾಮಸ್ಥರಾದ ಚೆಕ್ಕೇರ ಸೂರ್ಯ ಅಯ್ಯಪ್ಪ, ಅರಮಣಮಾಡ ರಂಜನ್, ಅಳಮೇಂಗಡ ಬೋಸ್ ಮಂದಣ್ಣ ಉಪಸ್ಥಿತಿಯಲ್ಲಿ ಹುಲಿಯ ಪಂಚನಾಮೆ ಕಾರ್ಯ ಪೂರ್ಣಗೊಳಿಸಲಾಯಿತು.