ಮಡಿಕೇರಿ, ಜ. 20: ಅಂಗನವಾಡಿ ಸೇರಿದಂತೆ ವಿವಿಧ ಯೋಜನೆಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಹಲವು ಬೇಡಿಕೆಗಳನ್ನು ಮುಂದಿಟ್ಟು, ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಮುಷ್ಕರ ಹಮ್ಮಿಕೊಂಡಿದ್ದು, ಜಿಲ್ಲಾ ಕೇಂದ್ರದಲ್ಲಿ ನಡೆಯಿತು.
ವಿವಿಧ ಬೇಡಿಕೆಗಳು
ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಕ್ಷರ ದಾಸೋಹ ಯೋಜನೆ, ಆಶಾ ಕಾರ್ಯಕರ್ತೆ ಯರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ, ಕಸ್ತೂರಿ ಬಾ ಗಾಂಧಿ ಬಾಲ ವಿಕಾಸ ವಿದ್ಯಾಲಯ, ಉದ್ಯೋಗ ಖಾತ್ರಿ ಯೋಜನೆಗಳನ್ನು ಬಲಿಷ್ಟಪಡಿಸಬೇಕು, ವಿವಿಧ ಯೋಜನೆಗಳಿಗೆ ಕಡಿತವಾಗಿರುವ ರೂ. 3 ಲಕ್ಷ ಕೋಟಿ ಅನುದಾನವನ್ನು ವಾಪಸ್ಸು ನೀಡಬೇಕು, 45-46ನೇ ಐಎಲ್ಸಿ ಶಿಫಾರಸಿನಂತೆ ನೌಕರರೆಂದು ಪರಿಗಣಿಸಿ ಕನಿಷ್ಟ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಡಬೇಕು, ಈ ಎಲ್ಲಾ ಯೋಜನೆಗಳನ್ನು ಖಾಯಂ ಮಾಡಿ ಈ ಯೋಜನೆಗಳ ಫಲಾನುಭವಿಗಳನ್ನು ಉಳಿಸಬೇಕು ಎಂದು ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಕಾರ್ಯದರ್ಶಿ ಪಿ.ಆರ್. ಭರತ್, ಉಪಾಧ್ಯಕ್ಷ ಎ. ಮಹದೇವ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ.ಪಿ. ಕಾವೇರಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಐಟಿಯು ಅನುದಾನಿತ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಪಿ.ಎಂ. ಕಾವೇರಿ, ಸುಮಿತ್ರ, ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ. ಕುಸುಮ, ಮಡಿಕೇರಿ ತಾಲೂಕು ಅಧ್ಯಕ್ಷೆ ತುಳಸಿ ಹಾಗೂ ಇನ್ನಿತರರು ಇದ್ದರು.