ನಾಪೆÇೀಕ್ಲು, ಆ. 2: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮಸ್ಥರಿಗೆ ಬೇಂಗೂರು ಗ್ರಾಮಕ್ಕೆ ತೆರಳಬೇಕಾದರೆ ದೋಣಿಯೇ ಗತಿ ಎಂಬಂತಾಗಿದೆ.
ಮಳೆಗಾಲದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾವೇರಿ ನದಿಯಲ್ಲಿ ಪ್ರವಾಹ ಉಂಟಾದಾಗ ದೋಣಿಯನ್ನೇ ಬಳಸಬೇಕಾಗುತ್ತದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಕೆಲವು ವರ್ಷಗಳ ಹಿಂದೆ ಒದಗಿಸಲಾದ ಫೈಬರ್ ದೋಣಿಯ ಮೂಲಕ ನದಿಯನ್ನು ಕ್ರಮಿಸಬೇಕು. ಕಳೆದ ಐದು ವರ್ಷಗಳಿಂದ ಬೇಂಗೂರು ಗ್ರಾಮದ 70ರ ಹಿರಿಯ ಕೂಡಕಂಡಿ ಪುಟ್ಟಪ್ಪ ದೋಣಿ ಚಾಲನೆ ಮಾಡುತ್ತಿದ್ದು, ಗ್ರಾಮಸ್ಥರು ಅವರನ್ನೇ ನಂಬಿದ್ದಾರೆ.
ಇದು ದೋಣಿ ಕಡವು ಎಂಬ ಸ್ಥಳ. ಸಮೀಪದ ಪಡಿಯಾಣಿ ಗ್ರಾಮ ಹಾಗೂ ಬೇಂಗೂರು ಗ್ರಾಮಗಳ ಸರಹದ್ದು.
ಇಲ್ಲಿ ಸುಮಾರು 200 ಮನೆಗಳಿದ್ದು, ಗ್ರಾಮಗಳಿದ್ದು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಸಾಧಿಸಬೇಕಾಗದೆ ದೋಣಿ ಮೂಲಕವೇ ಸಾಗಬೇಕಾಗಿದೆ. ಬ್ರಿಟಿಷರ ಕಾಲದಲ್ಲಿ ಇಲ್ಲಿನ ಕಾವೇರಿ ನದಿಗೆ ಸೇತುವೆ ನಿರ್ಮಿಸಲು ಶಂಕುಸ್ಥಾಪನೆಯಾಗಿದ್ದು, ಬಳಿಕ ಸೇತುವೆ ನಿರ್ಮಾಣದ ಕಾಮಗಾರಿ ಕಾರ್ಯಗತಗೊಳ್ಳದೆ ನೆನೆಗುದಿಗೆ ಬಿದ್ದಿತ್ತು ಎಂದು ಹಿರಿಯರು ಹೇಳುತ್ತಾರೆ.
ಕೆಲವು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳು ದೋಣಿ ಕಡುವಿನಲ್ಲಿ ಸೇತುವೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.