ಬೆಂಗಳೂರು, ನ. 29: ವಿಧಾನ ಪರಿಷತ್ನಲ್ಲಿ ಇಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಭತ್ತ ಕೃಷಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೃಷಿ ಸಚಿವ ಕೃಷ್ಣಭೈರೇಗೌಡ ಅವರ ಮುಂದಿಟ್ಟರು.ಕೊಡಗು ಜಿಲ್ಲೆಯಲ್ಲಿ ಭತ್ತ ನಾಟಿಗೆ ಒಳಪಡದ ಜಮೀನುಗಳೆಷ್ಟು, ಒಳಪಡದಿರುವದಕ್ಕೆ ಕಾರಣಗಳೇನು ಎಂದು ವೀಣಾ ವಿವರ ಬಯಸಿದರು. ಪ್ರತಿಕ್ರಿಯಿಸಿದ ಸಚಿವರು 2016ರ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ 70225 ಎಕರೆ ಭೂಮಿ ಭತ್ತದ ನಾಟಿಗೆ ಒಳಪಟ್ಟಿದ್ದು, 17218 ಎಕರೆ ಭತ್ತದ ವಿಸ್ತೀರ್ಣ ನಾಟಿಯಾಗದೆ ಉಳಿದಿದೆ ಎಂದರು.
ಕೊಡಗಿನಲ್ಲಿ ಭತ್ತದ ನಾಟಿಗೆ ನೀರಿನ ಅಭಾವ ಉಂಟಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೊಡಗಿನಲ್ಲಿ ಭತ್ತದ ಬೆಳೆಗೆ
ನೀರಿನ ಅಭಾವ ಉಂಟಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಮಳೆ ಕೊರತೆಯಿಂದ ಸೋಮವಾರಪೇಟೆ ಹಾಗೂ (ಮೊದಲ ಪುಟದಿಂದ) ವೀರಾಜಪೇಟೆ ತಾಲೂಕುಗಳಲ್ಲಿ ಸುಮಾರು 29034 ಎಕರೆ ಪ್ರದೇಶ ಹಾನಿಗೊಳಪಟ್ಟಿರುವ ಬಗ್ಗೆ ವರದಿಯಾಗಿದ್ದು, ಬೆಳೆ ಹಾನಿ ಪರಿಹಾರ ನೀಡುವ ಸಲುವಾಗಿ ರಾಷ್ಟ್ರೀಯ ವಿಪತ್ತು ಪ್ರಕ್ರಿಯೆ ನಿಧಿಯಡಿಯಲ್ಲಿ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಚಿವರಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ವೀಣಾ ಅಚ್ಚಯ್ಯ ಕೊಡಗಿನಲ್ಲಿ ನೀರಿನ ಅಭಾವದೊಂದಿಗೆ ಕಾರ್ಮಿಕರ ಸಮಸ್ಯೆಯು ಇದೆ. ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್ಗೂ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.