ಮಡಿಕೇರಿ, ಜ.16: ಫಸಲು ಭಿಮಾ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಎಲ್ಲಾ ಕೃಷಿಕರು ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸಲಹೆ ಮಾಡಿದರು.

ರೈತರ ಆರ್ಥಿಕ ಆದಾಯ ಹೆಚ್ಚಳ ಕುರಿತು ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಜಲ ಸೇರಿದಂತೆ ವಿವಿಧ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗುವತ್ತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ, ಬಾಳೆ, ಮೀನುಗಾರಿಕೆ ಹೀಗೆ ನಾನಾ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗೆ ವಿಫುಲ ಅವಕಾಶಗಳಿದ್ದು, ಇವುಗಳನ್ನು ಬಳಸಿಕೊಳ್ಳುವತ್ತ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ರೈತರು ಬೆಳೆದ ಪದಾರ್ಥಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಗೋದಾಮು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದೆ. ಬೆಳೆದ ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರೆಯಬೇಕಿದೆ ಎಂದು ಅವರು ನುಡಿದರು.

ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ.ನಾಣಯ್ಯ ಮಾತನಾಡಿ ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು, ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಮಾರುಕಟ್ಟೆ ಸೌಲಭ್ಯಗಳು ಮತ್ತಷ್ಟು ತಲುಪಬೇಕು ಎಂದು ಹೇಳಿದರು.

ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯಗಳು ದೊರೆತಾಗ ರೈತರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಬೇಕಿದೆ. ಜೊತೆಗೆ ಬೆಳೆದ ಪದಾರ್ಥಗಳನ್ನು ಸಂಗ್ರಹಿಸಲು ಉತ್ತಮ ಗೋದಾಮುಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಬ್ಯಾಂಕುಗಳ ಪಾತ್ರ ಕುರಿತು ಮಾತನಾಡಿದರು. ಕೃಷಿಕರಾದ ಬೋಸ್ ಮಂದಣ್ಣ ಅವರು ಕೃಷಿಕರ ಆದಾಯ ಹೆಚ್ಚಿಸುವಲ್ಲಿ ಮಾರುಕಟ್ಟೆಗಳ ಪಾತ್ರ ಕುರಿತು ಮಾತನಾಡಿದರು. ವಿಜ್ಞಾನಿಗಳಾದ ಡಾ.ಅಂಕೇಗೌಡ, ಡಾ.ಶಂಕರ್, ಎಂ.ಜಗದೀಶನ್ ಅವರು ಹಲವು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ.ದೇವಯ್ಯ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ನಾಗರಾಜು, ಬ್ಯಾಂಕ್ ಅಧಿಕಾರಿಗಳು ಇತರರು ಹಲವು ಮಾಹಿತಿ ನೀಡಿದರು.