ಸೋಮವಾರಪೇಟೆ, ಜು. 15: ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರ ಪೇಟೆ ವ್ಯಾಪ್ತಿಯಲ್ಲಿ ಬಿಳಿ ಕಾಂಡಕೊರಕ (ಬೋರರ್)ದ ಹಾವಳಿ ಮಿತಿಮೀರಿದ್ದು, ಅರೇಬಿಕಾ ಕಾಫಿ ಅವಸಾನದತ್ತ ಹೆಜ್ಜೆ ಹಾಕುತ್ತಿದೆ. ಕಾಫಿ ಗಿಡದ ಕಾಂಡಕ್ಕೆ ತಗುಲಿರುವ ಬಿಳಿ ಕಾಂಡಕೊರಕ ಕೀಟ ಅಕ್ಷರಶಃ ಬೆಳೆಗಾರರ ಬದುಕನ್ನೇ ಕೊರೆಯುತ್ತಿದೆ.
ಹಣದ ಆಸೆಗೆ ತೋಟವೇ ಬಲಿ: ಬಿಳಿ ಕಾಂಡಕೊರಕ ಕೀಟದ ಹಾವಳಿಗೆ ಕಾಫಿ ತೋಟಗಳಲ್ಲಿ ಫಸಲು ನೀಡುವ ಆರೋಗ್ಯವಂತ ಗಿಡಗಳು ನಾಶವಾಗುತ್ತಿವೆ. ರೋಗಬಾಧೆ ಇತರ ಗಿಡಗಳಿಗೂ ಹರಡುತ್ತದೆ ಎಂಬ ಕಾರಣದಿಂದ ರೋಗಪೀಡಿತ ಗಿಡಗಳನ್ನು ಕಿತ್ತು ಸುಡಲಾಗುತ್ತಿದೆ. ದೊಡ್ಡ ಕಾಫಿ ಬೆಳೆಗಾರರು ರೋಗಪೀಡಿತ ಗಿಡಗಳನ್ನು ಬುಡ ಸಹಿತ ಕಿತ್ತು ಸುಟ್ಟರೆ, ಕೆಲ ಸಣ್ಣ ಕಾಫಿ ಬೆಳೆಗಾರರು ಹಣದ ಆಸೆಯಿಂದ ರೋಗಪೀಡಿತ ಗಿಡಗಳನ್ನು ಮಾರಾಟ ಮಾಡಲು ತೋಟದ ಸಮೀಪದಲ್ಲೇ ಸಂಗ್ರಹಿಸಿಟ್ಟುಕೊಳ್ಳುತ್ತಿರುವ ಪರಿಣಾಮ, ಕೀಟಗಳು ಹಾರಿ ಆರೋಗ್ಯವಂತ ಗಿಡಗಳ ಕಾಂಡ ಸೇರುತ್ತಿರುವದರಿಂದ ತೋಟದಲ್ಲಿ ರೋಗಬಾಧೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ವರ್ಷದಿಂದ ವರ್ಷಕ್ಕೆ ತೋಟಗಳಲ್ಲಿ ಬಿಳಿ ಕಾಂಡಕೊರಕ ಕೀಟ ಬಾಧೆ ಹೆಚ್ಚಾಗಿದೆ. ಏಕರೆಯೊಂದರಲ್ಲಿ 700 ರಿಂದ 800 ಕಾಫಿ ಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ ನೂರು ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗಿವೆ. ರೋಗಪೀಡಿತ ಗಿಡಗಳನ್ನು ಕಿತ್ತು ಸುಡದಿದ್ದರೆ ಕೀಟಗಳು ಕಾಫಿ ಗಿಡದ ಕಾಂಡವನ್ನು ತಿಂದು ಮುಗಿಸಿದ ನಂತರ ಬೇರೆ ಆರೋಗ್ಯವಂತ ಗಿಡಗಳಿಗೆ ಸೇರುತ್ತವೆ. ನಂತರ ಆ ಗಿಡಗಳೂ ಸಾಯುತ್ತವೆ.
23,950 ಹೆಕ್ಟೇರ್‍ನಲ್ಲಿ ಅರೇಬಿಕಾ: ಕೊಡಗು ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 74,495 ಹೆಕ್ಟೇರ್‍ನಲ್ಲಿ ರೋಬಸ್ಟಾ, 28,030 ಹೆಕ್ಟೇರ್‍ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕು ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವದರಿಂದ 23,950 ಹೆಕ್ಟೇರ್‍ನಲ್ಲಿ ಅರೇಬಿಕಾ, 5,890 ಹೆಕ್ಟೇರ್‍ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ.
ಫಸಲಿನ ಗಿಡಕ್ಕೆ ಕೀಟ: ಸಾಧಾರಣವಾಗಿ ಬಿಳಿ ಕಾಂಡಕೊರಕದ ಕೀಟ ಹೆಚ್ಚು ಫಸಲು ಇರುವ ಗಿಡಗಳನ್ನೇ ಬಾಧಿಸುತ್ತಿದೆ. ಕಾಫಿ ಗಿಡದ ಕಾಂಡವನ್ನೇ ಕೊರೆಯುವ ಕೀಟ, ಆ ಗಿಡವನ್ನು ಸಂಪೂರ್ಣವಾಗಿ ಸಾಯಿಸಿ ಮತ್ತೊಂದು ಗಿಡಕ್ಕೆ ಹಾರುತ್ತದೆ. ಇದಕ್ಕೆ ನಿಯಂತ್ರಣ ಹಾಕದೇ ಹೋದರೆ ಒಂದೇ ವರ್ಷದಲ್ಲಿ ನೂರಾರು ಗಿಡಗಳು ನಾಶವಾಗುತ್ತವೆ. 8 ರಿಂದ 10 ವರ್ಷದ ಗಿಡಗಳಿಗೆ ರೋಗ ಬಾಧೆ ತಗುಲಿದರೆ, ಅದನ್ನು ಬುಡ ಸಹಿತ ಕಿತ್ತು, ಹೊಸ ಗಿಡ ಹಾಕಬೇಕು. ಈ ಗಿಡದಿಂದ ಫಸಲು ಪಡೆಯಲು ಕನಿಷ್ಟ 4 ವರ್ಷ ಕಾಯಬೇಕಿದೆ.
ಸಾಮೂಹಿಕ ನಿರ್ವಹಣೆಯಿಂದ ನಿಯಂತ್ರಣ: ಬಿಳಿ ಕಾಂಡಕೊರಕ (ಕ್ಸೈಲೋಟ್ರೀಕಸ್‍ಕ್ವಾಡ್ರಿಪಸ್) ಅರೇಬಿಕಾ ಕಾಫಿಯನ್ನು ಪೀಡಿಸುವ ಅತೀ ಭಯಂಕರ ಕೀಟ. ಏಪ್ರಿಲ್-ಮೇ ಮತ್ತು ಅಕ್ಟೋಬರ್-ಡಿಸೆಂಬರ್‍ನಲ್ಲಿ ಕೀಟನಾಶಕವನ್ನು ಸಿಂಪಡಿಸಬೇಕು. ಕೀಟ ಪೀಡಿತ ಗಿಡಗಳನ್ನು ಬುಡಸಹಿತ ಕಿತ್ತು ಸುಟ್ಟು ಹಾಕಬೇಕು. ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ರೋಗಬಾಧೆ ಹತೋಟಿ ಸಾಧ್ಯವೆಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಮೋಹಕ ಬಲೆ ತಂತ್ರಜ್ಞಾನ: ಇತ್ತೀಚಿನ ದಿನಗಳಲ್ಲಿ ಮೋಹಕ ಬಲೆ ತಂತ್ರಜ್ಞಾನದ ಬಳಕೆಯು ಕೀಟ ನಿಯಂತ್ರಣದ ಒಂದು ಭಾಗವಾಗಿದೆ. ವಿಜ್ಞಾನಿಗಳು ಈ ಕಾರ್ಯಕ್ರಮದಡಿಯಲ್ಲಿ ಬೋರರ್ ಕೀಟದ ಲೈಂಗಿಕಾಕಷರ್Àಕಗಳ (ಫೆರಮೋನ್) ಕುರಿತು ಅಧ್ಯಯನವನ್ನು ನಡೆಸಿದ್ದಾರೆ. ಗಂಡು ಕೀಟದ ಫೆರಮೋನನ್ನು ಕೃತಕವಾಗಿ ತಯಾರಿಸಿ ಹೆಣ್ಣು ಕೀಟವನ್ನು ಆಕರ್ಷಿಸಿ, ಮೋಹಕ ಬಲೆಗೆ ಬೀಳಿಸುವ ತಂತ್ರಜ್ಞಾನ ಇದಾಗಿದೆ. ಹೆಚ್ಚಿನ ಬೆಳೆಗಾರರು ಕಾಫಿ ತೋಟಗಳಲ್ಲಿ ಈ ತಂತ್ರಜ್ಞಾನ ಬಳಸಿ ಕೀಟಬಾಧೆಯನ್ನು ನಿಯಂತ್ರಣಕ್ಕೆ ತಂದಿದ್ದರೂ, ಅಕ್ಕಪಕ್ಕದವರ ತೋಟದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೇ ಇರುವದರಿಂದ ಸಂಪೂರ್ಣ ಕೀಟ ನಿಯಂತ್ರಣ ಅಸಾಧ್ಯವಾಗಿದೆ. ಇದರೊಂದಿಗೆ ಕೆಲವು ಬೆಳೆಗಾರರು ಕಾಫಿ ಗಿಡದ ಕಾಂಡಕ್ಕೆ ಪ್ಲಾಸ್ಟಿಕ್ ಚೀಲವನ್ನು ಸುತ್ತುವ ಮೂಲಕ ಕೀಟಗಳಿಂದ ಕಾಂಡವನ್ನು ರಕ್ಷಿಸಲು ಹರಸಾಹಸ ನಡೆಸುತ್ತಿರುವದನ್ನೂ ಕಾಣಬಹುದಾಗಿದೆ. ಈ ಪ್ರಕ್ರಿಯೆ ತ್ರಾಸದಾಯಕವಾಗಿರುವದರಿಂದ ಹೆಚ್ಚಿನವರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಕೀಟ ನಿಯಂತ್ರಣ ಪುನರಾವರ್ತನೆ: ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೀಟ ಪೀಡಿತ ಗಿಡಗಳನ್ನು ತೆಗೆಯಬೇಕು. ಏಪ್ರಿಲ್‍ನಿಂದ ಜೂನ್ ಒಳಗೆ ಕ್ರಿಮಿನಾಶಕ ಸಿಂಪಡಿಸಬೇಕು. ಜುಲೈನಿಂದ ಸೆಪ್ಟಂಬರ್ ಒಳಗೆ ತೋಟದಲ್ಲಿ ಹದವಾದ ನೆರಳು ನಿರ್ವಹಣೆ ಮಾಡಿಕೊಳ್ಳಬೇಕು. ನಂತರ ಅಕ್ಟೋಬರ್‍ನಿಂದ ಡಿಸೆಂಬರ್ ತನಕ ಕೀಟ ನಿಯಂತ್ರಣದ ಕೆಲಸದÀ ಪುನರಾವರ್ತನೆ ಮಾಡಬೇಕು ಎಂಬದು ಕೀಟತಜ್ಞರ ಸಲಹೆ.
ಕಾಫಿ ಬೆಳೆಗಾರರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೂಡ, ಹವಾಮಾನದ ಬದಲಾವಣೆಯಿಂದ ಬಿಳಿ ಕಾಂಡಕೊರಕದ ರೋಗ ಹೆಚ್ಚುತ್ತಿದೆ. ಕಾಫಿ ತೋಟಗಳಿಗೆ ಬೀಳುವ ಅತಿಯಾದ ಬಿಸಿಲು, ಸಮಯಕ್ಕೆ ಸರಿಯಾಗಿ ಮಳೆ ಬೀಳದಿರುವದು, ಕಾಫಿ ತೋಟಗಳಲ್ಲಿ ಸಾಮೂಹಿಕ ನಿರ್ವಹಣೆಯ ಕೊರತೆಯಿಂದ ಕಾಂಡಕೊರಕ ಕೀಟಗಳ ಹಾವಳಿ ಜಾಸ್ತಿಯಾಗಿದೆ ಎಂದು ಮಸಗೋಡು ಗ್ರಾಮದ ಸತೀಶ್ ಅಭಿಪ್ರಾಯಿಸಿದ್ದಾರೆ.
ತೋಟದಲ್ಲಿ ನೆರಳು ನಿರ್ವಹಣೆಯಿಂದ ಶೇಕಡ 50ರಷ್ಟು ರೋಗಬಾಧೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಬ್ಯಾರಲ್ ನೀರಿಗೆ, 20ಕೆ.ಜಿ. ಸುಣ್ಣವನ್ನು ಹಾಕಿ, 250ಗ್ರಾಂ ಡಿಡಿಎಲ್ ಅಂಟು ದ್ರಾವಣವನ್ನು ಬೆರೆಸಿ, ಕಾಂಡಕ್ಕೆ ಲೇಪಿಸಬೇಕು. ಸುಣ್ಣದ ಶಾಖಕ್ಕೆ ಲಾರ್ವ (ಕೋಶಾವಸ್ಥೆಯಲ್ಲಿರುವ ಹುಳು) ಸಾಯುತ್ತವೆ. ಇದರಿಂದಾಗಿ ಹಂತಹಂತವಾಗಿ ಕೀಟಬಾಧೆಯನ್ನು ಹತೋಟಿಗೆ ತರಬಹುದಾಗಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
- ವಿಜಯ್ ಹಾನಗಲ್‍ಚೆಟ್ಟಳ್ಳಿ, ಜು. 15: ಚೆಟ್ಟಳ್ಳಿಯ ಕೊಂಗೇಟಿರ ಆಶಿಕ್ ಅಪ್ಪಣ್ಣ ಅವರು ವೈಜ್ಞಾನಿಕ ರೀತಿಯಲ್ಲಿ ಬೆಳೆದ ಭತ್ತದ ಪೈರನ್ನು ಕಾಡಾನೆಗಳು ನಾಶಪಡಿಸಿದೆ.
ಚೆಟ್ಟಳ್ಳಿಯಲ್ಲಿ ಕಾಡಾನೆಗಳ ಹಾವಳಿಯಿಂದ ಬೇಸತ್ತು ಭತ್ತದ ಕೃಷಿಯನ್ನು ಬಿಟ್ಟಿದ್ದರೂ ಕೊಂಗೇಟಿರ ಆಶಿಕ್ ಅಪ್ಪಣ್ಣ ಅವರು ಅದೆಷ್ಟೇ ಕಷ್ಟವಾದರೂ ಕೃಷಿ ಮಾಡತೊಡಗಿದ್ದರು. ಹಲವು ವರ್ಷಗಳಿಂದ ಆನೆ ಹಾಗೂ ಕಾಡು ಪ್ರಾಣಿಗಳಿಂದ ನಿರಂತರ ಭತ್ತದ ಬೆಳೆಯನ್ನು ಲೂಟಿ ಮಾಡತೊಡಗಿದವು.
ಕಳೆದ ವರ್ಷ ಹುಲಿ ಮೂತ್ರದ ಪ್ರಯೋಗ ಹಾಗೂ ಹಲವು ಪ್ರಯೋಗಗಳನ್ನು ಮಾಡಿ ಆನೆಗಳಿಂದ ಫಸಲು ನಾಶಕ್ಕೆ ಹಲವು ಪ್ರಯತ್ನವನ್ನು ಮಾಡಿದರು. ಕಳೆದ ವರ್ಷದಿಂದ ಆಶಿಕ್ ಅವರು ಭತ್ತದ ನಾಟಿಗೆ ಬೇಕಾದ ಪೈರನ್ನು ತನ್ನ ಮನೆಯ ಸಿಮೆಂಟ್ ಕಣದಲೇ ವೈಜ್ಞಾನಿಕ ರೀತಿಯಲ್ಲಿ ಮಾಡತೊಡಗಿದರು. ಬೀಟಿ ಹಾಗೂ ತುಂಗಾ ಬೆಳೆಯ ಭತ್ತವನ್ನು ಮೊಳಕೆ ಬರಿಸಿ ಹಲವು ವೈಜ್ಞಾನಿಕ ಮಾದರಿಯಲ್ಲಿ ಬೆಳೆಸಿ ಅದನ್ನು ನಾಟಿ ಯಂತ್ರದ ಮೂಲಕ ಗದ್ದೆಯಲ್ಲಿ ನಾಟಿ ಮಾಡಲಾಗುತ್ತಿದೆ. ಕಳೆದ ವರ್ಷ ಭತ್ತದ ಗದ್ದೆಯನ್ನು ಲೂಟಿ ಮಾಡುತಿದ್ದ ಆನೆಗಳು ಮನೆಯ ಅಂಗಳದ ಸಿಮೆಂಟ್ ಕಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾಡಲಾದ ಪೈರನ್ನು ನಾಶ ಪಡಿಸಿತ್ತು.
ಆದರೆ ಈ ವರ್ಷವೂ ಕೂಡ ಆಶಿಕ್ ಅಪ್ಪಣ್ಣ ಅವರು ಸಿಮೆಂಟ್ ಕಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾಡಲಾದ ಪೈರುಗಳು ಬೆಳೆಯುವ ಮೊದಲೇ ಅನೆಗಳು ಮನೆಯ ಸುತ್ತಲೆಲ್ಲ ಓಡಾಡಿ ನಾಶಪಡಿಸಿವೆ. ಇದರಿಂದ ಆಶಿಕ್ ಅವರು ತೀವ್ರ ಅಸಮಾದಾನ ವ್ಯಕ್ತಪಡಿಸಿ, ಅತ್ತ ಆನೆಯ ಹಾವಳಿ ನಿಯಂತ್ರಣವಾಗುವದಿಲ್ಲ. ಇತ್ತ ಭತ್ತ ಬೆಳೆಯಲೂ ಸಾಧ್ಯವಾಗುತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. - ಪುತ್ತರಿರ ಕರುಣ್ ಕಾಳಯ್ಯ-ಪಪ್ಪು ತಿಮ್ಮಯ್ಯ