ಶ್ರೀಮಂಗಲ, ಆ. 16: ಎರಡನೇ ಜಾಗತಿಕ ಮಹಾ ಸಮರದ ಸಂದರ್ಭದಲ್ಲಿ ಬ್ರಿಟಿಷರ ಹಿತಾಸಕ್ತಿಗೆ ಪೂರಕವಾಗಿ, ರೂಪಿಸಲಾಗಿದ್ದ ಕಾಫಿಕಾಯ್ದೆ 1942 ಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನೂತನ ಕಾಫಿ ಬಿಲ್ಲ್ ‘ಕಾಫಿ ಕಾಯ್ದೆ 2016’, ಮತ್ತೊಮ್ಮೆ ಕಾಫಿ ಬೆಳೆಗಾರರಿಗೆ ಮಾರಕವಾಗ ಬಹುದಾಗಿದೆ ಎಂದು ಯುಕೊ ಸಂಘಟನೆ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.ಪೊನ್ನಂಪೇಟೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡನೇ ಜಾಗತಿಕ ಮಹಾ ಸಮರದ ಸಂದರ್ಭದಲ್ಲಿ, ಭಾರತದಲ್ಲಿ ಬೆಳೆಯುತ್ತಿದ್ದ ಕಾಫಿಯು ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಮಾರಾಟವಾದಲ್ಲಿ, ಬ್ರಿಟಿಷರಿಗೆ ಕಾಫಿ ಉದ್ಯಮದ ಮೇಲಿನ ಹಿಡಿತ ಕೈತಪ್ಪುವ ಭೀತಿಯಿಂದ ಅಂದಿನ ಬ್ರಿಟೀಷ್ ಸರ್ಕಾರ ಕಾಫಿ ಕಾಯ್ದೆ 1942 ನ್ನು ರೂಪಿಸಿ, ಕಾಫಿ ಮಂಡಳಿಯ ಮೂಲಕ ಪೂಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದು ಕಾಫಿ ಉದ್ಯಮವನ್ನು ಹಿಡಿತದಲ್ಲಿಟ್ಟುಕೊಂಡಿತ್ತು. ಆ ಮೂಲಕ ಕಾಫಿ ಮಂಡಳಿಯು ಕಾಫಿಯ ಕ್ಯೂರಿಂಗ್ ವ್ಯವಸ್ಥೆ, ದರ ನಿರ್ಧಾರ, ಮತ್ತು ಮಾರುಕಟ್ಟೆ ನಿಯಂತ್ರಣದ ಮೂಲಕ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವದರ ಮೂಲಕ 1996 ರ ವರೆಗೂ ಬೆಳೆಗಾರರನ್ನು ವಂಚಿಸುತ್ತಾ ಬಂದಿತ್ತು. ಇದೀಗ ಆ ಸ್ಥಿತಿ ಪುನರಾವರ್ತನೆ ಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಫಿ ಮಂಡಳಿಯ ಕಪಿ ಮುಷ್ಠಿಯಿಂದ ಪಾರಾಗಲು ಬೆಳೆಗಾರರು ತೊಂಬತ್ತರ ದಶಕದಲ್ಲಿ ಪ್ರಾರಂಭಿಸಿದ ಹೋರಾಟದ ಫಲವಾಗಿ,ಕಾಫಿ ಮಂಡಳಿಯು 1992-93 ರಲ್ಲಿ ಪೂಲಿಂಗ್ ವ್ಯವಸ್ಥೆಯ ಮೇಲೆ ಹಂತ ಹಂತವಾಗಿ ನಿಯಂತ್ರಣ ಕಳೆದುಕೊಳ್ಳುವದರ ಮೂಲಕ, 1996 ಜುಲೈ ನಂತರ ಬೆಳೆಗಾರರು ಪೂಲಿಂಗ್ ವ್ಯವಸ್ಥೆಯಿಂದ ಮುಕ್ತರಾಗು ವದರ ಮೂಲಕ ನಿಟ್ಟುಸಿರು ಬಿಡುವಂತಾಗಿತ್ತು. ಇದೀಗ ಕಾಫಿ ಕಾಯ್ದೆಯ ಕರಡು ಪ್ರತಿಯಲ್ಲಿರುವಂತೆ ಮತ್ತೊಮ್ಮೆ ಕನಿಷ್ಟ ಹಿಡುವಳಿ ಹೊಂದಿರುವ ಬೆಳೆಗಾರರೂ ಸಹ ಕಾಫಿ ಮಂಡಳಿಯಲ್ಲಿ ಕಡ್ಡಾಯ ನೋಂದಣಿ ಹೊಂದಬೇಕೆನ್ನುವದರ ಮೂಲಕ ಹಿಂದಿನ ಕರಾಳ ಇತಿಹಾಸವನ್ನು ಎದುರಿಸಬೇಕಾದ ಆತಂಕಕ್ಕೆ ಬೆಳೆಗಾರರು ಒಳಗಾಗಿದ್ದಾರೆ ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಕಾಫಿ ಕಾಯ್ದೆ 2016 ರ ಕರಡು ಪ್ರತಿಯ ಸೆಕ್ಷನ್ 4 (2 ಬಿ)ಯಲ್ಲಿ ಲೋಕಸಭೆಯಿಂದ ಇಬ್ಬರು ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರನ್ನು ನೇಮಕ ಮಾಡುವ ಕುರಿತು ಉಲ್ಲೇಖಿಸಲಾಗಿದೆ ಆದರೆ ಸಾಂಪ್ರ ದಾಯಿಕವಾಗಿ ಕಾಫಿ ಬೆಳೆಯುವ ಪ್ರದೇಶಕ್ಕೆ ಪ್ರಾತಿನಿಧಿತ್ವದ ಬಗ್ಗೆ ಯಾವದೇ ಉಲ್ಲೇಖವಿಲ್ಲದಿರು ವದರಿಂದ ಕಾಫಿ ಬೆಳೆಗಾರರಿಗೆ ಯಾವದೇ ಪ್ರಯೋಜನವಾಗುವ ನಿರೀಕ್ಷೆ ಹುಸಿಯಾಗಲಿದೆ. ಹಾಗೆಯೇ ಕಾಫಿ ಮಂಡಳಿಗೆ ಇತರ ಸದಸ್ಯರನ್ನು ನೇಮಿಸುವ ಸಂಪೂರ್ಣ ಅಧಿಕಾg Àವನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದ್ದು, ಇದರಿಂದ ಬಲಿಷ್ಠ ಕಾಫಿ ಕಂಪೆನಿಗಳು, ಕಾಫಿ ಉದ್ಯಮಿಗಳು ಹಾಗೂ ಅತೀದೊಡ್ಡ ಬೆಳೆಗಾರರು ಸಿಂಹಪಾಲು ಪಡೆಯಲಿದ್ದು ಮತ್ತೊಮ್ಮೆ ಮಧ್ಯಮ ಹಾಗೂ ಸಣ್ಣ ಬೆಳೆಗಾರರಿಗೆ ಯಾವದೇ ಪ್ರಯೋಜನವಾಗುವ ಸಾಧ್ಯತೆ ಇರುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೆಕ್ಷನ್ 15(1) ರನ್ವಯ ಪ್ರತಿಯೊಬ್ಬ ಬೆಳೆಗಾರರೂ ತಮ್ಮನ್ನು ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗಿರುವದರಿಂದ ಹಿಂದಿನ ಸಿ.ಆರ್.ಸಿ. ವ್ಯವಸ್ಥೆ ಜಾರಿಗೆ ಬರಲಿದ್ದು ಅಧಿಕಾರಿಗಳು ಬೆಳೆಗಾg Àರನ್ನು ಶೋಷಿಸಲು ಅನುಕೂಲವಾಗ ಲಿದೆ ಎಂದು ಅವರು ತಿಳಿಸಿದರು.

ಈ ಕಾಯ್ದೆಯ ಮತ್ತೊಂದು ಭಯಾನಕವಾದ ಅಂಶವೆಂದರೆ, ಸೆಕ್ಷನ್ 26ರ ಅನ್ವಯ ಕಾಫಿ ಮಂಡಳಿಯ ಅಧಿಕಾರಿಗಳಿಗೆ ಕಾಫಿ ಉದ್ಯಮಕ್ಕೆ ಸಂಬಂಧಿಸಿ ಕಾಫಿ ತೋಟ, ತೋಟದ ಮನೆ ಸೇರಿದಂತೆ ಎಲ್ಲೆಡೆಗೆ, ಯಾವದೇ ಸಮಯ ಸಂದರ್ಭಗಳಲ್ಲಿ ಯಾವದೇ ನಿರ್ಬಂಧಲ್ಲದೆ ಪ್ರವೇಶಿಸುವ ಹಾಗೂ ತಪಾಸಣೆ ನಡೆಸುವ ಅಧಿಕಾರವನ್ನು ನೀಡಲಾಗಿದೆ. ಇದರಿಂದ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ವೈಯಕ್ತಿಕ ಸ್ವಾತಂತ್ರ್ಯವನ್ನೇ ಕಳೆದುಕೊಂಡು ಅಧಿಕಾರಿಗಳಿಂದ ತೀವ್ರ ತೊಂದರೆ ಎದುರಿಸಬೇಕಾಗುವದರಲ್ಲಿ ಸಂದೇಹವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇಷ್ಟಕ್ಕೂ ನೂತನ ಕರಡು ಕಾಫಿ ಕಾಯ್ದೆಯನುಸಾರ ಕಾಫಿ ಮಂಡಳಿಗೆ ನಿಯಂತ್ರಿಸಲು ಹಾಗೂ ನಿರ್ವಹಿಸಲು ಬೇಕಾದ ಮೂಲಭೂತ ವ್ಯವಸ್ಥೆಗಳು ಇಲ್ಲದಿರುವಾಗ, ಮಂಡಳಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇತರ ಏಜೆನ್ಸಿಗಳನ್ನು ಆಶ್ರಯಿಸಬೇಕಾಗುತ್ತದೆ. ಹಾಗೆಯೇ ಸಂಪನ್ಮೂಲಗಳ ಕ್ರೋಢಿಕರಣ ಹಾಗೂ ನಿರ್ವಹಣೆಯ ವೆಚ್ಚವನ್ನು ಭರಿಸಲು ಬೆಳೆಗಾರರ ಮೇಲೆ ತೆರಿಗೆಯ ಭಾರವನ್ನು ಹೇರುವ ಎಲ್ಲಾ ಸಾಧ್ಯತೆಗಳಿವೆ. ಮಾತ್ರವಲ್ಲದೆ ಬೆಲೆ ಮತ್ತು ಮಾರುಕಟ್ಟೆ ನಿಯಂತ್ರಣ ಹಾಗೂ ನಿರ್ವಹಣೆ, ಗುಣಮಟ್ಟ ನಿರ್ಧಾರ ಹಾಗೂ ನಿರ್ವಹಣೆಯ ಅಧಿಕಾರ ಮಂಡಳಿಗೇ ಇರುವದ ರಿಂದ, ಹಿಂದಿನ ಅನುಭವ ದಂತೆ ಅಧಿಕಾರಿಗಳು ಮಧ್ಯಮ ಹಾಗೂ ಸಣ್ಣ ಬೆಳೆಗಾರರೊಂದಿಗೆ ಚೆಲ್ಲಾಟವಾಡುವ ದರಲ್ಲಿ ಯಾವದೇ ಸಂದೇಹವೂ ಉಳಿದಿಲ್ಲ. ಆದ್ದರಿಂದ ಈ ಕಾಯ್ದೆ ಯನ್ನು ಬೆಳೆಗಾರರು ತಿರಸ್ಕರಿಸ ಬೇಕಾಗಿದೆ ಎಂದು ತಿಳಿಸಿದರು.

1942ರ ಕಾಫಿ ಕಾಯ್ದೆಗೆ ತಿದ್ದುಪಡಿ ತರುವ ಕರಡು ಮಸೂದೆಯನ್ನು ಮಾರ್ಚ್ 23, 2016 ರಲ್ಲಿ ಮಂಡಿಸಿ ಏಪ್ರಿಲ್ 23 ರ ತನಕ ಅಭಿಪ್ರಾಯವನ್ನು ಸಂಗ್ರಹಿಸಲು ಸಮಯ ನಿಗದಿ ಪಡಿಸಿ ವೆಬ್ಸೈಟ್‍ನಲ್ಲಿ ಮಾತ್ರ ಪ್ರಕಟಿಸುವದರ ಮೂಲಕ ಸಣ್ಣ ಹಾಗೂ ಮಧ್ಯಮ ಬೆಳೆಗಾರರನ್ನು ಕತ್ತಲೆಯಲ್ಲಿಟ್ಟು ಇದೀಗ ಕಾಫಿ ಕಾಯ್ದೆ 2016 ಇದೀಗ ಸಂಪೂರ್ಣ ಮಂಡನೆಗೆ ಮುಂದಾಗಿರುವದು ಬೆಳೆಗಾರರನ್ನು ನಿದ್ದೆಗೆಡಿಸುವಂತೆ ಮಾಡಿದೆ. ಹಳೆಯ ಕಾಫಿ ಬೋರ್ಡ್‍ನ ಎಲ್ಲಾ ಕರ್ಮ ಕಾಂಡಗಳು ಈ ಬಿಲ್ಲ್‍ನ ಮೂಲಕ ಮತ್ತೊಮ್ಮೆ ಬೆಳೆಗಾರರನ್ನು ಕಾಡಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಸಂಸದ ಪ್ರತಾಪ ಸಿಂಹ ಅÀವರು ಲೋಕಸಭೆಯಲ್ಲಿ ವಿಷಯವನ್ನು ಇದೀಗಾಗಲೇ ಪ್ರಸ್ತಾಪಿಸಿ, ವಿವರವನ್ನು ಕೇಳಿರುವದು ಸ್ವಾಗತಾರ್ಹ. ನಾವು ಬೆಳೆಗಾರರು ಇದೀಗ ಹೋರಾಟದ ಹಾದಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಸಂಸದರನ್ನು ಭೇಟಿಯಾಗಿ ಚರ್ಚಿಸಲಾಗುವದು ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಯುಕೊ ಸಂಘಟನೆಯು ಪ್ರಸ್ತುತ ಕರಡು ಪ್ರತಿಯಲ್ಲಿರುವ ‘ಕಾಫಿ ಕಾಯ್ದೆ-2016’ನ್ನು ಸಂಪೂರ್ಣ ವಿರೋಧಿ ಸಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಸ್ತ ಬೆಳೆಗಾರರಿಗೆ ಮಾಹಿತಿ ನೀಡಲು ಅಭಿಯಾನವನ್ನು ಕೈಗೊಂಡು, ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಜಾತ್ಯತೀತ ವಾಗಿ ಹಾಗೂ ಪಕ್ಷಾತೀತವಾಗಿ ಹೋರಾಟ ವನ್ನು ರೂಪಿಸಲಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ, ಮಚ್ಚಮಾಡ ಅನೀಶ್ ಮಾದಪ್ಪ, ನೆಲ್ಲಮಕ್ಕಡ ಮಾದಯ್ಯ ಉಪಸ್ಥಿರಿದ್ದರು.