ಗೋಣಿಕೊಪ್ಪಲು, ಆ.7: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಮಚ್ಚಿ ಮೀಸಲು ಅರಣ್ಯ ವ್ಯಾಪ್ತಿಯ ದಿಡ್ಡಳ್ಳಿ ಸರ್ವೆ ನಂ. 106/7ಎ ಪ್ರದೇಶದಲ್ಲಿ ಸುಮಾರು 110 ಗಿರಿಜನ ಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅರಣ್ಯ ಹಕ್ಕುಪತ್ರಕ್ಕಾಗಿ ಹೋರಾಟವನ್ನು ಜೂ. 20 ರಂದು ಆರಂಭಿಸಿದ್ದು, ಸೋಮವಾರಕ್ಕೆ 50 ದಿನ ಪೂರೈಸಲಿದೆ.
ಜೇನುಕುರುಬ, ಪಂಜರಿ ಯರವ, ಬೆಟ್ಟಕುರುಬ ಜನಾಂಗವನ್ನು ಒಕ್ಕಲೆಬ್ಬಿಸಲು ಅರಣ್ಯ-ಪೆÇಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದರೆ, ಮತ್ತೊಂದೆಡೆ ಜಿಲ್ಲೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಸುಮಾರು 200 ಕ್ಕೂ ಅಧಿಕ ಮಹಿಳೆಯರು ತಮ್ಮ ಗುಡಿಸಲು ಮುಂಭಾಗ ಬೆತ್ತಲೆ ಪ್ರತಿಭಟನೆ ಮೂಲಕ ಅರಣ್ಯ ಇಲಾಖೆ ಕಾರ್ಯಾಚರಣೆ ಹತ್ತಿಕ್ಕಲು ನಿರ್ಧಾರ ಕೈಗೊಂಡ ಅಂಶ ಇಂದು ಬೆಳಕಿಗೆ ಬಂದಿದೆ. ನಾವು ಕಾಡು ಪ್ರಾಣಿಗಳೊಂದಿಗೆ ಕಾಡಿನಲ್ಲಿ ಶತಮಾನಗಳಿಂದ ಬದುಕಿ ಬೆಳೆದವರು. ಅಂದು ನಾವು ಬೆತ್ತಲೆಯೇ! ಇಂದೂ ನಾವು ಅಧಿಕಾರಿಗಳ ಮುಂದೆ ಬೆತ್ತಲಾಗಲು ಹಿಂಜರಿಯುವದಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸಲಿದ್ದು ಅಧಿಕಾರಿಗಳು ದೌರ್ಜನ್ಯವೆಸಗಿದರೆ ಬೆತ್ತಲೆ ಪ್ರತಿಭಟನೆ ಮಾಡಲಿದ್ದೇವೆ. ಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗವೂ ಬೆತ್ತಲೆ ಪ್ರತಿಭಟನೆ ನಡೆಸಲು ಹಿಂಜರಿಯುವದಿಲ್ಲ ಎಂದು ದಿಡ್ಡಳ್ಳಿಯಲ್ಲಿ ಅರಣ್ಯ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿರುವ ಜೇನುಕುರುಬರ ಮುತ್ತಮ್ಮ ಯಾವದೇ ಅಳುಕಿಲ್ಲದೆ ತಿಳಿಸಿದ್ದಾರೆ. ಏತನ್ಮಧ್ಯೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ಕುಮಾರ್ ಅವರು ನಮಗೆ ಆದಿವಾಸಿಗಳ ಬಗ್ಗೆ ಅನುಕಂಪವಿದೆ. ನಾವು ಅವರ ವೈರಿಗಳಲ್ಲ. ಮೀಸಲು ಅರಣ್ಯದಲ್ಲಿ ನೆಲೆನಿಂತಿರುವ ಹಾಗೂ ಒಂದೊಮ್ಮೆ ಅರಣ್ಯದಲ್ಲಿ ನೆಲೆನಿಂತು ನಂತರ ಕಾಫಿತೋಟದ ಲೈನ್ಮನೆಗಳಲ್ಲಿ ವಾಸವಿರುವ ಗಿರಿಜನ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ತಿತಿಮತಿ ಟಿಂಬರ್ ಡಿಪೆÇೀ ಸಮೀಪ ಸುಮಾರು 56 ಎಕರೆ ಅರಣ್ಯ ಪೈಸಾರಿಯನ್ನು ಗುರುತಿಸಿದ್ದು ‘ಡಿ ನೋಟಿಫಿಕೇಷನ್’ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಸೋಮವಾರದಂದು ನಡೆಯುವ ಅರಣ್ಯ-ಪೆÇಲೀಸ್ ಇಲಾಖೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರಿಗೆ ಮನವಿ ಮಾಡಲಾಗಿದ್ದು, ಸಂಬಂಧಿಸಿದ ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಮಾತೂಕತೆ ನಡೆಸುತ್ತೇನೆ ಎಂದು ಭರವಸೆ ದೊರೆತಿದೆ ಎನ್ನಲಾಗಿದೆ.
ದಿಡ್ಡಳ್ಳಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಈ ಹಿಂದೆ ಸುಮಾರು 30 ಕುಟುಂಬಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಪೀಕರ್ ಆಗಿದ್ದ ಸಂದರ್ಭ ಅರಣ್ಯ ಹಕ್ಕು ಪತ್ರ ನೀಡಲಾಗಿತ್ತು. ಹಕ್ಕುಪತ್ರವನ್ನು ಇದೇ ಸಂದರ್ಭ ಗಿರಿಜನೇತರರಿಗೂ ನೀಡಲಾಗಿದ್ದು ಜೇನುಕುರುಬರು, ಬೆಟ್ಟಕುರುಬರು ಹಾಗೂ ಪಂಜರಿ ಯರವ ಜನಾಂಗಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ದೇವರಪುರ ದೇವರಕಾಡು ಪೈಸಾರಿ ನಿವಾಸಿಗಳೂ ಒಳಗೊಂಡಂತೆ ಸುಮಾರು 200 ಕುಟುಂಬಗಳಲ್ಲಿ 110 ಕುಟುಂಬಗಳು ಜೂನ್ 20 ರಿಂದಲೇ ದಿಡ್ಡಳ್ಳಿಯಲ್ಲಿ ಶೆಡ್ ನಿರ್ಮಿಸಿಕೊಂಡು ಹೋರಾಟ ನಡೆಸುತ್ತಾ ಬಂದಿದ್ದಾರೆ. ತಾ. 6 ರಂದು ಶನಿವಾರ ದಿಡ್ಡಳ್ಳಿಗೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯ ತೆರವು ಕಾರ್ಯಾಚರಣೆಯ ನೋಟಿಸನ್ನು ಅಲ್ಲಲ್ಲಿ ಮರಗಳಿಗೆ ಅಂಟಿಸಿ, ಪೆÇೀಟೋ ತೆಗೆದುಕೊಂಡಿದ್ದು ನಂತರ ನೋಟಿಸನ್ನು ತಾವೇ ಕಿತ್ತೊಯ್ದರು ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.
ಇಂದು ದಿಡ್ಡಳ್ಳಿಗೆ ಶಕ್ತಿ ಪರವಾಗಿ ತೆರಳಿದ ಸಂದರ್ಭ ಸೋಮವಾರ ಪೆÇಲೀಸ್ - ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಅಕ್ರಮ ಗುಡಿಸಲುಗಳ ತೆರವು ಕಾರ್ಯಕ್ರಮ ನಡೆಯಲಿದ್ದು, ಬೆತ್ತಲೆ ಪ್ರತಿಭಟನೆ ನಡೆಸಿ ಕಾರ್ಯಾಚರಣೆಯನ್ನು ವಿಫಲಗೊಳಿಸಲಾಗುವದು ಎಂಬ ಮಾಹಿತಿ ಲಭ್ಯವಾಗಿದೆ. ಇಲಾಖಾಧಿಕಾರಿಗಳ ಕಿರುಕುಳ ಮುಂದುವರಿದದ್ದೇ ಆದರೆ, ಸಾಮೂಹಿಕ ಆತ್ಮಹತ್ಯೆಗೂ ಹಿಂಜರಿಯುವದಿಲ್ಲ ಎಂದು ಅಲ್ಲಿನ ಬುಡಕಟ್ಟು ಕೃಷಿಕರ ಸಂಘದ ಪ್ರಮುಖರು ತಿಳಿಸಿದ್ದಾರೆ.
ಸುಮಾರು 70 ವರ್ಷ ಪ್ರಾಯದ ಜೆ.ಕೆ.ರಾಮು ಅವರು ಗುಡಿಸಲು ನಿರ್ಮಿಸಿಕೊಂಡು ಹೋರಾಟ ನಡೆಸಿರುವದು ಕಂಡು ಬಂತು. 55 ರ ವಯಸ್ಸಿನ ಜೆ.ಕೆ.ಗೌರಿ, ಜೇನು ಕುರುಬ ಜನಾಂಗದ ಮಂಜುಳಾ, ಕವಿತಾ, ಲಕ್ಷ್ಮಿ, ರಾಧಾ, ಗಂಗೆ, ಪಂಜರಿಯರವರ ಗೌರಿ, ಪುಷ್ಪಾ, ಸಂಧ್ಯಾ, ಬೇಬಿ, ಬುಡಕಟ್ಟಿ ಕೃಷಿಕರ ಸಂಘದ ಸದಸ್ಯ ಸುಬ್ರಮಣಿ, ಮುತ್ತಣ್ಣ, ಯರವರ ಮುತ್ತ, ಜೆ.ಎಲ್.ರಾಮ. ಚಂದ್ರ ಮುಂತಾದವರು ನಾವು ಶತಮಾನಗಳಿಂದ ಕಾಡಿನಲ್ಲಿಯೇ ವಾಸವಿದ್ದು ಇಲ್ಲಿಯೇ ನಮಗೆ ಹಕ್ಕುಪತ್ರ ನೀಡಲಿ, ಇಲ್ಲವೇ ಶೀಘ್ರ ಪುನರ್ವಸತಿ ಕಲ್ಪಿಸಲಿ ಆದರೆ, ಕೊಡಗು ಜಿಲ್ಲೆ ಬಿಟ್ಟು ಹೊರ ಜಿಲ್ಲೆಗೆ ತೆರಳುವದಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ದಿಡ್ಡಳ್ಳಿ ಗ್ರಾಮವು ಚೆನ್ನಯ್ಯನ ಕೋಟೆ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು ಗ್ರಾ.ಪಂ.ಅಧ್ಯಕ್ಷರ ಮೀಸಲಾತಿ ವಿವಾದವು ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆ ಅಧ್ಯಕ್ಷರಿಲ್ಲದ ಗ್ರಾ.ಪಂ. ಆಡಳಿತ ಮುಂದುವರಿದಿದೆ. ಈ ಹಿಂದೆ ಮೀಸಲಾತಿ ಅನ್ವಯ ಚೆನ್ನಯ್ಯನಕೋಟೆ ಗ್ರಾ.ಪಂ.ಅಧ್ಯಕ್ಷರಾಗಿ ಸಾಮಾನ್ಯ ಪುರುಷ ಮೀಸಲಾತಿ ಅನ್ವಯ ಕಾಡ್ಯಮಾಡ ಪುತ್ರಪೂಣಚ್ಚ ಕಾರ್ಯನಿರ್ವಹಿಸಿದ್ದರು. ಕಳೆದ ಬಾರಿಯ ಚುನಾವಣೆ ನಂತರ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿರ್ಧರಿಸಲಾಗಿದ್ದು ಬಿಜೆಪಿ ಬೆಂಬಲಿತ ಗೀತಾ ಅವರು ಅಧ್ಯಕ್ಷರಾಗಬೇಕಿತ್ತು. ಈ ಬಗ್ಗೆ ಪರಿಶಿಷ್ಟ-ಜಾತಿ ಪಂಗಡಕ್ಕೆ ಅನ್ಯಾಯವಾಗಿದೆ ಎಂದು ಹೇಳಿ ಗ್ರಾ.ಪಂ.ಸದಸ್ಯ ಗಣೇಶ್ ಎಂಬವರು ಮೀಸಲಾತಿ ತಾರತಮ್ಯದ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯ ಮೊರೆ ಹೋಗಿದ್ದು ಇನ್ನೂ ತೀರ್ಪು ಹೊರಬಿದ್ದಿಲ್ಲ. ಗ್ರಾ.ಪಂ.ಸದಸ್ಯರಾದ ಜೇನುಕುರುಬರ ಅಪ್ಪಾಜಿ ಹಾಗೂ ಕಾವೇರಿ ಎಂಬವರು ಪ್ರತಿಭಟನಾ ನಿರತರ ಬೆಂಬಲಕ್ಕೆ ನಿಂತಿದ್ದು ಕುಡಿಯುವ ನೀರು, ಇತ್ಯಾದಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಸುಮಾರು 110 ಗುಡಿಸಲುಗಳಲ್ಲಿ 500 ಮಂದಿ ವಾಸವಿದ್ದು, ಸರತಿಯಂತೆ 49 ದಿನಗಳೂ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪ್ರಮುಖರಾದ ಸಂಕೇತ್ಪೂವಯ್ಯ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರತಿಭಟನಾ ನಿರತರ ವಿರುದ್ಧ ಮಾತನಾಡಿರುವ ಕುರಿತೂ ಆರೋಪವು ಅಲ್ಲಿ ವ್ಯಕ್ತವಾಗಿದೆ. ಒಟ್ಟಿನಲ್ಲಿ ದಿಡ್ಡಳ್ಳಿ ಕಳೆದ ಹಲವು ದಿನಗಳಿಂದ ಅರಣ್ಯ ಇಲಾಖೆ ಮತ್ತು ಗಿರಿಜನರ ನಡುವಿನ ಸಂಘರ್ಷದ ಹಾದಿ ತುಳಿದಿದೆ.
ಅರಣ್ಯ ಇಲಾಖೆ ಅಸಹಾಯಕತೆ
ದಿಡ್ಡಳ್ಳಿ ಪ್ರತಿಭಟನಾ ನಿರತರನ್ನು ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸುವ ಪ್ರಕ್ರಿಯೆ ಸೋಮವಾರ ಆರಂಭಗೊಳ್ಳಲಿದೆ ಎಂಬ ಸುಳಿವು ಇದೀಗ ಸಂಘರ್ಷಕ್ಕೆ ಎಡೆಮಾಡಿದೆ. ಈ ಬಗ್ಗೆ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಕೊಡಗಿನಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಶೇ.25 ಭಾಗ ಮಾತ್ರಾ ಅರಣ್ಯ ಪ್ರದೇಶವಿದ್ದು, ಕೊಡಗು ಹಾಗೂ ಶಿವಮೊಗ್ಗ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ತೀವ್ರ ಕುಂಠಿತವಾಗಿದೆ. ಅರಣ್ಯ ಇಲಾಖೆಯ ವಿರುದ್ಧ ಸೇಡಿನ ಮನೋಭಾವದೊಂದಿಗೆ ಬೇಸಿಗೆಯಲ್ಲಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುತ್ತಿರುವ ಹಿನ್ನೆಲೆ ಪ್ರಾಣಿ ಪಕ್ಷಿಗಳಿಗೆ ಸಂಚಾಕಾರ ಉಂಟಾಗಿದೆ. ನಾವು ಅರಣ್ಯ ರಕ್ಷಣೆಗಾಗಿಯೇ ನಿಯೋಜಿಸಲ್ಪಟ್ಟಿದ್ದು ಅರಣ್ಯ ನೀತಿಯನ್ನು ಪಾಲಿಸುವದು ಅನಿವಾರ್ಯವಾಗಿದೆ. ನಾವು ಖಂಡಿತ ಕಾಡಿನ ಮಕ್ಕಳ ವಿರೋಧಿಗಳಲ್ಲ. ತಿತಿಮತಿ ಟಿಂಬರ್ ಡಿಪೆÇೀ ಸಮೀಪ ಈಗಾಗಲೇ ಅರಣ್ಯದ ಅಂಚಿನಲ್ಲಿ ಪುನರ್ವಸತಿಗಾಗಿ 56 ಎಕರೆ ಡಿ ನೋಟಿಫಿಕೇಷನ್ ಮೂಲಕ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿಯೂ ಶನಿವಾರ ದಿನ( ತಾ.6) ಸುಮಾರು 464 ಎಕರೆಯನ್ನು ಗಿರಿಜನರ ಸ್ಥಳಾಂತರಕ್ಕಾಗಿ ಗುರುತಿಸಲಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ನಿರಂತರ ಮರಹನನ, ಅರಣ್ಯ ಅಕ್ರಮದ ಹಿನ್ನೆಲೆ ಕಾಡು ಬರಿದಾಗಿದೆ. ದಕ್ಷಿಣ ಕೊಡಗಿನ ಭಾಗದಲ್ಲಿ ಒಂದಷ್ಟು ಅರಣ್ಯ ಉಳಿದಿದ್ದು ಇವುಗಳನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕೊಡಗಿನಲ್ಲಿ ಸುಮಾರು 10 ಲಕ್ಷ ಎಕರೆ ಭೂಪ್ರದೇಶವಿದ್ದು, ಇದೀಗ ಎರಡೂವರೆ ಲಕ್ಷ ಎಕರೆ ಮಾತ್ರಾ ಅರಣ್ಯಪ್ರದೇಶವಿದೆ. ಈ ಅರಣ್ಯ ಭಾಗವನ್ನೆಲ್ಲಾ ವಸತಿಗಾಗಿ ಅಳೆದು ನೀಡಿದರೆ, ಶ್ರೀಮಂತ ಅರಣ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಕಂದಾಯ ಇಲಾಖೆಯ ಸುಪರ್ದಿಯಲ್ಲಿ ಸುಮಾರು ಎರಡೂವರೆ ಲಕ್ಷ ಎಕರೆ ಸಿಎನ್ಡಿ ಭೂಮಿ, ಪೈಸಾರಿ ಜಾಗಗಳಿದ್ದು, ಶ್ರೀಮಂತ ಅತಿಕೃಮಿತರಿಂದ ತೆರವುಗೊಳಿಸಿ ಇದೀಗ ನಿರಾಶ್ರಿತರಾಗಿರುವ ಜನತೆಗೆ ವಿತರಿಸಲು ಅವಕಾಶವಿದೆ. ಆದರೆ, ಇದೀಗ ಅರಣ್ಯ ಇಲಾಖಾಧಿಕಾರಿಗಳೇ ಎಲ್ಲರಿಗೂ ವೈರಿಗಳು ಎಂದು ಬಿಂಬಿಸಲಾಗುತ್ತಿದೆ. ಗಿರಿಜನರನ್ನು ಕಾಡಿನ ಬದುಕಿನಿಂದ ಮುಕ್ತ ಗೊಳಿಸುವ ಸಲುವಾಗಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಕೆಲವೊಂದು ಅರಣ್ಯ ಪೈಸಾರಿಯನ್ನು ಪುನರ್ವಸತಿಗಾಗಿ ಕಾದಿರಿಸಲು ಪ್ರಯತ್ನ ಪಟ್ಟಿದ್ದು, ಈ ಹಿಂದಿನ ಯಾವ ಅಧಿಕಾರಿಗಳೂ ಮಾಡದ ಕೆಲಸವನ್ನು ಮಾಡಿದ್ದೇನೆ. ಇದರ ಹೊರತಾಗಿಯೂ ಪ್ರತಿಭಟನಾಕಾರರು, ಎಲ್ಲರಿಗೆ ನಾವೇ ವಿರೋಧಿಗಳಾಗುತ್ತಿರುವದು ಬೇಸರ ತರಿಸಿದೆ ಎಂದು ಅಭಿಪ್ರಾಯಪಟ್ಟರು. ಅರಣ್ಯವನ್ನು ತೊರೆದು ಬೆಳೆಗಾರರ ಕಾರ್ಮಿಕರ ಲೈನ್ ಮನೆಯಲ್ಲಿ ವಾಸವಿದ್ದ ಗಿರಿಜನರು ಇದೀಗ ತಮಗೆ ಅರಣ್ಯದಲ್ಲಿಯೇ ಜಾಗ ಕೊಡಿ ಎಂದು ಹೋರಾಟಕ್ಕಿಳಿದ ಹಿನ್ನೆಲೆ ಅಂತಹಾ ಕುಟುಂಬಗಳನ್ನೂ ಹಕ್ಕುಪತ್ರ ನೀಡಿಕೆ ಸಂದರ್ಭ ಪರಿಗಣಿಸಲು ತಾನು ಪ್ರಸ್ತಾವನೆಯಲ್ಲಿ ಸೂಚಿಸಿದ್ದೇನೆ ಎಂದು ಮನೋಜ್ಕುಮಾರ್ ಅಭಿಪ್ರಾಯಪಟ್ಟರು.
ಸಚಿವ ಸೀತಾರಾಮ್ ಭರವಸೆ
ದಿಡ್ಡಳ್ಳಿಯ ಗಿರಿಜನ ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ಹೊಂದಿಕೊಳ್ಳುವದಾಗಿಯೂ, ಒಂದೊಮ್ಮೆ ಅವರೆಲ್ಲರಿಗೂ ಪುನರ್ವಸತಿಗೆ ಅವಕಾಶವಿದ್ದಲ್ಲಿ ಸಣ್ಣ ಪ್ರದೇಶವನ್ನು ಗುರುತಿಸಿ ತಾತ್ಕಾಲಿಕ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಕೊಡಗು ವೃತ್ತ ಅರಣ್ಯ ಸಂರಕ್ಷಾಣಾಧಿಕಾರಿ ಮನೋಜ್ಕುಮಾರ್ ಹಾಗೂ ವೀರಾಜಪೇಟೆ ಡಿಸಿಎಫ್ ಶಂಕರ್ ಅವರೊಂದಿಗೂ ಮಾತೂಕತೆ ನಡೆಸುವದಾಗಿ ಕೊಡಗು ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ದೂರವಾಣಿ ಸಂಭಾಷಣೆಯಲ್ಲಿ ಶಕ್ತಿಗೆ ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ತಾ.15 ರಂದು ಮಡಿಕೇರಿಗೆ ಸಚಿವರು ಆಗಮಿಸಲಿದ್ದು, ತಾ.16 ರಂದು ದಿಡ್ಡಳ್ಳಿ ಜೇನುಕುರುಬ, ಬೆಟ್ಟಕುರುಬ ಹಾಗೂ ಪಂಜರಿಯರವರ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಲಿದ್ದೇನೆ ಎಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಗಿರಿಜನ ಪ್ರಮುಖರಾದ ಪಿ.ಬಿ.ಮುತ್ತ ಅವರು ಮಾತನಾಡಿ, ದಿಡ್ಡಳ್ಳಿ ಆದಿವಾಸಿಗಳ ಪ್ರತಿಭಟನೆ ನ್ಯಾಯೋಚಿತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಸರ್ಕಾರ ತುರ್ತು ನಿರ್ಧಾರ ಕೈಗೊಳ್ಳಬೇಕಾಗಿದೆ. ಯಾವದೇ ಕಾರಣಕ್ಕೂ ಕೊಡಗು ಜಿಲ್ಲೆಯ ಆದಿವಾಸಿಗಳನ್ನು ಹೊರಜಿಲ್ಲೆಯ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ತಮ್ಮ ವಿರೋಧವಿದೆ ಎಂದು ಹೇಳಿದರು.
ಒಟ್ಟಾರೆಯಾಗಿ ಸೋಮವಾರ ದಿನ ಅರಣ್ಯ-ಪೆÇಲೀಸ್ ಇಲಾಖೆ ಒತ್ತುವರಿದಾರರ ತೆರವಿಗೆ ಜಂಟಿ ಕಾರ್ಯಾಚರಣೆ ನಡೆಸಲಿದೆಯೇ ಅಥವಾ ಸಂಧಾನ ಮಾತೂಕತೆಗೆ ಮುಂದಾಗಲಿದೆಯೇ ಕಾದು ನೋಡಬೇಕಾಗಿದೆ. ಈ ನಡುವೆ ಜೆ.ಕೆ.ಮುತ್ತಮ್ಮ ಹೇಳಿಕೆಯಂತೆ ಮಹಿಳೆಯರು ಬೆತ್ತಲೆ ಪ್ರತಿಭಟನೆಗೆ ಮುಂದಾದಲ್ಲಿ ಕೊಡಗು ಜಿಲ್ಲೆಗೆ ಕಪ್ಪುಚುಕ್ಕೆಯಾಗಿ ಇತಿಹಾಸ ಪುಟದಲ್ಲಿ ದಾಖಲಾಗಲಿದೆ.