ನಾಪೆÇೀಕ್ಲು, ನ. 28: ದರ ಕುಸಿತ, ಕೂಲಿ ಆಳುಗಳ ತೊಂದರೆ, ಕಾಡು ಪ್ರಾಣಿಗಳ ಉಪಟಳದಿಂದ ಜಿಲ್ಲೆಯಲ್ಲಿ ಭತ್ತದ ಕೃಷಿ ಶೇ. 30ಕ್ಕೆ ಇಳಿದಿದೆ. ಆದರೆ ಪಾರಂಪರಿಕ ಕೃಷಿಯನ್ನು ಕೈಬಿಡಬಾರದು ಎಂಬ ನಿಟ್ಟಿನಲ್ಲಿ ಭತ್ತದ ಕೃಷಿ ಮಾಡುತ್ತಿರುವ ಭತ್ತದ ಬೆಳೆಗಾರರಿಗೆ ಈಗ ಸಂಕಷ್ಟ ಎದುರಾಗಿದೆ.ಹವಾಮಾನ ವೈಪರಿತ್ಯದಿಂದ ಹಲವು ಕಡೆಗಳಲ್ಲಿ ಭತ್ತದ ಬೆಳೆಯಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದೆ. ಅದರಂತೆ ಬಹುತೇಕ ಕಡೆಗಳಲ್ಲಿ ನೀರಿಲ್ಲದೆ ಭತ್ತದ ಗದ್ದೆಗಳು ಬಿರುಕು ಬಿಟ್ಟಿದೆ. ಈಗ ಭತ್ತದ ಬೆಳೆಯಲ್ಲಿ ತೆನೆ ಬರುತ್ತಿದ್ದು, ಬೆಂಕಿ ರೋಗದ ಕಾರಣ ತೆನೆಗಳು ಒಣಗಿ ಮುರಿದು ಬೀಳುತ್ತಿವೆ. ನೀರಿನ ಕೊರತೆಯಿಂದ ತೆನೆಗಳಲ್ಲಿ ಕಾಳು ಕಟ್ಟುವ ಸಾಧ್ಯತೆ ಕಡಿಮೆಯಾಗಿದ್ದು, ನಷ್ಟ ಸಂಭವಿಸಬಹುದಾಗಿದೆ.
ನೀರಿನ ಸೌಲಭ್ಯವಿರುವವರು ಬೆಳೆಗೆ ನೀರು ಹಾಯಿಸುವದರ ಮೂಲಕ ಬೆಳೆ ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಸಮೃದ್ಧಿ ಮಳೆ, ನೀರು, ಬೆಳೆಗೆ ಹೆಸರು ವಾಸಿಯಾಗಿದ್ದ ಜಿಲ್ಲೆಯಲ್ಲಿ ಬರದ ಛಾಯೆ ಮಾಡಿರುವದು ಕೃಷಿಕರನ್ನು, ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಬತ್ತಿದ ಜಲ ಮೂಲಗಳು: ಈ ವರ್ಷ ಮಳೆಯ ಕೊರತೆಯ ಕಾರಣ ನದಿ, ಹೊಳೆ, ಬಾವಿಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಹಲವಾರು ಬಾವಿಗಳಲ್ಲಿ ನೀರು ಬತ್ತಬಹುದಾದ ಆತಂಕ ವ್ಯಕ್ತವಾಗಿದೆ. ನಂತರ ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗುವ ಭೀತಿ ಮೂಡಿದೆ.
ಕಾಫಿ, ಕಾಳುಮೆಣಸು ನಷ್ಟ: ಭತ್ತದ ಬೆಳೆಯೊಂದಿಗೆ ವಾಣಿಜ್ಯ ಬೆಳೆಯಾದ ಕಾಫಿ, ಕಾಳುಮೆಣಸು ಬೆಳೆಗಳಿಗೂ ತೊಂದರೆಯಾಗಿದೆ. ನೀರಿನ ಕೊರತೆಯ ಕಾರಣ ಕಾಫಿ ಕಾಯಿ ತನ್ನ ಗಾತ್ರ ಕಳೆದುಕೊಂಡಿದೆ. ಕಾಳುಮೆಣಸು ಬಳ್ಳಿಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿದೆ. ನೀರಿನ ಕೊರತೆಯಿಂದ ಕಾಳುಮೆಣಸು ಕಾಳುಗಳೂ ಕೂಡಾ ಸಣ್ಣ ಗಾತ್ರದಲ್ಲಿಯೇ ಇದೆ. ಪರಿಣಾಮ ಕೃಷಿಕರ ಶ್ರಮಕ್ಕೆ ತಕ್ಕ ಪ್ರತಿಫಲದ ನಿರೀಕ್ಷೆಗೆ ಹೊಡೆತ ಬೀಳಲಿದೆ.
- ಪಿ.ವಿ. ಪ್ರಭಾಕರ್