ಶ್ರೀಮಂಗಲ, ಸೆ. 17: ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿರುವ ಟಿ. ಶೆಟ್ಟಿಗೇರಿ-ಬಾಡಗರಕೇರಿ, ಬಿರುನಾಣಿ, ಪರಕಟಗೇರಿ ಮಾರ್ಗವನ್ನು ಅಗಲೀಕರಣ ಮಾಡಿ ಸರಿಪಡಿಸುವಂತೆ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮಾರ್ಗದಲ್ಲಿ ದಿನನಿತ್ಯ ಸ್ಥಳೀಯರು ಪ್ರವಾಸಿಗರು, ಕಾರ್ಮಿಕರ ವಾಹನ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರಯಾಣಿಕರ ಬಸ್‍ಗಳು ಸಹ ಸಂಚರಿಸುತ್ತಿದ್ದು, ಈ ರಸ್ತೆಯ ಎರಡು ಕಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಗುಂಡಿ ಬಿದ್ದಿದೆ. ಎದುರು-ಬದುರಾಗಿ ವಾಹನಗಳು ಬಂದಾಗ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ವಾಹನಗಳನ್ನು ಚರಂಡಿಗೆ ಇಳಿಸಬೇಕಾದ ಅನಿವಾರ್ಯತೆ ಇದೆ. ಇದರಿಂದ ವಾಹನಗಳಿಗೂ ಬಹಳಷ್ಟು ಹಾನಿಯಾಗುತ್ತಿದ್ದು, ಇನ್ನೊಂದು ಕಡೆ ಅಪಘಾತಗಳು ಉಂಟಾಗುತ್ತಿದೆ. ಇದರಿಂದ ಎದುರು-ಬದುರು ವಾಹನದವರು ದಿನನಿತ್ಯ ಸಂಘರ್ಷ ನಡೆಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 100 ಕಿ.ಮೀ. ದೂರ ಹಾಗೂ ಕೇರಳದ ಗಡಿಯಲ್ಲಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.