ಶ್ರೀಮಂಗಲ, ಜ. 6: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಹಕರಿಗೆ ಸೇವೆ ಒದಗಿಸುವ ಬಿರುನಾಣಿ ಬಿ.ಎಸ್.ಎನ್.ಎಲ್ ಕೇಂದ್ರದ ಟವರ್‍ನಿಂದ ದೂರವಾಣಿ ಸಂಪರ್ಕ ಹದಗೆಟ್ಟಿದೆ. ಬಿ.ಎಸ್.ಎನ್.ಎಲ್ ಟವರನ್ನು ಖಾಸಗಿ ಏರ್‍ಟೆಲ್ ದೂರವಾಣಿ ಸಂಸ್ಥೆಗೆ ಬಾಡಿಗೆಗೆ ನೀಡಿದ್ದು, ತದ ನಂತರ ಬಿ.ಎಸ್.ಎನ್.ಎಲ್ ಮೊಬೈಲ್ ಸೇವೆ ತೀವ್ರವಾಗಿ ಹದಗೆಟ್ಟಿದೆ. ಬಿ.ಎಸ್.ಎನ್.ಎಲ್ ಇಲಾಖೆಯ ಅಧಿಕಾರಿಗಳು ಖಾಸಗಿ ದೂರವಾಣಿ ಸಂಸ್ಥೆಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನು ಖಂಡಿಸಿ ಬಿರುನಾಣಿ ಬಿ.ಎಸ್.ಎನ್.ಎಲ್ ದೂರವಾಣಿ ಕೇಂದ್ರದೆದುರು ತಾ. 9ಕ್ಕೆ ಪ್ರತಿಭಟನೆ ನಡೆಸುವದಾಗಿ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಲ್ಯಮೀದೇರಿರ ಸುರೇಶ್ ಪ್ರಕಟಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಿರುನಾಣಿ ದೂರವಾಣಿ ಕೇಂದ್ರದಲ್ಲಿ 500ಕ್ಕೂ ಹೆಚ್ಚು ಸ್ಥಿರ ದೂರವಾಣಿ ಸೇವೆಯಲ್ಲಿತ್ತು. ಆದರೆ ಗ್ರಾಹಕರ ದೂರುಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ ಬಿ.ಎಸ್.ಎನ್.ಎಲ್ ಇಲಾಖಾಧಿಕಾರಿಗಳ ಉದ್ಧಟತನ ದಿಂದ 450ಕ್ಕೂ ಹೆಚ್ಚು ದೂರವಾಣಿಗಳನ್ನು ಹಿಂದಿರುಗಿಸಿ ದ್ದಾರೆ. ಈ ವ್ಯಾಪ್ತಿಗೆ 5-6 ವರ್ಷದ ಹಿಂದೆ ಬಿ.ಎಸ್.ಎನ್.ಎಲ್ ವಿಲ್ ಫೋನ್ ಸಂಪರ್ಕ ನೀಡಿದ್ದರೂ, ಅದು ಚಾಲ್ತಿಯಲ್ಲಿಲ್ಲ. ಇದೀಗ ಮೊಬೈಲ್ ಸೇವೆ ಸಹ ಅತ್ಯಂತ ದುಸ್ಥಿತಿಗೆ ತಲಪಿದೆ. ಇತರ ಖಾಸಗಿ ಸಂಸ್ಥೆಗಳು 4ಜಿ, 3ಜಿ ತಂತ್ರಜ್ಞಾನ ಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಬಿ.ಎಸ್.ಎನ್. ಎಲ್ ಇಲಾಖೆಯ ದೂರವಾಣಿ ಕನಿಷ್ಟ ಮಾತನಾಡಲು ಸಂಪರ್ಕ ದೊರೆಯುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಬಿ.ಎಸ್.ಎನ್.ಎಲ್ ದೂರವಾಣಿ ಗಳನ್ನೇ ನಂಬಿಕೊಂಡಿರುವ ಗ್ರಾಹಕರನ್ನು ವಂಚಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಎಸ್.ಎನ್.ಎಲ್ ಅಧಿಕಾರಿಗಳು ಕೇವಲ ಸಂಬಳ ಎಣಿಸಿಕೊಳ್ಳುತ್ತಿದ್ದು, ಇವರ ಈ ನಿರ್ಲಕ್ಷ್ಯ ಧೋರಣೆ ಯಿಂದಲೇ ಬಿ.ಎಸ್.ಎನ್.ಎಲ್ ಇಲಾಖೆ ಜಿಲ್ಲೆಯಲ್ಲಿ ಅಧೋಗತಿಗೆ ತಲಪಿದೆ ಎಂದು ಕಿಡಿಕಾರಿದ್ದಾರೆ.