ಮಡಿಕೇರಿ, ಆ. 7: ಶಿಸ್ತು ಹಾಗೂ ಕ್ರಮಬದ್ಧ ಜೀವನಕ್ಕೆ ಮತ್ತೊಂದು ಹೆಸರು ಫೀ|| ಮಾ|| ಕೆ.ಎಂ. ಕಾರ್ಯಪ್ಪ. ನಿನ್ನೆ ದಿನ ಸೇನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಜನರಲ್ ದಲ್ಬೀರ್ ಸಿಂಗ್, ಕಾರ್ಯಪ್ಪ ಅವರ ಕುರಿತು ಅಭಿಮಾನ ತುಂಬಿದ ನುಡಿಗಳನ್ನಾಡಿದರು.

1980ರಿಂದ 84ರವರೆಗೆ ಕ್ಯಾಪ್ಟನ್ ಆಗಿದ್ದ ದಲ್ಬೀರ್ ಸಿಂಗ್ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಇನ್‍ಸ್ಟ್ರಕ್ಟರ್ ಆಗಿದ್ದರು. ಆ ಸಂದರ್ಭ ಫಿ| ಮಾ| ಕಾರ್ಯಪ್ಪ ಅವರು ಶಾಲೆಗೆ ಭೇಟಿ ನೀಡಿದ್ದರು. ಕಾರ್ಯಪ್ಪ ಅವರನ್ನು ನೋಡಿ ಮೈಪುಳಕ ಗೊಂಡಿತು ಎನ್ನುತ್ತಾರೆ ದಲ್ಬೀರ್ ಸಿಂಗ್. ಬಳಿಕ ಹಲವು ಬಾರಿ ಅವರನ್ನು ಭೇಟಿಯಾಗಿದ್ದು ಒಮ್ಮೆ ವಿಧಾನ ಸೌಧಕ್ಕೆ ಜೊತೆಯಲ್ಲಿ ಹೋಗುವ ಅವಕಾಶ ಇತ್ತಂತೆ. ಜೊತೆಯಲ್ಲಿ ನಡೆದು ಮೆಟ್ಟಿಲೇರುತ್ತಿ ದ್ದಂತೆ ಫಿ| ಮಾ| ಕಾರ್ಯಪ್ಪ ಅವರು ಒಮ್ಮೆಗೆ ಹಿಂದಕ್ಕೆ ವಾಲಿ ಬೀಳುವಂತಾದರಂತೆ. ಕೂಡಲೇ ಕ್ಯಾ| ದಲ್ಬೀರ್ ಸಿಂಗ್ ಅವರನ್ನು ಹಿಡಿದುಕೊಂಡರು. ಕೂಡಲೇ ಪ್ರತಿಕ್ರಿಯಿಸಿದ ಕಾರ್ಯಪ್ಪ, ಕೈ ಕೊಡವಿ - ನೋಡು, ನನ್ನ ಕೈ ಹಿಡಿಯಲು ಬರಬೇಡ, ಅಷ್ಟೇ ಅಲ್ಲ ನಾನು ಬಿದ್ದರೂ ಎತ್ತಬಾರದು, ನಾನೇ ಏಳುತ್ತೇನೆ ಎಂದರಂತೆ. ಆ ಮಾತುಗಳನ್ನು ಸಭೆಯಲ್ಲಿ ಸ್ಮರಿಸಿದ ದಲ್ಬೀರ್ ಸಿಂಗ್ ಅಂತಹ ಶಿಸ್ತಿನ ಸಿಪಾಯಿಗಳನ್ನು ಕೊಡುಗೆ ನೀಡಿದ ಕೊಡಗಿನ ಮಣ್ಣು ಪವಿತ್ರ ಎಂದರು.

ದಲ್ಬೀರ್ ಸಿಂಗ್

ಎತ್ತರ ಆರಡಿ ಇದ್ದರೂ ನೋಡಲು ಸಾಮಾನ್ಯರÀಂತಿರುವ ಜ|| ದಲ್ಬೀರ್ ಸಿಂಗ್ ಸ್ವತಃ ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಹರ್ಯಾಣದ ಬಿಶÀನ್ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಗ್ರಾಮೀಣ ಹುಡುಗ ದಲ್ಬೀರ್ ಸಿಂಗ್ ಮರದ ನೆರಳಿನಲ್ಲಿ ನಡೆಸುವ ಶಾಲೆ, ಎರಡು ಕೋಣೆಯ ಶಾಲೆಗಳಲ್ಲಿ ಓದಿದವರು. ತಂದೆ ರಾಮ್ಮೋಹತ್ ಆರ್ಮಿ ಸುಬೇದಾರ್ ಆಗಿದ್ದು, ಅವರ ಮೂರು ತಲೆಮಾರು ಸೇನೆಯಲ್ಲಿ ಗುರುತಿಸಿಕೊಂಡಿದೆ. ಕುರುಕ್ಷೇತ್ರದ ಪಕ್ಕವಿರುವ ಬಿಶನ್ ಗ್ರಾಮದ ಹೆಚ್ಚಿನ ಮಂದಿ ಕೊಡಗಿನಂತೇ ಸೇನಾ ಹಿನ್ನೆಲೆ ಹೊಂದಿದವರು. ಆದರೆ ಅಲ್ಲಿ ಹೆಚ್ಚು ಬಡತನವಿದೆ.

ಹಂತ ಹಂತವಾಗಿ ಸೇನೆಯಲ್ಲಿ ಮೇಲೇರಿದ ಜ|| ದಲ್ಬೀರ್ ಸಿಂಗ್ ನಿತ್ಯ ಹತ್ತು ಕಿಲೋಮೀಟರ್ ಓಡುತ್ತಾರೆ. ಕುದುರೆ ಸವಾರಿ ಮಾಡುತ್ತಾರೆ. ಘೊರ್ಕಾ ರೆಜಿಮೆಂಟನ್ನೂ ನಡೆಸಿದ ಇವರಿಗೆ ಪ್ರತಿಷ್ಠಿತ ವಿಶಿಷ್ಟ ಸೇವಾ ಮೆಡಲ್, ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಸೇವಾ ಮೆಡಲ್ ಹಾಗೂ ಅತಿ ವಿಶಿಷ್ಟ ಸೇವಾ ಮೆಡಲ್ ದೊರೆತಿದ್ದು, ಫೀ|| ಮಾ|| ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಫೀ|| ಮಾ|| ಮಾಣೆಕ್ಷಾ ಅವರಂತೆ ಗೌರವಕ್ಕೆ ಪಾತ್ರರಾಗಿದ್ದಾರೆ.