ಸೋಮವಾರಪೇಟೆ, ನ. 20: ಐಗೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕೇವಲ ಒಂದು ಕೋಮಿಗೆ ಸೀಮಿತವಾದಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳ ಈ ಕ್ರಮ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಾ. 11 ರಂದು ಐಗೂರಿನ ಮಸೀದಿ ಯೊಂದಕ್ಕೆ ನುಗ್ಗಿದ್ದೂ ಅಲ್ಲದೇ ಮುಸಲ್ಮಾನರ ಪವಿತ್ರ ಗ್ರಂಥವಾದ ಕುರ್ಆನ್ ಅನ್ನು ಸುಟ್ಟು ಹಾಕಿರುವ ಪ್ರಕರಣ ಹಾಗೂ ತಾ. 13 ರಂದು ಆರ್ಎಸ್ಎಸ್ ಮುಖಂಡ ಪದ್ಮನಾಭ ಅವರ ಕಾರು ಸ್ಪೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಸಕರುಗಳು ಮಸೀದಿಗೆ ಭೇಟಿ ನೀಡದೇ, ಪದ್ಮನಾಭ ಅವರ ಮನೆಗೆ ಮಾತ್ರ ಭೇಟಿ ನೀಡಿ ಸಾಂತ್ವನ ಹೇಳಿ ಹೋಗಿ ದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಸಂದರ್ಭ ಆಯಾ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಪ್ರಚಾರ ನಡೆಸುವದು ಅನಿವಾರ್ಯ. ಆದರೆ ಜನಪ್ರತಿನಿಧಿಗಳಾಗಿ ಆಯ್ಕೆಯಾದ ನಂತರ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ತಾವು ಮಸೀದಿ ಹಾಗೂ ವಕೀಲ ಪದ್ಮನಾಭ ಅವರ ಮನೆಗೂ ಕೂಡ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಎರಡೂ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಲೋಕೇಶ್ ಆಗ್ರಹಿಸಿದರು. ಎರಡೂ ಪ್ರಕರಣದ ಕುರಿತು ಈಗಾಗಲೇ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ರೊಂದಿಗೆ ಚರ್ಚಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ ಎಂದು ಈ ಸಂದರ್ಭ ಅವರು ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ಇದೇ ರೀತಿ ಗಲಭೆಗಳು ಮುಂದುವರೆದಲ್ಲಿ ವ್ಯಾಪಾರೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಧಕ್ಕೆಯಾಗಲಿದ್ದು, ಕೊಡಗಿನ ಆರ್ಥಿಕ ವ್ಯವಸ್ಥೆ ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್ ಹಾಗೂ ಪ್ರಜ್ವಲ್ ಉಪಸ್ಥಿತರಿದ್ದರು.