ಬೆಂಗಳೂರು, ಜು. 13: ಡಿವೈಎಸ್ಪಿ ಗಣಪತಿ ಸಾವು ರಾಜ್ಯ ವಿಧಾನಮಂಡಲವನ್ನು ಇಂದು ಮತ್ತೆ ಅಲುಗಿಸಿದ್ದು, ವಿಪಕ್ಷ ನಾಯಕರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತೇನೆ ಎಂದು ಹೇಳುತ್ತಿದ್ದಂತೆಯೇ ಬಾವಿಗೆ ನುಗ್ಗಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿಬಿಐಗೆ ತನಿಖೆ ಒಪ್ಪಿಸಬೇಕು. ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಮತ್ತು ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯ ಆರಂಭಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸದನ ಮುಗಿಯುವವರೆಗೂ ಧರಣಿ ಮುಂದುವರಿಸುವದಾಗಿ ಹೇಳಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ಆಡಳಿತ ಗೂಂಡಾ ರಾಜ್ಯದಂತಾಗಿದ್ದು, ಗಣಪತಿ ಸಾವಿಗೆ ಕೆ.ಜೆ. ಜಾರ್ಜ್ ನೇರ ಕಾರಣರಾದರೂ ಅವರನ್ನು ಸರ್ಕಾರ ರಕ್ಷಿಸುತ್ತಿದೆ ಎಂದರು. ವಿಧಾನ ಮಂಡಳ ಅಧಿವೇಶನ ಮುಗಿದು ರಾಜ್ಯಾದ್ಯಂತ ಪ್ರತಿಭಟನೆ ಮುಂದುವರೆಸುವದಾಗಿ ಹೇಳಿದರು. ಮಾಜೀ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯ ಗೃಹ ಇಲಾಖೆ ತಪ್ಪು ಹೆಜ್ಜೆ ಇಡುತ್ತಿದೆ. ಕೆಂಪಯ್ಯರಂತಹ ಅಧಿಕಾರಿಗಳ ಸಲಹೆಯಿಂದ ಹಿಡಿತ ತಪ್ಪುತ್ತಿದೆ. ಸಿಬಿಐ ತನಿಖೆ, ಎಫ್ಐಆರ್ ದಾಖಲು ಆಗುವ ತನಕ ಧರಣಿ ಮುಂದುವರೆಸುವದಾಗಿ ಹೇಳಿದರು.
ನ್ಯಾಯಾಂಗ ತನಿಖೆಗೆ ಆದೇಶ
ಇದಕ್ಕೂ ಮುನ್ನ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬುಧವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭೆಯಲ್ಲಿ ಸುಮಾರು 4 ಗಂಟೆಗಳ ಕಾಲ ಸುದೀರ್ಘ ಉತ್ತರ ನೀಡಿದ ಸಿಎಂ ಸಿದ್ಧರಾಮಯ್ಯ, ಗಣಪತಿ ಪ್ರಕರಣವನ್ನು ಸಿಬಿಐಗೆ ಕೊಡಲ್ಲ, ನಮಗೆ ಸಿಐಡಿ ಮೇಲೆ ನಂಬಿಕೆ ಇದೆ. ಆದರೂ ಉನ್ನತ ಮಟ್ಟದ ತನಿಖೆಯ ಅಗತ್ಯವಿರುವದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವದಾಗಿ ಘೋಷಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿದ್ದು, ಪ್ರಕರಣದ ತನಿಖಾ ವರದಿ ನೀಡಲು ಆರು ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ ಎಂದರು.
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಹಾಗೂ ಎಂಕೆ ಗಣಪತಿ ಆತ್ಮಹತ್ಯೆಯಿಂದ ತುಂಬಾ ದುಃಖವಾಗಿದೆ. ಇಬ್ಬರೂ ಸಹ ಯಂಗ್ ಆಫೀಸರ್ಸ್. ಇಬ್ಬರ ಸಾವಿನಿಂದ ಪೊಲೀಸ್ ಇಲಾಖೆಗೆ ನಷ್ಟವಾಗಿದೆ. ಸರ್ಕಾರದ ವತಿಯಿಂದ ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ಅಲ್ಲದೇ ಆತ್ಮಹತ್ಯೆ ಯಾವದಕ್ಕೂ ಪರಿಹಾರವಲ್ಲ ಎಂದರು.
ಗಣಪತಿ ಅವರು ಮಾಧ್ಯಮಕ್ಕೆ ನೀಡಿದ್ದು ಕೇವಲ ಹೇಳಿಕೆಯಷ್ಟೇ. ಆದ್ದರಿಂದ ಅದು ಡೈಯಿಂಗ್ ಡಿಕ್ಲಾರೇಷನ್ ಆಗಲ್ಲ.
ಕಿರುಕುಳದ ಬಗ್ಗೆ ಗಣಪತಿ ಮೇಲಧಿಕಾರಿಗಳಿಗೆ ದೂರು ಕೊಟ್ಟಿರಲಿಲ್ಲ. ನಮ್ಮ ಸರ್ಕಾರಕ್ಕೂ ಮಾನವೀಯ ಸ್ಪರ್ಶ ಇದೆ. ನಮಗೂ ಮಾನವೀಯತೆ ಇದೆ. ನಮ್ಮ ಹೇಳಿಕೆಯಿಂದ ಗಣಪತಿ ಪತ್ನಿ ಪಾವನಾ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಸಿಆರ್ ಪಿಸಿ 174ಅಲ್ಲ, 154ರ ಅಡಿ ಕೇಸ್ ದಾಖಲಿಸಬೇಕು ಎಂದು ಕುಮಾರಸ್ವಾಮಿ ಹೇಳೋದು ಸರಿಯಲ್ಲ. ಗಣಪತಿ ಮಾಧ್ಯಮ ಹೇಳಿಕೆ ಮರಣಪೂರ್ವ ಹೇಳಿಕೆ ಆಗಲ್ಲ.ಗಣಪತಿ ಹೇಳಿಕೆ ಮತ್ತು ಆತ್ಮಹತ್ಯೆಗೆ ಸಂಬಂಧವೇ ಇಲ್ಲ. ಅಂತಹ ಯಾವದೇ ಚಾನ್ಸ್ ಈ ಕೇಸ್ ನಲ್ಲಿ ಇಲ್ಲ. ಸಿಆರ್ಪಿಸಿ 154 ಯಾವಾಗ ಬರುತ್ತೆ ಅಂದರೆ ಗುರುತರ ಅಪರಾಧ ಎಂದು ಶಂಕೆ ಬಂದರೆ ಮಾತ್ರ. ಗಣಪತಿ ಪ್ರಕರಣದಲ್ಲಿ ಗುರುತರ ಅಪರಾಧ ಕಂಡು ಬಂದಿಲ್ಲ. ಈ ಪ್ರಕರಣದಲ್ಲಿ ಕಾಗ್ನಿಜಬಲ್ ಎಂದು ತನಿಖಾಧಿಕಾರಿಗೆ ಕಂಡು ಬಂದರೆ 154ರ ಅಡಿ ಕೇಸ್ ದಾಖಲಿಸಿಕೊಳ್ಳಬಹುದು. ಈ ರೀತಿ ಸಾಕಷ್ಟು ಪ್ರಕರಣಗಳು ಸುಪ್ರೀಂ ತೀರ್ಪಿನಲ್ಲಿದೆ ಎಂದು ಸಿಎಂ ಉಲ್ಲೇಖಿಸಿದರು.
ಸಿದ್ಧರಾಮಯ್ಯ ಅವರ ಉತ್ತರದ ಇತರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
* ಡಿವೈಎಸ್ಪಿ ಗಣಪತಿ ಅವರು ಬೆಂಗಳೂರಿಗೆ ಹೋಗುವದಾಗಿ ಅಂದು ಹೊರಟು ಮಡಿಕೇರಿಗೆ ಬಂದಿದ್ದರು. 11.30ರ ಸುಮಾರಿಗೆ ಟಿವಿ ಮಾಧ್ಯಮಗಳ ಕಚೇರಿಗೆ ಹೋಗಿ ಮಧ್ಯಾಹ್ನ 1.45ರ ಸುಮಾರಿಗೆ ವಿನಾಯಕ ಲಾಡ್ಜ್ಗೆ ಬಂದಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡರು.
* ಟಿವಿ ಮಾಧ್ಯಮದವರು ಪೊಲೀಸರಿಗೆ ಅಥವಾ ಅವರ ಕುಟುಂಬದವರಿಗೆ ಗಣಪತಿ ಅವರ ಹೇಳಿಕೆ ಬಗ್ಗೆ ಮಾಹಿತಿ ನೀಡಿದ್ದರೆ ಗಣಪತಿ ಅವರ ಸಾವನ್ನು ತಪ್ಪಿಸುವ ಸಾಧ್ಯತೆ ಇತ್ತು. ಅಂದು ಸಂಜೆ 5 ಗಂಟೆಗೆ ಇನ್ಸ್ಪೆಕ್ಟರ್ ಮೇದಪ್ಪ ಅವರಿಗೆ ಮಾಹಿತಿ ನೀಡಲಾಗಿದೆ. ಮೊದಲೇ ತಿಳಿಸಿದ್ದರೆ ಜೀವ ಉಳಿಸಬಹುದಿತ್ತು.
* ಟಿವಿ ಮಾಧ್ಯಮಗಳ ಜೊತೆ ಮಾತನಾಡುವಾಗ ನಿರೂಪಕರು ಕೇಳಿದ್ದಕ್ಕೆ ‘ನನ್ನ ಜೀವಕ್ಕೆ ಅಪಾಯವಾದರೆ ಇವರು ಕಾರಣ’ ಎಂದು ಗಣಪತಿ ಅವರು ಹೇಳಿದ್ದಾರೆ. ಇದನ್ನು ಮೊದಲಿಗೆ ಊಹಿಸಿ ಪೊಲೀಸರಿಗೆ ತಿಳಿಸಿದ್ದರೆ, ಸಾವು ತಪ್ಪಿಸಬಹುದಿತ್ತು.
* ಟಿವಿ ನಿರೂಪಕರು ಕೇಳಿದ್ದಕ್ಕೆ ‘ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ’ ಎಂದು ಹೇಳಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿಲ್ಲ
‘ಎಂ.ಕೆ.ಗಣಪತಿ ಅವರ ಪತ್ನಿ ಮತ್ತು ಮಕ್ಕಳ ದೂರನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ ಕಾರಣ ನಾನು ವಕೀಲರನ್ನು ನೇಮಕ ಮಾಡಿ, ಗಣಪತಿ ಅವರ ಪುತ್ರ ನೇಹಾಲ್ ಮೂಲಕ ಮಡಿಕೇರಿ ಜೆಎಂಎಫ್ಸಿ ಕೋರ್ಟ್ನಲ್ಲಿ ಖಾಸಗಿ ದೂರು ಕೊಡಿಸಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಬಗ್ಗೆ ಕೋರ್ಟ್ನಲ್ಲೇ ತೀರ್ಮಾನವಾಗಲಿ’
* ಗಣಪತಿ ಅವರು ಸುಮಾರು 22 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಿದ್ದಾರೆ. ಆದರೆ, ಎಂದಿಗೂ
*ಹಿರಿಯ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಯಾವ ಅಧಿಕಾರಿಗಳಿಗೂ ಹೇಳಿಲ್ಲ. ಎಲ್ಲಿಯೂ ದೂರು ಕೊಟ್ಟಿಲ್ಲ. ಇದನ್ನು ಪ್ರತಿಪಕ್ಷದವರು ಒಪ್ಪಬೇಕು.
* 2008ರ ಚರ್ಚ್ ಧಾಳಿಯ ಬಳಿಕ ಕೆ.ಜೆ.ಜಾರ್ಜ್ ಪೂರ್ವಾಗ್ರಹ ಪೀಡಿತರಾಗಿದ್ದರು ಎಂಬದು ಸುಳ್ಳು. ಚರ್ಚ್ ಧಾಳಿ ನಡೆದು ಐದು ವರ್ಷಗಳ ಬಳಿಕ ಜಾರ್ಜ್ ಅವರು ಸಚಿವರಾದರು. 2013ರ ಜುಲೈನಲ್ಲಿ ಜಾರ್ಜ್ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಆಗ ಅವರು ಚರ್ಚ್, ದೇವಾಲಯಕ್ಕೆ ಭೇಟಿ ನೀಡಿದ್ದರು.
‘ಕಾನೂನಿನ ಬಗ್ಗೆ ಬೋಪಯ್ಯ ಅವರಿಗೆ ಹೇಳುವ ಅಗತ್ಯವಿಲ್ಲ. ಅವರು ಲಾಯರ್ ಆಗಿದ್ದವರು ಅಲ್ಲವೇ? ಆರ್.ವಿ. ದೇಶಪಾಂಡೆ ಅವರ ತಂದೆ ಉತ್ತಮ ಲಾಯರ್ ಆಗಿದ್ದರು. ಇವರು ಸರಿಯಾಗಿ ಪ್ರಾಕ್ಟೀಸ್ ಮಾಡಿದಂತೆ ಕಾಣುತ್ತಿಲ್ಲ. ನಮಗೆ ಉತ್ತಮ ಪ್ರಾಕ್ಟೀಸ್ ಆಗಿದ್ದರೆ ಇಲ್ಲಿಗೆ ಏಕೆ ಬರುತ್ತಿದ್ದೆವು. ರಮೇಶ್ ಕುಮಾರ್ ಅವರು ಲಾ ಓದದೆ ಲಾಯರ್ ಆಗಿದ್ದಾರೆ’
* 2013ರ ಸೆಪ್ಟೆಂಬರ್ನಲ್ಲಿ ಎಂ.ಕೆ.ಗಣಪತಿ ಅವರಿಗೆ ರಾಜಗೋಪಾಲ ನಗರಕ್ಕೆ ಪೋಸ್ಟಿಂಗ್ ಆಯಿತು. ಆಗ ಜಾರ್ಜ್ ಅವರು ಗೃಹ ಸಚಿವರಾಗಿದ್ದರು. ಜಾರ್ಜ್ ಅವರು ಪೂರ್ವಾಗ್ರಹ ಪೀಡಿತರಾಗಿದ್ದರೆ. ಪೋಸ್ಟಿಂಗ್ ಆಗದಂತೆ ತಡೆಯಬಹುದಿತ್ತಲ್ಲವೇ?
* ಎಂ.ಕೆ.ಗಣಪತಿ ಅವರು ವೀಡಿಯೋದಲ್ಲಿ ಜಾರ್ಜ್ ಅವರ ಜೊತೆಗೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ. ಪ್ರಸಾದ್ ಅವರ ಹೆಸರನ್ನು ಹೇಳಿದ್ದಾರೆ. ಆದರೆ, ಅವರು ಎಂದೂ ಮೊಹಂತಿ ಅವರ ಕೈ ಕೆಳಗೆ ಕೆಲಸವನ್ನು ಮಾಡಿಲ್ಲ.