ಸಿದ್ದಾಪುರ, ಸೆ. 6: ಬಿ.ಜೆ.ಪಿ.ಯ ಗೊಂದಲದ ಹೇಳಿಕೆಯನ್ನು ಖಂಡಿಸುವದಾಗಿ ಸಿದ್ದಾಪುರ ಎಸ್ಡಿಪಿಐ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರಾದ ಶೌಕತ್ ಅಲಿ, ಹುಸೈನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸದಸ್ಯ ಹುಸೈನ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ರಾಜೀನಾಮೆ ನೀಡಿ ಸ್ಥಾನೀಯ ಬಿಜೆಪಿಯೊಂದಿಗೆ ಕೈಜೊಡಿಸಿದ್ದಲ್ಲಿ ಒಂದು ತಿಂಗಳ ಗಡುವಿನಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇತ್ಯರ್ಥ ಪಡಿಸುವದಾಗಿ ಹೇಳಿಕೆ ನೀಡಿರುವ ಸಿದ್ದಾಪುರ ಸ್ಥಾನೀಯ ಬಿಜೆಪಿ ಸಮಿತಿ ಅಧ್ಯಕ್ಷ ಮನೋಹರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಪಂಚಾಯಿತಿ ಚುನಾವಣೆಯಲ್ಲಿ ಒಂದು ಸ್ಥಾನ ಪಡೆಯುವಲ್ಲೂ ಸ್ಥಾನೀಯ ಬಿಜೆಪಿ ಪಕ್ಷ ವಿಫಲವಾಗಿದೆ. ಸಿದ್ದಾಪುರ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ತಾಲೂಕು ಶಾಸಕರು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಾವದೇ ಪ್ರಯತ್ನ ಮಾಡದೆ ಕಾಲಹರಣ ಮಾಡಿದ್ದಾರೆ. ಸಿದ್ದಾಪುರವನ್ನು ತ್ಯಾಜ್ಯ ಮುಕ್ತ ಮಾಡುವದು ಆಡಳಿತ ಮಂಡಳಿ ಹಾಗೂ ಎಸ್ಡಿಪಿಐ ಪಕ್ಷದ ಸದಸ್ಯರ ಪ್ರಯತ್ನವಾಗಿದ್ದು, ಸರ್ವ ಸದಸ್ಯರ ಹೋರಾಟ ಹಾಗೂ ಸಂಘ-ಸಂಸ್ಥೆಗಳ ಸಹಾಯದಿಂದ ಸಿದ್ದಾಪುರ ಪಟ್ಟಣಕ್ಕೆ ಜಿಲ್ಲಾಧಿಕಾರಿಗಳ ಪ್ರಯತ್ನದಿಂದ ಶಾಶ್ವತ ಪರಿಹಾರಕ್ಕೆ ಸ್ಥಳ ದೊರಕಿದೆ. ಈ ಹಿನ್ನೆಲೆ ಯಾರು ಹತಾಶರಾಗುವದು ಬೇಡ. ಅಬಿವೃದ್ಧಿಗೆ ಸಹಕರಿಸುವಂತೆ ಹೇಳಿದರು. ಸದಸ್ಯ ಶೌಕತ್ ಅಲಿ ಮಾತನಾಡಿ, ಅಬಿವೃದ್ಧಿ ಕುರಿತು ಯಾವದೇ ಪಕ್ಷ ಕರೆ ನೀಡಲಿ ತಾನು ಸಹಕಾರ ನೀಡುವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಎಸ್ಡಿಪಿಐ ಪಕ್ಷದ ಹನೀಫ್,ಶೌಕತ್ ಅಲಿ, ಹುಸೈನ್ ಹಾಜರಿದ್ದರು.