ಕುಶಾಲನಗರ, ನ. 25: ಹೊಸಪಟ್ಟಣದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ಕೆ.ಸಿಂಗ್ ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸಿದರು. ಶುಕ್ರವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಡಿಐಜಿ ಬಿ.ಕೆ.ಸಿಂಗ್ ದರೋಡೆ ನಡೆದ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಹೊಸಪಟ್ಟಣದಲ್ಲಿ ಕುಟುಂಬ ವರ್ಗ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ ತಲೆಮರೆಸಿಕೊಂಡಿರುವವರ ಪತ್ತೆ ಕಾರ್ಯಕ್ಕೆ ಅಗತ್ಯ ಮಾರ್ಗದರ್ಶನ ನೀಡಿದರು. ಈಗಾಗಲೇ ದರೋಡೆ ಕೋರರ ಪೈಕಿ ಕೆಲವರನ್ನು ಪೊಲೀಸರು ಬಂಧಿಸಿದ್ದು ಇದೇ ಸಂದರ್ಭ ದರೋಡೆಕೋರರಿಂದ ವಶಪಡಿಸಿಕೊಳ್ಳಲಾದ ಅಲ್ಪ ಪ್ರಮಾಣದ ಆಭರಣಗಳನ್ನು ಮಾಲೀಕರ ಸಮ್ಮುಖದಲ್ಲಿ ಬಿ.ಕೆ.ಸಿಂಗ್ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರೋಡೆಕೋರರ ಪೈಕಿ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಗ್ರಾಮಸ್ಥರ ಸಹಕಾರದಿಂದ ಪೊಲೀಸರು ಕೆಲವು ಆರೋಪಿಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವವರ ಬಗ್ಗೆ ಮಾಹಿತಿ ದೊರೆತಿದ್ದು ಅವರನ್ನು ಸಧ್ಯದಲ್ಲಿಯೇ ಪತ್ತೆಹಚ್ಚಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ಡಿವೈಎಸ್ಪಿ ಸಂಪತ್ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಇನ್ಸ್ಪೆಕ್ಟರ್ ಕರೀಂ ರಾವುತರ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಇದ್ದರು.
ಕೊಡಗು ಜಿಲ್ಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಬಗ್ಗೆ ಹಬ್ಬಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಬಿ.ಕೆ.ಸಿಂಗ್, ಭಾಗಮಂಡಲದಲ್ಲಿ ಶಾಲಾ ಬಾಲಕನೋರ್ವ ಆಗಂತುಕರ ಬಗ್ಗೆ ನೀಡಿರುವ ಮಾಹಿತಿ ನಿಖರವಾಗಿಲ್ಲದ ಕಾರಣ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ. ಸಂಶಯಾಸ್ಪದ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯ ಆರಂಭಗೊಂಡಿದೆ. ಅನುಮಾನಾಸ್ಪ ದವಾಗಿ ಕೆಲವು ವ್ಯಕ್ತಿಗಳು ಕಂಡುಬಂದಿರುವ ಬಗ್ಗೆ ಸ್ಥಳೀಯರ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆ ಈಗಾಗಲೇ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದರು.