ಶ್ರೀಮಂಗಲ, ಜ. 9: ಗುಡ್ಡಗಾಡು ಪ್ರದೇಶವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿ.ಎಸ್. ಎನ್.ಎಲ್ ಸ್ಥಿರ ದೂರವಾಣಿ ಹಾಗೂ ಮೊಬೈಲ್ ದೂರವಾಣಿಗಳ ಸೇವೆಯನ್ನು ಎರಡು ತಿಂಗಳ ಒಳಗೆ ಸರಿಪಡಿಸುವ ಹಾಗೂ ಇಲ್ಲಿನ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೇವೆಯನ್ನು ಮೇಲ್ದರ್ಜೆಗೇರಿಸುವ ಲಿಖಿತ ಭರವಸೆಯನ್ನು ಬಿ.ಎಸ್. ಎನ್. ಎಲ್ ಇಲಾಖಾಧಿಕಾರಿಗಳು ನೀಡಿದ ಹಿನೆÀ್ನಲೆಯಲ್ಲಿ ಬಿರುನಾಣಿ ದೂರವಾಣಿ ಕೇಂದ್ರದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ವಾಪಾಸ್ಸು ಪಡೆಯಲಾಯಿತು.
ಮುಂದಿನ 2 ತಿಂಗಳ ಒಳಗೆ ಈ ವ್ಯಾಪ್ತಿಯ ಎಲ್ಲಾ ಸ್ಥಿರ ದೂರವಾಣಿಗಳನ್ನು ಸರಿಪಡಿಸಬೇಕು. ಸ್ಥಿರ ದೂರವಾಣಿ ಬೇಡಿಕೆ ಇರುವವರಿಗೆ ಸೌಲಭ್ಯ ನೀಡಬೇಕು. ಬಿರುನಾಣಿ ಮೊಬೈಲ್ ಟವರ್ ತಗ್ಗು ಪ್ರದೇಶದಲ್ಲಿದ್ದು, ಎಲ್ಲಾ ಪ್ರದೇಶಕ್ಕೆ ಸೇವೆ ಲಭ್ಯವಾಗುತ್ತಿಲ್ಲ. ಅಲ್ಲದೇ ಹೆಚ್ಚಿನ ಗ್ರಾಹಕರ ದೂರವಾಣಿ ಬಳಕೆ ಸಾಂಧÀ್ರತೆ ಇದೆ. ಆದ್ದರಿಂದ ಬಾಡಗರಕೇರಿ, ತೆರಾಲು ಹಾಗೂ ಬಿರುನಾಣಿ ಪಟ್ಟಣಕ್ಕೆ ಪ್ರತ್ಯೇಕ ಮೊಬೈಲ್ ಟವರ್ ಸ್ಥಾಪಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗೋಣಿಕೊಪ್ಪ ಎಸ್.ಡಿ.ಇ. ಕ್ಯಾತಶೆಟ್ಟಿ, ಮೊಬೈಲ್ ಸೇವೆಯ ಜೆ.ಇ. ಬಿಜು, ಬಿರುನಾಣಿ ಜೆ.ಟಿ.ಒ ಜೋಸೆಫ್ ಅವರು ಪ್ರತಿಭಟನಾಕಾರರಿಗೆ ಲಿಖಿತವಾಗಿ ನೀಡಿದರು.
ಮಾರ್ಚ್ 10ರ ಒಳಗೆ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಟಿ. ಶೆಟ್ಟಿಗೇರಿ-ಬಿರುನಾಣಿ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದು, ಈ ಸಂಧರ್ಭ ಜಿಲ್ಲಾ ಬಿ.ಎಸ್.ಎನ್. ಎಲ್ ಟಿ.ಡಿ.ಎಂ. ಹಾಗೂ ಮೇಲಧಿಕಾರಿಗಳು ಖುದ್ದಾಗಿ ಆಗಮಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವದೆಂದು ಪ್ರತಿಭಟನಾಕಾರರು ತಿಳಿಸಿದರು.
ಲೈನ್ಮೆನ್ ಬಗ್ಗೆ ಅಸಮಧಾನ: ಬಿರುನಾಣಿ ದೂರವಾಣಿ ಕೇಂದ್ರದ ಲೈನ್ಮೆನ್ ಮಂಜು ಅವರು ಸ್ಥಳೀಯ ಜನರ ಗುರುತಿನ ಚೀಟಿಗಳನ್ನು ಬಳಸಿಕೊಂಡು ಅಸ್ಸಾಂ ಹಾಗೂ ಬಾಂಗ್ಲ ದೇಶದ ಕಾರ್ಮಿಕರಿಗೆ ಸಿಮ್ ಮಾರುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರದಲ್ಲಿ ವಿದ್ಯುತ್ ಇದ್ದಾಗ ಮಾತ್ರ ದೂರವಾಣಿಗಳು ಚಾಲನೆಯಲ್ಲಿದ್ದು, ವಿದ್ಯುತ್ ಕಡಿತವಾದ ನಂತರ ಸ್ಥಗಿತವಾಗುತ್ತದೆ. ವಿದ್ಯುತ್ ಕಡಿತ ಸಂಧರ್ಭ ಜನರೇಟರ್ ಬಳಸುತ್ತಿಲ್ಲ. ಆದರೆ ಇಲ್ಲಿಗೆ ಡೀಸೆಲ್ ಪೂರೈಸಲಾಗುತ್ತಿದ್ದು, ಈ ಬಗ್ಗೆ ಅವ್ಯವಹಾರವಾಗಿದೆ ಎಂದು ತನಿಖೆಗೆ ಒತ್ತಾಯಿಸಿದರು.
ಟಿ.ಡಿ.ಎಂ ಶ್ಯಾಮಲ ಭಟ್ಟ್ ಅವರು ಪ್ರತಿಭಟನೆ ಸ್ಥಳಕ್ಕೆ ಬಂದು ಗ್ರಾಹಕರ ಅಹವಾಲು ಕೇಳಬೇಕಿತ್ತು. ಆದರೆ ಅವರ ಮಡಿಕೇರಿ ಕಚೇರಿಗೆ ಬಿರುನಾಣಿಯಿಂದ ದೂರವಾಣಿ ಸಮಸ್ಯೆ ಬಗ್ಗೆ ಹೇಳಲು ಹೋದಾಗ ಸ್ಥಳೀಯ ಗ್ರಾಹಕ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಬಾಡಗರಕೇರಿಗೆ ಹೊಸ ಟವರ್: ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನಕ್ಕೆ ನೂತನ ಟವರ್ ಮಂಜೂರಾಗಿದೆ. ಹಾಗೆಯೇ ತೆರಾಲು, ಬಿರುನಾಣಿಗೆ ಪ್ರತ್ಯೇಕ ಟವರ್ ಅಳವಡಿಸಲು ಹಾಗೂ ಬಿರುನಾಣಿ ಪಟ್ಟಣಕ್ಕೆ ವೈ-ಫÉೈ ಸಂಪರ್ಕ ನೀಡಲು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವದಾಗಿ ಎಸ್.ಡಿ.ಇ. ಕ್ಯಾತಶೆಟ್ಟಿ ಹೇಳಿದರು.
ಪ್ರತಿಭಟನೆಯಲ್ಲಿ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಲ್ಯಮೀದೇರಿರ ಕೆ.ಸುರೇಶ್ ಸದಸ್ಯರಾದ ಕಾಯಪಂಡ ಸುನಿಲ್, ಅಣ್ಣೀರ ಮಲ್ಲಿಗೆ, ಅಮ್ಮತ್ತಿರ ರೇವತಿ ಪರಮೇಶ್ವರ್, ಬೊಟ್ಟಂಗಡ ಗಿರೀಶ್, ತಾ.ಪಂ. ಮಾಜಿ ಸದಸ್ಯರಾದ ಬೊಟ್ಟಂಗಡ ಎಂ. ರಾಜು, ಬೊಳ್ಳೇರ ಪೊನ್ನಪ್ಪ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬೊಟ್ಟಂಗಡ ಮುತ್ತಪ್ಪ, ಪ್ರಮುಖರಾದ ನೆಲ್ಲೀರ ಮನು, ಗುಡ್ಡಮಾಡ ಸುಬ್ರಮಣಿ, ಚೊಟ್ಟಂಗಡ ಬೋಸು, ಕೀಕಣಮಾಡ ಮನು, ಚೇರಂಡ ಸಂತೋಷ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.