ವೀರಾಜಪೇಟೆ, ನ. 26: ವೀರಾಜಪೇಟೆಯ ಪಂಜರ್‍ಪೇಟೆಗೆ ಒತ್ತಾಗಿರುವ ಅಂಬಟ್ಟಿ ಗ್ರಾಮದ ಎ.ಆರ್. ಆನಂದ ಎಂಬವರಿಗೆ ಸೇರಿದ ಕುಡಿಯುವ ನೀರಿನ ಬಾವಿಯಲ್ಲಿರಿಸಿದ್ದ ಮೋಟಾರ್ ಅನ್ನು ಕದನೂರು ಗ್ರಾಮದ ಪಾಲೆಕಂಡ ಕುಟ್ಟಯ್ಯ ಹಾಗೂ ಅವರ ಜೊತೆಯಲ್ಲಿದ್ದ ಅಪರಿಚಿತರು ಕಳವು ಮಾಡಿದ್ದಾರೆ ಎಂಬ ಆರೋಪದ ಮೇರೆ ನಗರ ಪೊಲೀಸರು ಐ.ಪಿ.ಸಿ. 1860 ಹಾಗೂ 379 ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

ತಾ. 23 ರಂದು ಅಪರಾಹ್ನ 3.30 ಗಂಟೆಗೆ ಕುಟ್ಟಪ್ಪ, ಇತರರು ಬಂದು ತನ್ನ ಮನೆಯಿಂದ 100 ಅಡಿ ದೂರವಿರುವ ಬಾವಿಯಿಂದ ಮೋಟಾರ್ ಕಳವು ಮಾಡಿದ್ದಾರೆ. ಅವರ ಬಳಿ ಮಾರಕಾಸ್ತ್ರ ಇದ್ದುದರಿಂದ ಅವರ ಬಳಿಗೆ ಹೋಗಲು ಸಾಧ್ಯವಾಗಿಲ್ಲ. ಪತ್ನಿ ಅನಾರೋಗ್ಯದ ನಿಮಿತ್ತ ಅದೇ ದಿನ ದೂರು ಕೊಡಲು ಸಾಧ್ಯವಾಗಲಿಲ್ಲ. ಈ ಮೋಟಾರು ಕಳವಿನಿಂದ ಕುಟುಂಬ ಹಾಗೂ ಜಾನುವಾರುಗಳಿಗೆ ಮೂರು ದಿನಗಳಿಂದ ಕುಡಿಯುವ ನೀರಿಲ್ಲದಂತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸ್ತಿಗೆ ಸಂಬಂಧಿಸಿದಂತೆ ನಮ್ಮ ಕುಟುಂಬಕ್ಕೂ ಹಾಗೂ ಪುಲಿಯೇರಿ ಗ್ರಾಮದ ತಾರಾ, ಭರತ್ ಹಾಗೂ ಸುಶೀಲಾ ಇವರುಗಳ ನಡುವೆ ನ್ಯಾಯಾಲಯದಲ್ಲಿ ವಿವಾದವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.