ಇಂದು ಬೆಳಿಗ್ಗೆ ವಿಷಯ ತಿಳಿದ ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಬೆಳಗಿನ ಜಾವ ನಡೆದ ಹುಲಿ ಧಾಳಿಯ ಘಟನೆಯ ವಿವರವನ್ನು ಗಾಯಾಳುವಿನ ಸಂಬಂಧಿಕರಿಂದ ತಿಳಿದು ಬೊಳ್ಳುವಿನ ಕುಟುಂಬಕ್ಕೆ ರೂ 10,000 ನಗದು ಪರಿಹಾರದ ಚೆಕ್ ನೀಡಿ ಸಾಂತ್ವನ ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಕೊಡಗಿನಲ್ಲಿ ಕಾಡಾನೆ ಧಾಳಿ, ಹುಲಿ ಧಾಳಿಗೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಹಾಗೂ ಅರಣ್ಯ ಮಂತ್ರಿಗೆ ಅನೇಕ ಬಾರಿ ಮನವಿ ಪತ್ರ ಕಳಿಸಲಾಯಿತು. ಇಬ್ಬರು ಕೊಡಗಿನ ಬಗ್ಗೆ ಮಲ ತಾಯಿ ಧೋರಣೆ ಅನುಸರಿಸುತ್ತಿರುವದರಿಂದ ಕೊಡಗಿನ ಜನತೆ, ಗ್ರಾಮಸ್ಥರು, ಬೆಳೆಗಾರರಿಗೆ, ಕಾಡಾನೆ ಹಾಗೂ ಹುಲಿಯಿಂದ ರಕ್ಷಣೆ ದೊರೆಯುತ್ತಿಲ್ಲ. ದಕ್ಷಿಣ ಕೊಡಗಿನಲ್ಲಿ ಈ ತನಕ 23 ಜಾನುವಾರುಗಳು ಹುಲಿ ಧಾಳಿಗೆ ಬಲಿಯಾಗಿ 25 ಮಂದಿ ಅಮಾಯಕರು ಕಾಡಾನೆ ಧಾಳಿಗೆ ಬಲಿಯಾಗಿದ್ದಾರೆ. ಸಚಿವ ರಮಾನಾಥ್ ರೈ ಈ ಕುರಿತು ಇದಕ್ಕೆ ಸ್ಪಂದಿಸದಿರುವದು ವಿಷಾದನೀಯ. ಸಂಘ, ಸಂಸ್ಥೆಗಳು, ಗ್ರಾಮಸ್ತರ ನೆರವಿನಿಂದ ಸಚಿವರು, ಇಲಾಖೆ ವಿರುದ್ದ ಪ್ರತಿಭಟನೆಯೊಂದೇ ಮಾರ್ಗವಾಗಿದೆ ಈ ಬಗ್ಗೆ ಅರಣ್ಯ ಸಚಿವರನ್ನು 3 ದಿನದಲ್ಲಿ ಭೇಟಿಯಾಗಿ ಸಮಸ್ಯೆಯ ಬಗ್ಗೆ ಚರ್ಚಿಸುವದಾಗಿ ಗಡುವು ನೀಡಿದರು.
ಇದೇ ಸಂದರ್ಭದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷದ ಅಧ್ಯಕ್ಷ ಮನೆಯಪಂಡ ಬೆಳ್ಳಿಯಪ್ಪ, ಬಾಳೆಲೆ ಹೋಬಳಿ ಅಧ್ಯಕ್ಷ ಎ.ಐ.ಸುಬ್ಬಯ್ಯ, ಪಕ್ಷದ ಮುಖಂಡರುಗಳಾದ ಹಾಗೂ ಮಾಜಿ ಅಧ್ಯಕ್ಷ ಎಂ.ಸಿ.ದೇವಯ್ಯ, ಬಾಳೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘು, ನಿಟ್ಟೂರು ಪಂಚಾಯಿತಿ ಮಾಜಿ ಸದಸ್ಯ ಅಕ್ಬರ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್.ಮತೀನ್, ಮಹಿಳಾ ವಿಭಾಗದ ಬಿ.ಎಸ್.ಜ್ಯೋತಿ ಹುಲಿ - ಕಾಡಾನೆ ಧಾಳಿಯಲ್ಲಿ ಸರಕಾರದ ವೈಫಲ್ಯತೆ ಬಗ್ಗೆ ಮಾತನಾಡಿದರು.(ಮೊದಲ ಪುಟದಿಂದ) ಹಾಗೂ ಆಜು ಬಾಜಿನ ತೋಟದವರು ಬಂದು ಬೊಳ್ಳುವನ್ನು ತಕ್ಷಣ ಮೈಸೂರಿನ ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ 4ಗಂಟೆ ವೇಳೆಗೆ ತಿತಿಮತಿಯ ಹುಲಿ ಧಾಳಿ ಸಂರಕ್ಷಣಾ ದಳ, ಅರಣ್ಯ ಇಲಾಖೆ 6 ಗಂಟೆಗೆ ಪೊನ್ನಂಪೇಟೆ ಪೊಲೀಸರಿಗೂ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಸಂರಕ್ಷಣಾ ದಳ ಬೆಳಗಿನ ಜಾವ ಧಾಳಿಯ ಸ್ಥಳಕ್ಕೆ ಧಾವಿಸಿ ಘಟನೆಯ ಮಹಜರು ನಡೆಸಿದ್ದಾರೆ. ಎರಡು ಸಾಕಾನೆಗಳ ಮೂಲಕ ಬೆ¼ಗ್ಗಿನಿಂದಲೇ ಹುಲಿಯ ಶೋಧ ಕಾರ್ಯ ಆರಂಭಿಸಿದ್ದು ಇಂದಿನ ಸಂಜೆಯವರೆಗೂ ಧಾಳಿ ಮಾಡಿದ ಹುಲಿ ಎಲ್ಲಿದೆ ಎಂಬದು ಪತ್ತೆಯಾಗಿಲ್ಲವೆನ್ನಲಾಗಿದೆ.
ಇಂದು ಬೆಳಗಿನ ಜಾವ ಧಾಳಿ ಮಾಡಿದ ಹುಲಿ ಅಲ್ಲಿನ ಆಜು ಬಾಜು ನಿವಾಸಿಗಳ ಪ್ರಕಾರ ಎರಡು ಮೂರು ದಿನಗಳಿಂದ ಇದೇ ಕಾಫಿ ತೋಟದ ಸುತ್ತ ಮುತ್ತ ಸಂಚರಿಸುತ್ತಿದ್ದು ನಿನ್ನೆ ದಿನ ಅಪರಾಹ್ನವು ಈ ಹುಲಿಯನ್ನು ಗ್ರಾಮಸ್ಥರು ನೋಡಿದ್ದಾರೆ. ಹುಲಿಯ ಕುತ್ತಿಗೆಯ ಭಾಗದಲ್ಲಿ ಗಾಯವಾಗಿದ್ದು ನೋವಿನಿಂದ ನರಳುತ್ತಿರುವುದಾಗಿ ವೀಕ್ಷಕರು ತಿಳಿಸುತ್ತಾರೆ. ಈ ಹುಲಿ ಧಾಳಿಯಿಂದ ದೇವನೂರು ಗ್ರಾಮಸ್ಥರು ಭಯಭೀತರಾಗಿದ್ದು ಗ್ರಾಮದಲ್ಲಿ ಸಂಚರಿಸಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹುಲಿ ಸಂರಕ್ಷಣಾ ಘಟಕದ ಸಿಬ್ಬಂದಿಗಳು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಪೊನ್ನಂಪೇಟೆ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಗಣಪತಿ ಸಿಬ್ಬಂದಿಗಳು ಘಟನೆಯ ಸ್ಥಳದಲ್ಲಿ ಹಾಜರಿದ್ದರು. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಪೃಥ್ವಿ, ಬಾಳೆಲೆ ಪಂಚಾಯಿತಿಯ ಕೆಲವು ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಕಾಫಿ ತೋಟದ ಮಾಲೀಕ ತಾರಾ ಅಯ್ಯಮ್ಮ ಅವರು ಮಾಧ್ಯಮದವರೊಂದಿಗೆ ಹುಲಿ ಧಾಳಿಯ ಬಗ್ಗೆ ಪ್ರತಿಕ್ರಿಯಿಸಿ ಈ ಸಮಸ್ಯೆ ಒಂದು ದಿನದ್ದಲ್ಲ. ಗ್ರಾಮಸ್ಥರು ನಿರಂತರವಾಗಿ ಈ ಸಮಸ್ಯೆಯನ್ನು ಅನುಭವಿಸಬೇಕಾಗಿದೆ. ಗ್ರಾಮದಲ್ಲಿ ಭಯದ ವಾತಾವರಣದಲ್ಲಿ ಸಂಚರಿಸಬೇಕಾಗಿದೆ. ದೇವನೂರು ಗ್ರಾಮದ ಎಲ್ಲಾ ಬೆಳೆಗಾರರಿಗೂ ಈ ಸಮಸ್ಯೆ ಇದೆ. ಇದಕ್ಕೆ ಸರಕಾರ ಶಾಶ್ವತವಾಗಿ ಪರಿಹಾರ ಕಂಡು ಹಿಡಿಯಬೇಕಾಗಿದೆ. ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.
ಸಲಗಗಳ ಸಹಕಾರ
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯಲು ದಿನಿವಿಡಿ ಹರಸಾಹಸಪಟ್ಟರು ಸಫಲವಾಗಲಿಲ್ಲ. ಸಿಸಿಎಫ್ ಮನೋಜ್ ಕುಮಾರ್, ಡಿಸಿಎಫ್ ಎಂ.ಎಂ.ಜಯ,ಎಸಿಎಫ್‍ಗಳಾದ ಪ್ರಸನ್ನಕುಮಾರ್ ಪಟಗಾರ್, ಬೆಳ್ಳಿಯಪ್ಪ, ಆರ್‍ಎಫ್‍ಗಳಾದ ಕಿರಣ್ ಕುಮಾರ್, ಗೋಪಾಲ್ ಹಾಗೂ ಸಿಬ್ಬಂದಿ ವರ್ಗದವರು ಹುಲಿಸೆರೆಗೆ ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದರು.
ಮತ್ತಿಗೋಡು ಸಾಕಾನೆ ಶಬಿರದ ದಸರಾ ಆನೆಗಳಾದ ಅಭಿಮನ್ಯು, ದ್ರೋಣ, ಕೃಷ್ಣ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದರು. ಇದರಲ್ಲಿ ಹುಲಿ ಸಂರಕ್ಷಣಾ ಪಡೆಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಸುಮಾರು 80 ಜನರ ತಂಡ ಬಂದೂಕು, ಅರವಳಿಕೆ ಮದ್ದು, ಬೋನು, ಬಲೆಗಳನ್ನು ಬಳಸಿಕೊಂಡು ಸನ್ನದ್ದರಾಗಿದ್ದರು.
ಮಲ್ಲೂರಿನ ಲಕ್ಷ್ಮಣ ತೀರ್ಥ ನದಿ ತೀರದಿಂದ ಕಾರ್ಯಾಚರಣೆಗೆ ಮುಂದಾದರು. ಹುಲಿಯ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ತಂಡಕ್ಕೆ ಹುಲಿಯ ಯಾವದೇ ಗುರುತುಗಳು ಕಂಡು ಬರಲಿಲ್ಲ. ಆದರೂ ಕಾರ್ಯಾಚರಣೆ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು ಮುಂದಿನ ಎರಡು ದಿನಗಳ ಕಾರ್ಯಾಚರಣೆ ನಡೆಸಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಹುಲಿ ಕಾರ್ಯಾಚರಣೆಯನ್ನು ತಿತಿಮತಿ, ಮತ್ತಿಗೋಡು ಮೂರ್ಕಲ್ಲು ಬಾಗಗಳಿಂದ ಆರಂಭಿಸಿದ್ದಾರೆ. ಸ್ಥಳೀಯರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣ ಮಾಡ ರಂಜನ್ ಚಂಗಪ್ಪ ಮಾತನಾಡಿ ಕಳೆದ ಎರಡು ದಿನಗಳಿಂದ ಹುಲಿ ಈ ಭಾಗದಲ್ಲಿ ಕಾಣಿಸಿಕೊಂಡು ಜನತೆಯಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿತ್ತು ಎಂದು ಹೇಳಿದರು. ಇದೀಗ ಕಾಫಿ ಕೊಯ್ಲಿನ ಸಂದರ್ಭವಾಗಿದ್ದು ಕಾರ್ಮಿಕರು ಭಯಭೀತರಾಗಿದ್ದಾರೆ ಎಂದು ತಿಳಿಸಿದರು.ಚಿತ್ರ - ವರದಿ : ಡಿ.ಎಂ. ರಾಜ್‍ಕುಮಾರ್ / ದಿನೇಶ್ ಎನ್.ಎನ್.