*ಗೋಣಿಕೊಪ್ಪಲುಮ ಆ. 27: ಪೊನ್ನಂಪೇಟೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಕಳಪೆ ಕಾಮಗಾರಿಯಿಂದ ಕೂಡಿದ್ದು, ಕೇವಲ 4 ವರ್ಷಗಳ ಅವಧಿಯಲ್ಲಿಯೇ ಕುಸಿದು ಬೀಳುವ ಹಂತ ತಲಪಿದೆ.
ಕಳೆದ 4 ವರ್ಷಗಳ ಹಿಂದೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕು ಮೂಡುವ ದಿಶೆಯಲ್ಲಿ ನಿರ್ಮಾಣವಾದ ಪೊನ್ನಂಪೇಟೆಯ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಆಗರವಾಗಿದ್ದು, ಕಳಪೆ ಕಾಮಗಾರಿಯ ಕಟ್ಟಡ ಯಾವಾಗ ಕುಸಿದು ಬೀಳುವದೂ ಎಂಬ ಆಂತಕ ವ್ಯಕ್ತವಾಗಿದೆ.
ಸುಮಾರು 23 ವಿದ್ಯಾರ್ಥಿಗಳು ಇಲ್ಲಿ ಸದ್ಯಕ್ಕೆ ವಾಸವಿದ್ದು, ವಿದ್ಯಾರ್ಥಿಗಳು ಬಳಸುವ ಕಂಬಳಿ, ಬೆಡ್‍ಸೀಟ್‍ಗಳು ಗಬ್ಬುನಾಥ ಬೀರುತ್ತಿದ್ದು, ಕಟ್ಟಡ ಕಾಮಗಾರಿಯಾದ ನಂತರ ಯಾವದೇ ಸುಣ್ಣ ಬಣ್ಣ ಬಳಿಯದೇ ಭೂತ ಬಂಗಲೆಯಂತೆ ಗೋಚರಿಸುತ್ತಿದೆ.
ಊಟದ ಮನೆ ಹಾಗೂ ಶೌಚಲಯದ ಮೇಲ್ಛಾವಣಿ ಸೋರುತ್ತಿದ್ದು, ಇದರೊಂದಿಗೆ ಕಟ್ಟಡದ ನಾನಾ ಸ್ಥಳಗಳಲ್ಲಿ ಗೋಡೆಯ ಮೂಲಕ ನೀರು ಒಳ ಸೇರುತ್ತಿದ್ದು, ನೋಡಲು ತುಂಬಾ ಅಸಯ್ಯವಾಗಿ ಗೋಚರಿಸುತ್ತಿದೆ.
ಗೋಡೆಗಳು ಸಾಕಷ್ಟು ಸ್ಥಳಗಳಲ್ಲಿ ಬಿರುಕು ಬಿಟ್ಟಿದ್ದು, ಕಾಮಗಾರಿಗೆ ಬಳಸಿದ್ದ ಕಳಪೆ ಸಿಮೆಂಟ್ ಇಟ್ಟಿಗೆಗಳು ಉದುರಿ ಹುಡಿಯಾಗಿ ಬೀಳುತ್ತಿದ್ದು, ಕಟ್ಟಡ ಯಾವ ಸಂದರ್ಭದಲ್ಲಿ ಬೀಳುತ್ತದೋ ಎಂಬ ಆಂತಕದಲ್ಲಿ ವಿದ್ಯಾರ್ಥಿಗಳು ಕಾಲ ಕಳೆಯುವಂತ್ತಾಗಿದೆ.
ಡಿ ಗ್ರೂಪ್ ನೌಕರರ ಕೊರತೆಯಿಂದ ಕೊರಗುತ್ತಿರುವ ನಿಲಯದಲ್ಲಿ ಅಡುಗೆ ಕಾರ್ಯ ನೋಡಿಕೊಳ್ಳುತ್ತಿರುವ ರತ್ನಮ್ಮ ಶುಚಿತ್ವದ ಜವಾಬ್ದಾರಿಯನ್ನು ಹೊತ್ತುಕೊಂಡು ಸಾಗ ಹಾಕುತ್ತಿದ್ದು, ಇಲ್ಲಿ ವಿತರಿಸುವ ಅಕ್ಕಿಯು ಸಹ ಕಳಪೆ ಮಟ್ಟದಿಂದ ಕೂಡಿದೆ.
ಗೋಡೆಯ ತುಂಬ ಉತ್ತಮವಾದ ಸಂದೇಶವನ್ನು ಸಾರುವ ಬರಹಗಳನ್ನು ಬರೆಸಿದರು, ಸರಕಾರ ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ಹಾಕಿಕೊಂಡರು, ವ್ಯವಸ್ಥೆಯನ್ನು ಸರಿಮಾಡುವ ನಿಟ್ಟಿನಲ್ಲಿ ಯಾವೋಬ್ಬ ಅಧಿಕಾರಿ ನಿಗಾ ವಹಿಸದೆ ಜಾಣ ಕುರುಡುತನವನ್ನು ತೋರಿಸುತ್ತಿದೆ.
ಈ ಬಗ್ಗೆ ವಿಷಯ ತಿಳಿದು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಜನ ಪ್ರತಿನಿಧಿಗಳಾದ ಪೊನ್ನಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೆರ ಸುಮಿತಾ ಗಣೇಶ್, ತಾಲೂಕು ಪಂಚಾಯತ್ ಸದಸ್ಯೆ ಮೂಕಳೆರ ಅಶಾ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಜಾ ಅಚ್ಚುತನ್ ಇಲ್ಲಿಯ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಮೇಲ್ವಿಚಾರಕ ರತ್ನಯ್ಯನನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಂತರ ಮಾತನಾಡಿದ ಮೂಕಳೆರ ಅಶಾ ಜಿ.ಪಂ. ಹಾಗೂ ತಾ.ಪಂ. ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ವಿಸ್ತರಣಾ ಅಧಿಕಾರಿ ಜಾಲಿಯವರು ನಿಲಯದಲ್ಲಿ ಯಾವದೇ ಸಮಸ್ಯೆಗಳಿಲ್ಲದಂತೆ ವರದಿಗಳನ್ನು ಮಂಡಿಸುತ್ತಿದ್ದು, ಯಾವೊಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಶ್ನೆ ಮಾಡದ ರೀತಿಯಲ್ಲಿ ಸಮರ್ಥನೆಯನ್ನು ನೀಡುತ್ತಿದ್ದುದರಿಂದ ಯಾರೊಬ್ಬರಿಗೂ ಇಲ್ಲಿಯ ಸಮಸ್ಯೆಗಳು ಮನವರಿಕೆಯಾಗಿಲ್ಲ, ಮುಂದಿನ ಸಭೆಯಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವದು ಎಂದು ತಿಳಿಸಿದರು.