ಮಡಿಕೇರಿ, ಜು. 20: ಕೊಡಗು ಜಿಲ್ಲೆಯಲ್ಲಿ ಬಾಣೆ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ನಿಗದಿಪಡಿಸುವ ವಿಚಾರ ಇನ್ನೂ ಇತ್ಯರ್ಥವಾಗದಿರುವ ಕುರಿತು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿಶೇಷ ಸಭೆ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಸಾವಿರಾರು ಎಕರೆ ಬಾಣೆ ಜಮೀನು ಗಳನ್ನು ಹಲವಾರು ವರ್ಷಗಳಿಂದ ಸಕ್ರಮಗೊಳಿಸ ದಿರುವ ಬಗ್ಗೆ ಹಾಗೂ ಸದರಿ ಜಮೀನುಗಳಿಗೆ ಕಂದಾಯ ಅಸೆಸ್ಮೆಂಟ್ ಮಾಡದಿರುವದರಿಂದ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗಿದೆ. ಈ ಜಮೀನುಗಳನ್ನ ಸರ್ವೆ ಮಾಡಿಸಿ ಕಂದಾಯ ನಿಗದಿಪಡಿಸಲು 40 ಸರ್ವೆಯರ್ಗಳ ಅಗತ್ಯವಿದೆ. ಈ ಕುರಿತು ತಾ. 3.9.2015ರಂದು ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕಂದಾಯ ನಿಗದಿ ಪಡಿಸುವ ಉದ್ದೇಶಕ್ಕೆ ಹಾಗೂ ನಿರ್ದಿಷ್ಟ ಅವಧಿ ಗೊತ್ತು ಪಡಿಸಿ ಒಬ್ಬರು ವಿಶೇಷ ಜಿಲ್ಲಾಧಿಕಾರಿಯನ್ನು ನೇಮಿಸಲು ಕೊಡಗು ಜಿಲ್ಲಾಧಿಕಾರಿಗಳು 28.12.2015ರಲ್ಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈ ತನಕವೂ ಯಾವದೇ ಕ್ರಮ ಆದಂತಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಉಸ್ತುವಾರಿ ಸಚಿವ ಸೀತಾರಾಂ ಕಂದಾಯ ಸಚಿವರಿಗೆ ಮನವಿ ಮಾಡಿದ್ದಾರೆ.