ಸೋಮವಾರಪೇಟೆ, ಡಿ. 18: ತಾಲೂಕಿನಾದ್ಯಂತ ಕೂಲಿ ಕಾರ್ಮಿಕರ ಸೋಗಿನಲ್ಲಿ ಅಸ್ಸಾಮಿಗರ ಹೆಸರಿನಲ್ಲಿ ಬೀಡುಬಿಟ್ಟಿರುವ ಅಕ್ರಮ ಬಾಂಗ್ಲಾ ವಲಸಿಗರಿಂದ ಸ್ಥಳೀಯ ಕಾರ್ಮಿಕರಿಗೆ ತೀವ್ರ ತೊಂದರೆ ಎದುರಾಗಿದ್ದು, ಇದರೊಂದಿಗೆ ಮರಳು ಸಮಸ್ಯೆಯೂ ಜನಸಾಮಾನ್ಯರನ್ನು ಕಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ತಾ. 19 ರಂದು (ಇಂದು) ಸೋಮವಾರಪೇಟೆ ಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ದೀಪಕ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ವತಿಯಿಂದ ಪ್ರತಿಭಟನೆ ಆಯೋಜಿಸಿದ್ದು, ಬೆಳಿಗ್ಗೆ 10 ಗಂಟೆಗೆ ನಗರದ ವಿವೇಕಾನಂದ ವೃತ್ತದಿಂದ ಬೃಹತ್ ಮೆರವಣಿಗೆ ನಂತರ ಜೇಸೀ ವೇದಿಕೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿಸಿದರು.
ಬಾಂಗ್ಲಾ ವಲಸಿಗರ ಹಾವಳಿಯಿಂದ ಕೊಡಗು ಜಿಲ್ಲೆಗೆ ಮುಂದಿನ ದಿನಗಳಲ್ಲಿ ಭಾರೀ ಗಂಡಾಂತರ ಕಾದಿದೆ. ಸ್ಥಳೀಯ ಕಾರ್ಮಿಕರು ಜೀವನ ನಡೆಸಲು ಅಸಾಧ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ಬಾಂಗ್ಲಾ ವಲಸಿಗರಿಂದ ಜಿಲ್ಲೆಯಲ್ಲಿ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಗಂಭೀರವಾಗಿ ಚಿಂತನೆ ಹರಿಸುತ್ತಿಲ್ಲ ಎಂದು ದೀಪಕ್ ಆರೋಪಿಸಿದರು.
ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಬಾಂಗ್ಲಾ ವಲಸಿಗರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಎದುರಾಗುವ ಮುಂಚೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಶೇಷ ಕಾಳಜಿ ವಹಿಸುವದು, ಕಾಫಿ ತೋಟಗಳಲ್ಲಿ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡುವದು, ಜಿಲ್ಲೆಯ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ತಿಂಗಳಿಗೆ ಕನಿಷ್ಟ 3 ಲೀಟರ್ ಸೀಮೆಎಣ್ಣೆ ಒದಗಿಸುವದು.
ಸೋಮವಾರಪೇಟೆ ಸಮೀಪದ ಜೇಡಿಗುಂಡಿಯಲ್ಲಿ ಈ ಹಿಂದೆ ನೇಪಾಳಿ ಪ್ರಜೆ ತೋಟ ಮಾಲೀಕನನ್ನು ಹತ್ಯೆಗೈದಂತಹ ಘಟನೆಗಳು ಮರುಕಳಿಸುವ ಮುನ್ನ ಎಚ್ಚೆತ್ತು ಕೊಳ್ಳುವದು, ಸೋಮವಾರಪೇಟೆ ಯಲ್ಲಿರುವ ಕಾರ್ಮಿಕ ಕಚೇರಿಯನ್ನು ತಕ್ಷಣ ದುರಸ್ತಿಗೊಳಿಸುವದು, ರಾಜ್ಯದಲ್ಲಿ ಏಕರೂಪ ಮರಳು ನೀತಿ ಜಾರಿಗೆ ತರುವದು, ಏಕರೂಪ ಕಾರ್ಮಿಕ ವೇತನ ಜಾರಿಗೊಳಿ ಸುವದೂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜೇಸೀ ವೇದಿಕೆಯಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷ ಅಂಜನಪ್ಪ, ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ, ಕಾರ್ಮಿಕ ಸಂಘಟನೆಯ ಮುಖಂಡ ಸೋಮಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕಾರ್ಮಿಕ ಸಂಘಟನೆಗಳ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ರೋಹಿತ್ ಗೌಡ, ಕಾರ್ಮಿಕ ಘಟಕದ ಅಧ್ಯಕ್ಷ ಸಿ.ಕೆ. ಮೋಹನ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ನಗರಾಧ್ಯಕ್ಷ ಬಿ.ಎಸ್. ಮಂಜುನಾಥ್, ಚೌಡ್ಲು ಗ್ರಾ.ಪಂ. ಸದಸ್ಯ ಧರ್ಮ, ಸಿದ್ದಿವಿನಾಯಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.