ಸುಂಟಿಕೊಪ್ಪ, ಜ. 29: ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಂಗಸಮುದ್ರ ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಕೋರಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದ ಮೇರೆ ಮಡಿಕೇರಿಯಿಂದ ಕಂಬಿಬಾಣೆಗೆ ಸಂಜೆ ವೇಳೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ವಿಭಾಗದ ಹಲವು ವರ್ಷಗಳಿಂದ ಈ ಭಾಗದ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಸೌಲಭ್ಯಕ್ಕಾಗಿ ರಂಗಸಮುದ್ರ, ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ತೆರಳುವ ರಾಜ್ಯ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುತ್ತ ಬರಲಾಗಿದ್ದರೂ ಇಂದಿನವರೆಗೂ ಯಾವದೇ ಪ್ರತಿಕ್ರಿಯೆ ಸಾರಿಗೆ ಇಲಾಖೆಯಿಂದ ದೊರೆಯದಿದ್ದ ಹಿನ್ನೆಲೆ ಕಂಬಿಬಾಣೆ ಭಾಗದ ಜನತೆಯು ಈ ಭಾಗದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಗಮನಕ್ಕೆ ತಂದು ಬೇಡಿಕೆ ಸಲ್ಲಿಸಿದ್ದರು. ಜಿ.ಪಂ. ಸದಸ್ಯೆ ಅಪರ ಜಿಲ್ಲಾಧಿಕಾರಿಯವರ ಮುಖೇನ ಪುತ್ತೂರು ಘಟಕದ ಮೇಲಾಧಿಕಾರಿ ಗಳಿಗೆ ಪತ್ರ ವ್ಯವಹಾರ ನಡೆಸಿದರು. ಅಧಿಕಾರಿಗಳ ಸೂಚನೆ ಮೇರೆ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಂಗಸಮುದ್ರ, ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ಸರ್ವೆ ಕಾರ್ಯ ನಡೆಸಿದ್ದು, ಗುಡ್ಡೆಹೊಸೂರಿ ನಿಂದ ಕೊಡಗರಹಳ್ಳಿಯವರಗೆ 23 ಕಿ.ಮೀ. ರಸ್ತೆ ರಾಷ್ಟ್ರೀಕೃತವಲ್ಲದ ರಸ್ತೆಯಾಗಿದ್ದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಪರವಾನಗಿಯನ್ನು ಪಡೆಯ ಬೇಕಾಗಿರುತ್ತದೆ. ಅಲ್ಲದೆ ರಸ್ತೆ ಹಾಗೂ ಸಂಪರ್ಕ ಸೇತುವೆಗಳು ಬಹಳ ಕಿರಿದಾಗಿದ್ದು ಇಳಿಜಾರು, ತಿರುವು ಹಾಗೂ ಏಕಮುಖ ರಸ್ತೆಯಾಗಿದ್ದು ನಿಗಮದ ಬಸ್ಗಳು ಉದ್ದನೆಯಾಗಿರುವದರಿಂದ ಈ ರಸ್ತೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಷ್ಟ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಭಾಗದ ಜಿ.ಪಂ. ಸದಸ್ಯರ ಕೋರಿಕೆಯನ್ನು ಪರಿಗಣಿಸಿದ್ದ ಮೇಲಾಧಿಕಾರಿ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದಿಸೆಯಲ್ಲಿ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ ಮಾರ್ಗವಾಗಿ ಬೆಳಿಗ್ಗೆ 1 ಬಸ್ ಸಂಚರಿಸುತ್ತಿರುವಂತೆಯೇ ಸಂಜೆ 4.30 ಗಂಟೆಗೆ ಮಡಿಕೇರಿಯಿಂದ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆಗೆ ಬಸ್ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.