ಮಡಿಕೇರಿ, ಜು. 26: ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ ಎರಡನೆಯ ದಿನವಾದ ಇಂದೂ ಮುಂದುವರಿದಿದ್ದು, ಜಿಲ್ಲೆಯ ಬಹುತೇಕ ನಿನ್ನೆ ದಿನದ ಚಿತ್ರಣವೇ ಕಂಡುಬಂದಿತು. ಜಿಲ್ಲೆಯಾದ್ಯಂತ ಯಾವದೇ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ರಸ್ತೆಗಿಳಿಯಲಿಲ್ಲ. ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಸಮಸ್ಯೆಯಾಗದಿದ್ದರೂ, ಓಡಾಟಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನೇ ಅವಲಂಭಿಸಿರುವ ಮಂದಿ ಇಂದು ಕೂಡ ಪರದಾಡಿದ್ದಾರೆ. ಬಸ್‍ಗಳ ಓಡಾಟಕ್ಕೆ ಸಾರಿಗೆ ಇಲಾಖೆ ಜಿಲ್ಲೆಯಲ್ಲಿ ಪೊಲೀಸ್ ರಕ್ಷಣೆ ಕೇಳಿಲ್ಲ. ಒಂದು ವೇಳೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲೆಯಲ್ಲಿ ಬಸ್ ಓಡಿಸಲು ಮುಂದಾಗಿ ಪೊಲೀಸ್ ರಕ್ಷಣೆ ಕೋರಿದರೆ ಅಗತ್ಯ ಭದ್ರತೆ ಒದಗಿಸಲು ಸಿದ್ಧವಿರುವದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿನ ಇಂದಿನ ಪರಿಸ್ಥಿತಿಯ ಬಗ್ಗೆ ಮಾಹಿತಿಗಾಗಿ ಆರ್.ಟಿ.ಓ. ಅವರನ್ನು ‘ಶಕ್ತಿ’ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ ಸಂದರ್ಭ ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ರಾಜ್ಯದ ಹಲವೆಡೆ ಇಂದು ಸಂಜೆ ವೇಳೆಗೆ ಸರ್ಕಾರಿ ಬಸ್‍ಗಳು ರಸ್ತೆಗಿಳಿದವು. ಬೆಂಗಳೂರು, ದಾವಣಗೆರೆ, ಪುತ್ತೂರು ಸೇರಿದಂತೆ ಕೆಲವು ಊರುಗಳಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಸಂಚಾರ ಆರಂಭಿಸಿದವು. ಪೊಲೀಸ್ ಬಂದೋಬಸ್ತ್ ನಡುವೆಯೂ ಬಸ್ ಸಂಚಾರಕ್ಕೆ ಅಲ್ಲಲ್ಲಿ ಅಡ್ಡಿಯುಂಟಾಗಿದೆ.
ಈ ನಡುವೆ ಕೊಡಗಿನಲ್ಲಿ ಇಂದು ಕೂಡ ಯಾವದೇ ಬಸ್‍ಗಳು ಸಂಚಾರ ಆರಂಭಿಸಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ಕಾರಿ ಬಸ್ ನಿಲ್ದಾಣ ಬಣಗುಡುತಿತ್ತು. ‘ಶಕ್ತಿ’ಯೊಂದಿಗೆ
(ಮೊದಲ ಪುಟದಿಂದ) ಪ್ರತಿಕ್ರಿಯಿಸಿದ ಡಿಪೋ ವ್ಯವಸ್ಥಾಪಕಿ ಗೀತಾ ಅವರು ಚಾಲಕರು ಹಾಗೂ ಸಿಬ್ಬಂದಿಗಳನ್ನು ಸಂಪರ್ಕಿಸಿ ಸಂಚಾರ ಆರಂಭಿಸುವಂತೆ ತಿಳಿಸಿದ್ದು, ಅವರುಗಳು ಬಂದೊಡನೆ ಬಸ್‍ಗಳು ರಸ್ತೆಗಿಳಿಯಲಿವೆ ಎಂದು ತಿಳಿಸಿದರಾದರೂ, ಎಲ್ಲಿಯೂ ಬಸ್ ಸಂಚಾರ ಕಂಡುಬಂದಿಲ್ಲ.
ಮುಷ್ಕರ ಸಂಘಟಕರ ಅನಿಸಿಕೆಯಂತೆ ಸುಮಾರು 12 ಮಂದಿ ತರಬೇತಿ ಪಡೆಯುತ್ತಿರುವ ಸಿಬ್ಬಂದಿಗಳನ್ನು ಬಳಸಿ ಬಸ್‍ಗಳನ್ನು ರಸ್ತೆಗಿಳಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬಹುದಾದರೂ ತರಬೇತಿ ಪಡೆಯುತ್ತಿರುವರಾರು ಮಡಿಕೇರಿಯಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಮುಷ್ಕರದ ಕಾವು ಮುಂದುವರೆದಿದೆ.