ಮಡಿಕೇರಿ, ಜ. 23: ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ವಸತಿ ರಹಿತರಿಗೆ ವಸತಿ ಒದಗಿಸುವ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಅಲ್ಪಸಂಖ್ಯಾತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಶಾಸಕರು ಸರ್ಕಾರದ ಗಮನ ಸೆಳೆಯಬೇಕೆಂದು ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಪಿ.ಎ. ಹನೀಫ್, 2010-11ರಲ್ಲಿ ಅನುಷ್ಠಾನಕ್ಕೆ ಬಂದಿರುವ ಬಸವ ವಸತಿ ಯೋಜನೆ, ಇಂದಿರಾ ಆವಾಜ್ ಯೋಜನೆಗಳು ಅಲ್ಪಸಂಖ್ಯಾತರಿಗೆ ಶೇ. 10ರಷ್ಟು ಮೀಸಲಿದ್ದರೂ ಅಂದಾಜು 500 ಕುಟುಂಬಗಳಿಗಿಂತ ಹೆಚ್ಚಿನ ಜನಸಂಖ್ಯೆಯಿರುವ ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ಎರಡು ಕುಟುಂಬಗಳಿಗಾಗಿ ಮೀಸಲಿರಿಸಲಾಗುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ವೀರಾಜಪೇಟೆ ತಾಲೂಕಿನ ಬಿಳಗುಂದ, ಆರ್ಜಿ, ಬೇಟೋಳಿ ಗ್ರಾಮ ಪಂಚಾಯಿತಿಗಳು.

ಅಲ್ಪಸಂಖ್ಯಾತರು ಗಣನೀಯವಾಗಿ ಹೆಚ್ಚಿರುವ ಪ್ರದೇಶಗಳಲ್ಲಿ ಶೇಕಡಾ ಇಂತಿಷ್ಟು ಎಂದು ನಿಗದಿಪಡಿಸಿ ಯೋಜನೆಗೆ ಅರ್ಹರಾದವರನ್ನು ವಂಚಿಸಲಾಗುತ್ತಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಆದ್ದರಿಂದ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಯಲ್ಲಿ ಸಮೀಕ್ಷೆ ನಡೆಸಿ ಅರ್ಹರನ್ನು ಗುರುತಿಸಿ ಬಸವ ವಸತಿ ಯೋಜನೆಯಡಿಯಲ್ಲಿ ವಸತಿಯನ್ನು ಒದಗಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಎಸ್ಕ್ರೋ ಖಾತೆಗೆ ವಿದ್ಯುಚ್ಛಕ್ತಿ ಪಾವತಿಗಾಗಿ ಹೆಚ್ಚುವರಿ ಅನುದಾನ ಸರ್ಕಾರದಿಂದ ನೇರವಾಗಿ ಬಿಡುಗಡೆಯಾಗುತ್ತಿದ್ದು, ಹೀಗೆ ಹೆಚ್ಚುವರಿಯಾಗಿ ಪಾವತಿಯಾದ ಮೊತ್ತದಲ್ಲಿ ಉಳಿಕೆಯನ್ನು ಗ್ರಾಮ ಪಂಚಾಯಿತಿ ಖಾತೆಗಳಿಗೆ ಜಮೆ ಮಾಡಬೇಕೆಂಬ ಆದೇಶವಿದ್ದರೂ ಅದು ಪಾಲನೆಯಾಗುತ್ತಿಲ್ಲ.

ಹಣಕಾಸಿನ ಕೊರತೆಯಿಂದ ವಿವಿಧ ಗ್ರಾಮ ಪಂಚಾಯಿತಿಗಳ ಕೆಲವೊಂದು ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಸರ್ಕಾರವು ಎಸ್ಕ್ರೋ ಖಾತೆಗೆ ಬಿಡುಗಡೆ ಮಾಡುವ ಅನುದಾನವನ್ನು ನೇರವಾಗಿ ಪಂಚಾಯಿತಿ ಖಾತೆಗೆ ಜಮೆ ಮಾಡಿದ್ದಲ್ಲಿ ಉಳಿತಾಯವಾಗುವ ಮೊತ್ತದಿಂದ ಗ್ರಾಮ ಪಂಚಾಯಿತಿಗಳ ವಿವಿಧ ಕಾಮಗಾರಿಗೆ ಬಳಸಬಹುದಾಗಿದೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕುರಿತು ಗಮನ ಹರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವರಿಕೆ ಮಾಡಿಕೊಡಬೇಕು.

ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ವೀರಾಜಪೇಟೆ ತಾಲೂಕನ್ನು ಒಳಪಡಿಸಿದ್ದು, ಕೊಳವೆ ಬಾವಿ ತೆರೆಯುವದನ್ನು ನಿರ್ಬಂಧಿಸಲಾಗಿದೆ. ಕುಡಿಯುವ ನೀರಿನ ಕೊರತೆಯಿಂದ ತತ್ತರಿಸಿರುವ ಜನತೆಯ ಮೇಲೆ ಇದು ತೀವ್ರ ಪರಿಣಾಮ ಬೀರುತ್ತಿದ್ದು, ಕುಡಿಯುವ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಯಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕು ಎಂದು ಹನೀಫ್ ಆಗ್ರಹಿಸಿದ್ದಾರೆ.