ಗೋಣಿಕೊಪ್ಪಲು, ಡಿ. 18: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಸ್ಥಳೀಯ ಧವಸ ಭಂಡಾರ ಸಭಾಂಗಣದಲ್ಲಿ ಪಂಚಾಯ್ತಿ ಅಧ್ಯಕ್ಷರಾದ ಕೊಟ್ಟಂಗಡ ಸಿ.ಪ್ರಕಾಶ ಅಧ್ಯಕ್ಷತೆಯಲ್ಲಿ ಜರುಗಿತು. ನೋಡಲ್ ಅಧಿಕಾರಿಗಳಾದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಲಕ್ಷ್ಮಯ್ಯ ಗ್ರಾಮಸಭೆ ನಡೆಸಿಕೊಟ್ಟರು. ಆರಂಭದಲ್ಲಿ ಗ್ರಾಮ ಸಭೆಗೆ ಕೆಲವು ಇಲಾಖಾ ಅಧಿಕಾರಿಗಳು ಆಗಮಿಸದೇ ಇರುವ ಬಗ್ಗೆ ಗ್ರಾಮಸ್ಥರಾದ ಚೀರಂಡ ಕಂದಾ ಸುಬ್ಬಯ್ಯ, ಹಾಗೂ ದೇಯಂಡ ನಂಜಪ್ಪ,ಡಿ.ಪಿ ಬೋಪಣ್ಣ, ಪ್ರಸ್ತಾಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಭಾಗದಲ್ಲಿ ಇರುವದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದೆ ಇರುವ ಬಗ್ಗೆ ಅಧ್ಯಕ್ಷರ ಗಮನ ಸೆಳೆದರು. ಗ್ರಾಮಸ್ಥರ ಮಾತಿಗೆ ಉತ್ತರಿಸಿದ ಅಧ್ಯಕ್ಷರು ಪಂಚಾಯಿತಿಯ ನಿಯಮದಂತೆ ಎಲ್ಲಾ ಇಲಾಖಾ ಅಧಿಕಾರಿಗಳಿಗೂ ಖುದ್ದಾಗಿ ಪತ್ರ ಬರೆದು ಗ್ರಾಮ ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದೇವೆ.ಆದರೂ ಕೆಲವು ಅಧಿಕಾರಿಗಳು ಆಗಮಿಸಿಲ್ಲ ಎಂದರು. ಇವರ ಉತ್ತರಕ್ಕೆ ತೃಪ್ತರಾಗದ ಗ್ರಾಮಸ್ಥರಾದ ಡಿ.ಪಿ. ಬೊಪಣ್ಣರವರು ಗ್ರಾಮೀಣ ಪ್ರದೇಶದಲ್ಲಿರುವ ಪಂಚಾಯಿತಿಯನ್ನು ಕೆಲವು ಇಲಾಖಾ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಂಚಾಯಿತಿಯ ಸಹಕಾರದಿಂದ ಗ್ರಾಮಸ್ಥರು ಒಟ್ಟುಗೂಡಿ ಇಂತಹ ಇಲಾಖೆಗಳಿಗೆ ಚುರುಕು ಮುಟ್ಟಿಸಿ ಪ್ರತಿಭಟನೆ ಹಾದಿ ಹಿಡಿಯ ಬೇಕಾಗುತ್ತೆಂದು ಹೇಳಿದಾಗ ಗ್ರಾಮಸ್ಥರು ಇವರ ಮಾತಿಗೆ ಬೆಂಬಲ ನೀಡಿದರು.

ಪ್ರಸ್ತುತ ಬರಗಾಲವಿರುವದರಿಂದ ಗ್ರಾಮೀಣ ಭಾಗದಲ್ಲಿ ವಾಸವಿರುವ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ, ಕುಡಿಯುವ ನೀರಿನ ಬಾವಿಗಳಿಗೆ ಪಂಚಾಯಿತಿ ವತಿಯಿಂದ ರಿಂಗ್ ಅಳವಡಿಸುವಂತೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು . ಗ್ರಾಮಸ್ಥರ ಮಾತಿಗೆ ಉತ್ತರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕಳ್ಳಿಚಂಡ ಪೂಣಚ್ಚ ನವರು ಕೊಡಗು ಜಿಲ್ಲೆ ಬರಗಾಲ ಘೋಷಣೆ ಆಗಿರುವದರಿಂದ 3 ಪಂಚಾಯಿತಿಗೆ ಓರ್ವ ನೋಡಲ್ ಅಧಿಕಾರಿಯನ್ನು ಸರಕಾರ ನೇಮಿಸಿದೆ. ಕುಡಿಯುವ ನೀರಿಗಾಗಿ ಹೆಚ್ಚಿನ ಆದ್ಯತೆಯನ್ನು ನೀಡಿರುವದರಿಂದ ಗ್ರಾಮಸ್ಥರ ಪ್ರಸ್ತಾವನೆಯನ್ನು ಅಧಿಕಾರಿಗಳ ಮುಂದಿಟ್ಟು ಕುಡಿಯುವ ನೀರಿಗಾಗಿ ಕ್ರಮ ಕೈಗೊಳ್ಳಲಾಗುವದೆಂದು ಉತ್ತರಿಸಿದರು.

ಮಕ್ಕಳಾ ಕಲಿಕಾಮಟ್ಟ ಕಳಪೆ

ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ, ಮುಖ್ಯೋಪಾಧ್ಯಾಯಿನಿ ಪದ್ಮ ಗಮನ ಸೆಳೆದರು.

ಕಳೆದ ಜಿಲ್ಲಾ ಪಂಚಾಯಿತಿಯ ಸದಸ್ಯ ಮೂಕಳೇರ ಕುಶಾಲಪ್ಪನವರ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ 7 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಆದರೆ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಇಲ್ಲಿ ತನಕ ಈ ಯೋಜನೆಯಿಂದ ಜನತೆಗೆ ಪ್ರಯೋಜನೆಯಾಗಿಲ್ಲ. ಇಂತಹ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮೇಲೆ ಸಭೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಬೇಕೆಂದು ಡಿ.ಪಿ. ಬೋಪಣ್ಣ ಆಗ್ರಹಿಸಿದರು.

ಇವರ ಮಾತಿಗೆ ಗ್ರಾಮಸ್ಥರಾದ ಚೀರಂಡ ಕಂದಾ ಬೆಂಬಲಿಸಿ ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಪಟ್ಟು ಬಿಡದ ಗ್ರಾಮಸ್ಥರಾದ ದೇಯಂಡ ನಂಜಪ್ಪನವರು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ರಾದ ರಾಜೇಶ್ವರಿಯವರನ್ನು ಸಭೆಯಲ್ಲಿ ಇದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿದರು.

ಇವರ ಪ್ರಶ್ನೆಗೆ ಉತ್ತರ ನೀಡಲು ತಡಕಾಡಿದ ರಾಜೇಶ್ವರಿ ಚೆಸ್ಕಾಂನಿಂದ ವಿದ್ಯುತ್‍ಚ್ಛಕ್ತಿ ನೀಡದೆ ಇರುವದರಿಂದ ಸಮಸ್ಯೆಯಾಗಿದೆ ಎಂದು ಉತ್ತರಿಸಿದರಾದರೂ ಇದಕ್ಕೆ ಗ್ರಾಮಸ್ಥರು ಸ್ಪಂದನೆ ನೀಡಲಿಲ್ಲ. ಇವರ ಮಾತಿಗೆ ಉತ್ತರಿಸಿದ ಪಿ.ಡಿ.ಒ. ಕಳ್ಳಿಚಂಡ ಪೂಣಚ್ಚ ವಿವಿಧ ಯೋಜನೆಯಲ್ಲಿ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಡೆಸಿ ಪೈಪ್ ಲೈನ್ ಅಳವಡಿಸಿ ಸರ್ಕಾರದ ಬಿಲ್ಲನ್ನು ಹೊಂದಿಕೊಳ್ಳುತ್ತಾರೆ. ನಂತರ ಪಂಚಾಯಿತಿಗೆ ಕಾಮಗಾರಿ ಹಸ್ತಾಂತರ ಮಾಡುತ್ತಾರೆ. ಈ ಬಗ್ಗೆ ಅಳತೆ ಪುಸ್ತಕ, ಬಿಲ್ಲು ಅಂದಾಜು ಪಟ್ಟಿ ಪಂಚಾಯಿತಿಗೆ ನೀಡುತ್ತಿಲ್ಲ. ಇದರಿಂದ ಪಂಚಾಯಿತಿಯಲ್ಲಿ ಯಾವದೆ ದಾಖಲಾತಿಗಳು ಸಿಗುತ್ತಿಲ್ಲ ಎಂದು ಉತ್ತರಿಸಿದರು.

ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು ಮುಂದೆ ಬರಗಾಲ ಎದುರಾಗುವದರಿಂದ ಕುಡಿಯುವ ನೀರಿನ ತೊಂದರೆ ಆಗಲಿದೆ. 1 ತಿಂಗಳ ಒಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿ ರಾಜೇಶ್ವರಿರವರಿಗೆ ತಾಕೀತು ಮಾಡಿದರು ತಪ್ಪಿದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದೆಂದು ಎಚ್ಚರಿಸಿದರು.

ಅಸ್ಸಾಂ ಕಾರ್ಮಿಕರ ಬಗ್ಗೆ ಎಚ್ಚರ

ತೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಾಗಿ ಬಾಂಗ್ಲಾ ಹಾಗೂ ಅಸ್ಸಾಂ ಕಾರ್ಮಿಕರು ನೆಲೆಸಿದ್ದಾರೆ. ಇವರಿಂದ ಮುಂದೆ ಅಪಾಯ ಆಗುವ ಸಂಭವವಿದೆ. ಇವರ ಬಗ್ಗೆ ಕ್ರಮಕೈಗೊಳ್ಳಲು ಡಿ.ಪಿ. ಬೋಪಣ್ಣ ಪೊಲೀಸ್ ಅಧಿಕಾರಿಯ ಗಮನ ಸೆಳೆದರು. ಇವರ ಮಾತಿಗೆ ಉತ್ತರಿಸಿದ ಪೊಲೀಸ್ ಅಧಿಕಾರಿ ಈಗಾಗಲೇ ಮೇಲಾಧಿಕಾರಿಗಳಿಂದ ಠಾಣೆಗೆ ಸೂಚನೆ ಬಂದಿದ್ದು ಇಂತಹವರನ್ನು ಪತ್ತೆ ಹಚ್ಚಲು ಇಬ್ಬರು ವಿಶೇಷ ಅಧಿಕಾರಿಗಳನ್ನು ಎಲ್ಲಾ ಠಾಣೆಗಳಲ್ಲಿಯೂ ನೇಮಕ ಮಾಡಿದ್ದಾರೆ ಎಂದರು.

ಶಾಲಾ ಮೈದಾನ

ನಡಿಕೇರಿ ಶಾಲಾ ಆಟದ ಮೈದಾನ ಅಭಿವೃದ್ಧಿಗೆ 50,000 ಹಣ ಮಂಜೂರು ಮಾಡಲಾಗಿದೆ ಆದರೆ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಕೇವಲ 18000 ಹಣ ಮಂಜೂರಾಗಿದೆ. ಉಳಿದ ಹಣವನ್ನು ಪಲಾನುಭವಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಚೀರಂಡ ಕಂದಾ ಸುಬ್ಬಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.

ನಮ್ಮ ಗ್ರಾಮ ನಮ್ಮ ಯೋಜನೆ

ಪಂಚಾಯಿತಿಯಲ್ಲಿ ಮುಂದಿನ 5 ವರ್ಷಕ್ಕಾಗಿ ಕ್ರಿಯಾ ಯೋಜನೆಯನ್ನು‘ನಮ್ಮ ಗ್ರಾಮ ನಮ್ಮ ಯೋಜನೆ’ ಗಾಗಿ ಮಾಡಬೇಕಾಗಿದೆ. ಗ್ರಾಮದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕ್ರೀಯಾ ಯೋಜನೆಯಲ್ಲಿ ಸೇರಿಸಲಾಗಿದೆ. ಹಂತ ಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳ ಲಾಗುವದೆಂದು ಅಧ್ಯಕ್ಷ ಕೆ.ಸಿ. ಪ್ರಕಾಶ್ ಸಭೆಗೆ ತಿಳಿಸಿದರು.

ಸಾರ್ವಜನಿಕರಿಂದಲೇ ಅಭಿವೃದ್ಧಿಗೆ ಅಡ್ಡಿ

ಪಂಚಾಯ್ತಿ ವ್ಯಾಪ್ತಿಯ ಕೊಡಚ್ಚಿಯಲ್ಲಿ ವಾಸವಿರುವ ಬೋವಿ,ಮಡಿವಾಳ,ಜನಾಂಗದವರು ಇರುವ ಜಾಗಕ್ಕೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಪಂಚಾಯ್ತಿಯಿಂದ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಲು ಸ್ಥಳಕ್ಕೆ ತೆರಳಿದರೆ ಗ್ರಾಮದ ಜನತೆ ರಸ್ತೆ ಅಭಿವೃದ್ಧಿಗೆ ಅವಕಾಶ ಕಲ್ಪಿಸುತ್ತಿಲ್ಲ, ಅಧ್ಯಕ್ಷರ ಮಾತನ್ನು ಕೇಳುತ್ತಿಲ್ಲ. ಹೀಗಾದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ..? ಎಂದು ತಮ್ಮ ನೋವನ್ನು ಪಂಚಾಯ್ತಿ ಅಧ್ಯಕ್ಷ ಪ್ರಕಾಶ್ ಸಭೆಯ ಮುಂದೆ ತೋಡಿಕೊಂಡರು. ಇವರ ಮಾತಿಗೆ ಉತ್ತರಿಸಿದ ಗ್ರಾಮಸ್ಥರು ಅಂತಹ ಕಾಲೋನಿಗಳಿಗೆ ಮುಂದೆ ಅನುದಾನವನ್ನು ನೀಡದಂತೆ, ಯಾವದೇ ಅಭಿವೃದ್ಧಿ ಕೆಲಸಗಳು ಅಲ್ಲಿಗೆ ಮಾಡದಂತೆ ಸಭೆ ಒಮ್ಮತದ ನಿರ್ಣಯ ಕೈಗೊಂಡಿತ್ತು

ಸಭೆಯಲ್ಲಿ ಜಿ.ಪಂ ಸದಸ್ಯರಾದ ಶ್ರೀಜಾ ಸಾಜಿ ಅಚ್ಚುತ್ತನ್, ತಾ.ಪಂ. ಸದಸ್ಯರು ಗಳಾದ ಪ್ರಕಾಶ್, ಆಶಾ ಪೂಣಚ್ಚ, ಗ್ರಾ.ಪಂ ಸದಸ್ಯರಾದ ಹೆಚ್ .ಆರ್. ಇಂದಿರ, ಖುಷಿ ಕುಮಾರ್ ಸಿ.ಬಿ. ಚುಂಡೆ ,ಪ್ರೀತ್ ಪೊನ್ನಪ್ಪ, ಚೀರಂಡ ಸ್ವಾತಿ ಮುದ್ದಪ್ಪ, ಪವಿತ್ರ ಬಿ.ಎಸ್, ಬೋಪಣ್ಣ ಕೆ.ಪಿ, ಹಾಗೂ ಸಿಬ್ಬಂದಿಗಳಾದ ಮುತ್ತಣ್ಣ ಬಿ.ಜಿ. ಅರ್ಚನ ಕೆ.ಡಿ. ಸತೀಶ್, ಎಂ.ಆರ್.ಸಂಜು ಹೆಚ್.ಜಿ. ಉಪಸ್ಥಿತರಿದ್ದರು. ಆರಂಭದಲ್ಲಿ ಲತಾ ಪ್ರಾರ್ಥಿಸಿ, ಪಿ.ಡಿ.ಓ.ಪೂಣಚ್ಚ ಸ್ವಾಗತಿಸಿ ವಂದಿಸಿದರು.