ಗೋಣಿಕೊಪ್ಪಲು, ಡಿ.19: ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷರನ್ನಾಗಿ ಗೋಣಿಕೊಪ್ಪಲಿನ ಜಿಲ್ಲಾ ಬಲಿಜ ಸಮಾಜ ಸಂಘಟನಾ ಸಂಚಾಲಕ ಟಿ.ಎಲ್. ಶ್ರೀನಿವಾಸ್ ಅವರನ್ನು ಜಿಲ್ಲೆಯ ಮೂರು ತಾಲೂಕುಗಳ ಬಲಿಜ ಸಮಾಜ ಅಧ್ಯಕ್ಷರ ಸಮ್ಮುಖದಲ್ಲಿ ಅವಿರೋಧವಾಗಿ ಭಾನುವಾರ ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯ್ಕೆ ಮಾಡಲಾಗಿದೆ.
ಗೋಣಿಕೊಪ್ಪಲಿನ ಹಿರಿಯ ಬಲಿಜ ಪ್ರಮುಖ ನೇಮಿರಾಜ್ ಅಧ್ಯಕ್ಷತೆಯಲ್ಲಿ ಜರುಗಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ನಡೆಸಿಕೊಟ್ಟರು.
ಜಿಲ್ಲೆಯ ಮೂರು ತಾಲೂಕಿನಿಂದ ಒಟ್ಟು 15 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು, ಕೊಡಗು ಜಿಲ್ಲಾ ಬಲಿಜ ಸಮಾಜದ ನೂತನ ಅಧ್ಯಕ್ಷರನ್ನಾಗಿ ಟಿ.ಎಲ್.ಶ್ರೀನಿವಾಸ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ಸಮಾಜದ ಎಲ್ಲಾ ಪದಾಧಿಕಾರಿಗಳನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಟಿ.ವಿ.ಲೋಕೇಶ್ (ಮೇಕೇರಿ-ಮಡಿಕೇರಿ), ಕೋಶಾಧಿಕಾರಿಯಾಗಿ ಮೂರ್ನಾಡುವಿನ ಲೋಕನಾಥ್, ಸಂಘಟನಾ ಸಂಚಾಲಕರನ್ನಾಗಿ ಪದ್ಮಾವತಿ ಟಿ.ಎಂ. (ಮಡಿಕೇರಿ ತಾಲೂಕು), ಮಂಜುನಾಥ್ ಟಿ.ಎನ್. (ವೀರಾಜಪೇಟೆ ತಾಲೂಕು) ಹಾಗೂ ಸುಮಾ ಟಿ.ಎಲ್. (ಸೋಮವಾರಪೇಟೆ ತಾಲೂಕು), ಉಪಾಧ್ಯಕ್ಷರನ್ನಾಗಿ ಉದಯ್ಕುಮಾರ್ ಟಿ.ಹೆಚ್. (ಮಡಿಕೇರಿ), ಯತಿರಾಜ್ ಎಸ್.ಕೆ. (ವೀರಾಜಪೇಟೆ ತಾಲೂಕು) ಹಾಗೂ ಗೀತಾ ಹರೀಶ್ (ಸೋಮವಾರಪೇಟೆ ತಾಲೂಕು), ಸಹ ಕಾರ್ಯದರ್ಶಿಯಾಗಿ ಭವಾನಿ ಟಿ.ವಿ. (ಮಡಿಕೇರಿ ತಾಲೂಕು), ಟಿ.ಸಿ.ಗೀತಾ ನಾಯ್ಡು (ವೀರಾಜಪೇಟೆ ತಾಲೂಕು), ಮತ್ತು ಸ್ಪಂದನ್ (ಸೋಮವಾರಪೇಟೆ ತಾಲೂಕು) ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಕಾನೂನು ಸಲಹೆಗಾರರಾಗಿ ಮಡಿಕೇರಿ ವಕೀಲ ಸಂಜಯ್ರಾಜ್ ಎಂ.ವಿ. ಅವರನ್ನು ಆಯ್ಕೆ ಮಾಡಲಾಗಿದೆ. ಸಿದ್ಧಾಪುರದ ಮಂಜುನಾಥ್ ಮತ್ತು ಸೋಮವಾರಪೇಟೆಯ ಪ್ರಕಾಶ್ ಅವರು ಸಮಾಜದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜನಾಂಗದ ಇತಿಹಾಸ ದಾಖಲೀಕರಣ ಅಗತ್ಯ
ಜಿಲ್ಲಾ ಬಲಿಜ ಸಮಾಜದ ಏಳಿಗೆಯೊಂದಿಗೆ ಜಿಲ್ಲೆಯ ಬಲಿಜ ಸಮುದಾಯ ಸಂಘಟನೆಗೆ ಈ ಹಿಂದೆ ಶ್ರಮಿಸಿದ ಹಿರಿಯರನ್ನು ನೆನಪು ಮಾಡಿಕೊಳ್ಳಬೇಕು. ಕೊಡಗಿನ ಇತಿಹಾಸದಲ್ಲಿ ಹಾಸು ಹೊಕ್ಕಾಗಿ ಬೆಸೆದುಕೊಂಡಿರುವ ಬಲಿಜ ಜನಾಂಗದ ಇತಿಹಾಸ ದಾಖಲೀಕರಣ ಅಗತ್ಯ. ಕೊಡಗಿನಲ್ಲಿ ಬಲಿಜ ಸಮುದಾಯವನ್ನು ಕಳೆದ ಹಲವು ದಶಕಗಳಿಂದ ಸಂಘಟಿಸಲು ಜಿಲ್ಲಾ ಬಲಿಜ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದರೂ, ಒಗ್ಗಟ್ಟು ಹಾಗೂ ಒಮ್ಮತದ ಕೊರತೆ, ಪರಸ್ಪರ ವೈಷಮ್ಯ ಇತ್ಯಾದಿಗಳಿಂದಾಗಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಈವರೆಗೂ ಬಲಿಜ ಸಂಘ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ಬಲಿಜ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಬಲಿಜ ಕಾರ್ಯಕಾರಿ ಸಮಿತಿ ಆಧಾರ ಸ್ತಂಭವಾಗಿದೆ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಣತಿ
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಎಲ್ಲ್ಲಾ ಬಲಿಜ ಬಂಧುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ಜಿಲ್ಲಾ ಬಲಿಜ ಸಮಾಜದ ನೂತನ ಬೈಲಾ ತಿದ್ದುಪಡಿ, ಶೀಘ್ರ ನೋಂದಾವಣೆಯೊಂದಿಗೆ ಜಿಲ್ಲೆಯ ಎಲ್ಲಾ 104 ಗ್ರಾ.ಪಂ.ಗಳಲ್ಲಿ ನೆಲೆಸಿರುವ ಬಲಿಜ ಜನಾಂಗದ ಗಣತಿ ಕಾರ್ಯವನ್ನು ಮೂರು ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಮೊದಲಿಗೆ ಹಮ್ಮಿಕೊಳ್ಳಲಾಗುವದು ಎಂದರು. ಜಿಲ್ಲಾ ಬಲಿಜ ವಿದ್ಯಾಭಿವೃದ್ಧಿ ಸಂಘ ಹಾಗೂ ಕ್ಷೇಮನಿಧಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿಯೂ ಯೋಜನೆ ಹಾಕಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಟಿ.ಎಸ್.ಬಾಲಕೃಷ್ಣ, ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಹಾಗೂ ವೀರಾಜಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಗಣೇಶ್ ನಾಯ್ಡು ಅವರುಗಳು ನೂತನ ಜಿಲ್ಲಾ ಬಲಿಜ ಸಮಾಜ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಎಲ್ಲರೂ ಒಗ್ಗೂಡಿ ಬಲಿಜ ಜನಾಂಗದ ಏಳಿಗೆಗೆ ಶ್ರಮಿಸುವದರೊಂದಿಗೆ ರಾಜ್ಯದಲ್ಲಿಯೇ ಮಾದರಿ ಸಂಘಟನೆಗೆ ಒತ್ತು ನೀಡುವ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯರಾದ ನೇಮಿರಾಜ್ ಅವರು, ಸಮಾಜದ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದರು.
ವೇದಿಕೆಯಲ್ಲಿ ಮಡಿಕೇರಿ ವಕೀಲ ಸಂಜಯ್ರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಿತಿಮತಿ ಕಾಫಿ ಬೆಳೆಗಾರ, ಸಮಾಜ ಸೇವಕ ಜಿ.ಜೆ. ವಿನಯ್ಕುಮಾರ್, ಕುಶಾಲನಗರದ ನಿರಂಜನ್, ಟಿ.ಎಲ್. ನಾಗೇಂದ್ರ, ಪಾಲಿಬೆಟ್ಟದ ಭಾಗ್ಯವತಿ, ಟಿ.ಆರ್. ಗಣೇಶ್, ಹರ್ಷ ಟಿ.ಜಿ., ಟಿ.ಕೆ. ಲಲಿತಾ, ಜನಾರ್ಧನ್, ಸತ್ಯನಾರಾಯಣ, ಹಾಕತ್ತೂರುವಿನ ಎ.ಕೆ. ನಾಗೇಶ್, ಟಿ.ಡಿ. ಮನೋಹರ ಮುಂತಾದವರು ಉಪಸ್ಥಿತರಿದ್ದರು. ಸ್ವಾಗತ ಟಿ.ಎಲ್.ಸುಮಾ, ವಂದನಾರ್ಪಣೆಯನ್ನು ಜಿಲ್ಲಾ ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ವಿ.ಲೋಕೇಶ್ ನಿರ್ವಹಿಸಿದರು.