ವೀರಾಜಪೇಟೆ, ಜೂ. 19: ವೀರಾಜಪೇಟೆ-ಕಣ್ಣನೂರು ಅಂತರರಾಜ್ಯ ಹೆದ್ದಾರಿಯ ಮಾಕುಟ್ಟ ತಿರುವು ರಸ್ತೆಗಳ ಎರಡೂ ಬದಿಗಳಲ್ಲಿರುವ ಮರಗಳು ತೀರಾ ಜೀರ್ಣಾವಸ್ಥೆಯಲ್ಲಿದ್ದು, ಗಾಳಿ-ಮಳೆಗೆ ರಸ್ತೆಗೆ ಬೀಳುವ ಸಂಭವವಿದೆ. ಸಾಮಾನ್ಯವಾಗಿ ಈ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಏಳು ವರ್ಷಗಳ ಹಿಂದೆ ಪೂರ್ಣಗೊಳಿಸಿದ ರಸ್ತೆ ಭಾರೀ ಇಕ್ಕಟ್ಟಾಗಿದೆ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಎಚ್ಚರಗೊಳ್ಳದಿದ್ದಲ್ಲಿ ಮಳೆಗಾಲದಲ್ಲಿ ಅನಾಹುತವಂತೂ ಖಚಿತ. 8 ವರ್ಷಗಳ ಹಿಂದೆ ಚಾಲನೆಯಲ್ಲಿದ್ದ ಸರಕಾರಿ ಬಸ್ ಒಂದರ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ.