ಮಡಿಕೇರಿ, ಡಿ, 23: ಆದಿವಾಸಿಗಳು ಹಾಗೂ ದಲಿತರು ದಿಡ್ಡಳ್ಳಿ ತೆರವು ಪ್ರಕರಣದ ಮೂಲಕ ಆರಂಭಿಸಿರುವ ಹೋರಾಟ ಇಡೀ ದೇಶ ಹಾಗೂ ರಾಜ್ಯದಲ್ಲಿ ಇತಿಹಾಸಕ್ಕೆ ಹೆಜ್ಜೆಯಿರಿಸಿದಂತಾಗಿದೆ. ಈ ಮೂಲಕ ದಿಡ್ಡಳ್ಳಿ - ದಿಟ್ಟ ಹಳ್ಳಿಯಾಗಿ ಗಮನ ಸೆಳೆದಿದ್ದು, ಜೀತದಿಂದ ಸ್ವಾತಂತ್ರ್ಯಕ್ಕೆ ಹೋರಾಟ ಮುಂದುವರಿಯಲಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪ್ರಮುಖರು ಸಂದೇಶ ನೀಡಿದ್ದಾರೆ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಕರ್ನಾಟಕದ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ದಿಡ್ಡಳ್ಳಿ ಆದಿವಾಸಿಗಳ ಮನೆ ತೆರವು ಪ್ರಕರಣವನ್ನು ಖಂಡಿಸಿ ಹಾಗೂ ಪುನರ್ವಸತಿಗೆ ಆಗ್ರಹಿಸಿ ಆದಿವಾಸಿ ಹಾಗೂ ದಲಿತ - ದಮನಿತರ ಸಂಕಲ್ಪ ಸಮಾವೇಶ ಮಡಿಕೇರಿ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೋರಾಟ ನಡೆಸುತ್ತಿರುವ ಸಂಘಟನೆಗಳ ಪ್ರಮುಖರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಪ್ರಮುಖ ನೂರ್ ಶ್ರೀಧರ್ ಅವರು ಆದಿವಾಸಿಗಳು - ದಲಿತರು ಸಾವಿರಾರು ವರ್ಷಗಳಿಂದ ನಿರಂತರವಾಗಿ ವಂಚನೆ. ದೌರ್ಜನ್ಯ, ಶೋಷಣೆಯೊಂದಿಗೆ ತುಳಿತಕ್ಕೆ ಒಳಗಾಗುತ್ತಲೆ ಬಂದಿದ್ದಾರೆ. ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸುವ ಸ್ಥಿತಿ ಬಂದಿರುವದು ಅಸಹಾಯಕತೆ ಹಾಗೂ ಆಕ್ರೋಶದ ಪ್ರತೀಕವಾಗಿದೆ. ಇದಕ್ಕೆ ಕಾರಣವಾಗಿರುವದು ಸರಕಾರ ಹಾಗೂ ವ್ಯವಸ್ಥೆಯಾಗಿದ್ದು,

(ಮೊದಲ ಪುಟದಿಂದ) ಇದರ ವಿರುದ್ಧ ಆದಿವಾಸಿಗಳು ತಿರುಗಿ ನಿಂತಿರುವದಾಗಿ ಹೇಳಿದರು.

ಲೈನ್ ಮನೆ ಜೀತದಿಂದ ಸ್ವಾತಂತ್ರ್ಯಕ್ಕೆ ಹೋರಾಟ ಆರಂಭಿಸಲಾಗಿದೆ ಎಂದ ಅವರು ಹೋರಾಟವನ್ನು ಹತ್ತಿಕ್ಕಲು ವಿವಿಧ ಆಪಾದನೆಗಳ ಮೂಲಕ ಷಡ್ಯಂತರ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ, ಭೂ ಹಿಡುವಳಿದಾರರು, ಜಿಲ್ಲಾಡಳಿತ ಇದರಲ್ಲಿ ಸೇರಿಕೊಂಡಿದೆ ಎಂದು ಆಪಾದಿಸಿದ ಅವರು ಕೆಲವೇ ಬಲಢ್ಯಾರು ಆಸ್ತಿ ಅಧಿಕಾರಕ್ಕೆ ಆದಿವಾಸಿಗಳನ್ನು ತುಳಿಯುತ್ತಿ ದ್ದಾರೆಂದರು.

ದಿಡ್ಡಳಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ನಿರ್ಧಿಷ್ಟ ಬೇಡಿಕೆ ಮುಂದಿಡ ಲಾಗಿದ್ದು, ನ್ಯಾಯ ಸಿಗುವ ತನಕವೂ ಹೋರಾಟ ಮುಂದುವರಿಸು ವದಾಗಿ ಹೇಳಿದ ಅವರು ಕೊಡಗಿನ ತೋಟ ಮಾಲೀಕರ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿ ಆದಿವಾಸಿಗಳನ್ನು ತಮ್ಮ ಜೀತದಾಳುಗಳಾಗಿ ಕಾಣಲಾಗುತ್ತಿದೆ ಎಂದು ಆರೋಪಿಸಿದರು. ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಅವರು ಆಗ್ರಹಿಸಿದರು.

ರೈತ ಸಂಘದ ಪ್ರಮುಖ ಡಿ.ಎಚ್. ಪೂಜಾರ್ ಅವರು ಮಾತನಾಡಿ, ಹೋರಾಟದ ದಾರಿ ತಪ್ಪಿಸಲು ಭೂ ಮಾಲೀಕರು ಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಭೂ ಮಿತಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿದ ಅವರು ಕೊಡಗಿನ ಆದಿವಾಸಿಗಳಿಗೆ ಭೂಮಿ ನೀಡಬೇಕು. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಸುವದಾಗಿ ಹೇಳಿದರು. ಕೊಡವ ಭೂ ಮಾಲೀಕರ ಬಗ್ಗೆ ಅವರು ಪ್ರತ್ಯೇಕವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಒಕ್ಕಲೆಬ್ಬಿಸುವ ಹುನ್ನಾರ

ಮತ್ತೋರ್ವ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಅವರು ಮಾತನಾಡಿ ದೌರ್ಜನ್ಯ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಅವರನ್ನು ವಿಚಾರಣೆಗೆ ಒಳಪಡಿಸ ಬೇಕೆಂದು ಆಗ್ರಹಿಸಿದರು. ಕೊಡಗಿನಲ್ಲಿ ದುರಾಸೆಯ ಜನ ಆದಿವಾಸಿಗಳನ್ನು ತಮ್ಮ ಕೈ ಕೆಳಗೆ ಇಟ್ಟಿರುವದಾಗಿ ಹೇಳಿದ ಅವರು ಆದಿವಾಸಿಗಳು, ದಲಿತರಿಗೆ ಸೂರು ಕಲ್ಪಿಸದಿರುವ ಕುರಿತು ಜಿಲ್ಲಾಡಳಿತವನ್ನು ಪ್ರಶ್ನಿಸಬೇಕಿದೆ ಎಂದರು. ಪಶ್ಚಿಮಘಟ್ಟದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರವೂ ನಡೆಯುತ್ತಿದೆ.

ಕೇವಲ ಭೂ ಮಾಲೀಕರು ಮಾತ್ರವಲ್ಲ ಬಹುರಾಷ್ಟ್ರೀಯ ಕಂಪೆನಿಗಳೂ ಎನ್.ಜಿ.ಓ.ಗಳಿಗೆ ಕೋಟ್ಯಾಂತರ ಹಣ ನೀಡುವ ಮೂಲಕ ಇದರ ಹಿಂದಿರುವದಾಗಿ ಅವರು ಸಂಶಯ ವ್ಯಕ್ತಪಡಿಸಿದರು.

ಯಶಸ್ಸಿನ ಹಾದಿ : ಸುಬ್ಬಯ್ಯ

ವಕೀಲ ಎ.ಕೆ. ಸುಬ್ಬಯ್ಯ ಮಾತನಾಡಿ ಪ್ರಸ್ತುತ ಹೋರಾಟ ಯಶಸ್ಸಿನ ಹಾದಿಯಲ್ಲಿದ್ದು, ಈ ಶಕ್ತಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ರಾಜ್ಯವ್ಯಾಪಿಯಾಗಿ ದಿಡ್ಡಳ್ಳಿ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸಿಕ್ಕಿದೆ ಎಂದರು. ಹೋರಾಟವನ್ನು ಹತ್ತಿಕ್ಕಲು, ಅಪಪ್ರಚಾರ ನಡೆದಿದೆ ಎಂದ ಅವರು ಅದೇ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಕುರಿತು ಆ ಜಾಗ ಮೀಸಲು ಅರಣ್ಯ ಎಂಬ ನೆಪ ಹೇಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ನಡೆಸುವ ಉನ್ನತ ಸಭೆಯಲ್ಲಿ ಮನವರಿಕೆ ಮಾಡಲಾಗುವದು ಎಂದರು.

ಹೋರಾಟದ ಹಾದಿ ತಪ್ಪಿಸುವ ಪ್ರಯತ್ನದಲ್ಲಿ ಕೆಲವು ತೋಟ ಮಾಲೀಕರು ಹಾಗೂ ಸುತ್ತಮುತ್ತಲಿನ ಭೂ ಹಿಡುವಳಿದಾರರ ಕೈವಾಡ ಇದೆ ಎಂದು ಸುಬ್ಬಯ್ಯ ಆರೋಪಿಸಿದರು.

ಇಂದು ದಿಡ್ಡಳ್ಳಿಯಲ್ಲಿ ಸಭೆ

ಹೋರಾಟಗಾರ ಸಿರಿಮನೆ ನಾಗರಾಜ್ ಮಾತನಾಡಿ, ಗಿರಿಜನರ ಹೋರಾಟವನ್ನು ಯಶಸ್ವಿಯಾಗಲು ಬಿಡಲಿಲ್ಲ. ಆದರೂ ಎಲ್ಲಾ ಸಂಘಟನೆಗಳು ಒಂದುಗೂಡಿ ಮುಂದಿನ ಯಾವದೇ ಹೋರಾಟಕ್ಕೆ ಬದ್ಧವಾಗಿದೆ. ಇದೀಗ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ. ಸದ್ಯದ ಮಟ್ಟಿಗೆ ಹೋರಾಟಕ್ಕೆ ಸಣ್ಣಮಟ್ಟದ ಯಶಸ್ಸು ಲಭಿಸಿದ್ದು, ದೊಡ್ಡ ಯಶಸ್ಸು ಸಿಗಲೇಬೇಕೆಂದು ಹೇಳಿದರು. ಹೋರಾಟ ಮತ್ತಷ್ಟು ಬಲಗೊಳ್ಳಲಿದ್ದು, ಹೋರಾಟ ಮುಂದುವರಿಸೋಣ. ತಾ. 24ರಂದು (ಇಂದು) ಬೆಳಿಗ್ಗೆ 8 ಗಂಟೆಗೆ ದಿಡ್ಡಳ್ಳಿಯಲ್ಲಿ ಸಭೆ ನಡೆಸಿ ಹೋರಾಟದ ಮುಂದಿನ ರೂಪುರೇಷೆಗಳನ್ನು ತಯಾರಿಸೋಣ ಎಂದು ಹೇಳಿದರು.

ಚಿತ್ರನಟ ಚೇತನ್‍ನಾಯಕ್ ಮಾತನಾಡಿ, ಆದಿವಾಸಿಗಳಿಗೆ ಪ್ರಬಲ ಶಕ್ತಿಯಿದ್ದು, ಈ ಹೋರಾಟ ಮುಖೇನ ಸರಕಾರಕ್ಕೆ ಆದಿವಾಸಿಗಳ ಶಕ್ತಿಯ ಬಗ್ಗೆ ಮನವರಿಕೆಯಾಗಿದೆ. ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದ್ದು, ರೂ. 1 ಕೋಟಿ ರೂ. ಪರಿಹಾರ, ಶೌಚಾಲಯ, ನೀರು, ಟೆಂಟ್ ವ್ಯವಸ್ಥೆ ಮಾಡುವ ಭರವಸೆ ಸಿಕ್ಕಿದೆ.

ಸವಲತ್ತು ಕೊಡುವವರೆಗೂ ಹೋರಾಟ ನಿಲ್ಲುವದಿಲ್ಲ. ಪುನರ್ ವಸತಿಗೆ ಮುಖ್ಯಮಂತ್ರಿ ಗಳೊಂದಿಗೆ ಸಭೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಉತ್ತಮ ಸಮಾಜ ನಿರ್ಮಾಣಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಅವರುಗಳ ಮಾರ್ಗ ದಿಂದ ಸಾಧ್ಯವಾಗಲಿದೆ. ಎಲ್ಲರಿಗೂ ಸಮಾನತೆ ಆಗಬೇಕೆಂದು ಹೇಳಿದರು. ಕರ್ನಾಟಕದಿಂದ ಕ್ರಾಂತಿ ಆರಂಭ ಗೊಂಡಿದ್ದು, ಭವಿಷ್ಯದ ಬಗ್ಗೆ ಚಿಂತನೆಯೊಂದಿಗೆ ಹೋರಾಟ ರೂಪಿಸಬೇಕಿದೆ.

ರೋಷಿತ ಶಕ್ತಿಗಳು ಒಂದಾದರೆ ಯಾವದೇ ರಾಜಕೀಯ ಪಕ್ಷಗಳು ತಡೆಯಲು ಸಾಧ್ಯವಿಲ್ಲ. ಎಲ್ಲಾ ಪಕ್ಷಗಳಿಗೂ ಪರ್ಯಾಯ ಶಕ್ತಿಯಾಗಲಿದೆ ಎಂದು ಹೇಳಿದರು.

ಎಸ್‍ಡಿಪಿ.ಐ. ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಸೈನಿಕರ ನೆಲೆ ಬೀಡಿನಲ್ಲಿ ಗಿರಿಜನರ ಕ್ರಾಂತಿಕಾರಿ ಹೋರಾಟ ನಡೆಯಲಿದೆ. ಬಲಾಢ್ಯರು ಶೋಷಿತ ವರ್ಗವನ್ನು ತುಳಿಯುತ್ತಿದ್ದು, ಈ ಸ್ಥಿತಿಗೆ ಕಾರಣರಾದವರೇ ಈಗ ಅರೆಬೆತ್ತಲಾಗಿ ದ್ದಾರೆ. ಹೋರಾಟ ತೀವ್ರಗೊಳಿಸಿ ಅರೆಬೆತ್ತಲಾದವರು ಪೂರ್ಣ ಬೆತ್ತಲಾಗುವಂತೆ ಮಾಡಬೇಕೆಂದು ಹೇಳಿದರು. ಭೂಗಳ್ಳರು 7358 ಏಕರೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದು, ಅದನ್ನು ಮೊದಲು ತೆರವುಗೊಳಿಸಲಿ. ನಕ್ಸಲ್ ಹೆಸರಿನಲ್ಲಿ ಸೆಕ್ಷನ್ ಜಾರಿ ಮಾಡಿದ ಅಧಿಕಾರಿಗಳೇ ಇಲ್ಲಿ ಯಾವದೇ ನಕ್ಸಲರಿಲ್ಲ ಎಂದು ಹೇಳುತ್ತಿದ್ದಾರೆ. ಇದು ನಾಚಿಕೆಗೇಡು. ಶೋಷಿತ, ದಲಿತ, ದಮನಿತ ಶಕ್ತಿಗಳು ಒಂದಾದರೆ ಯಾವದೇ ಸರಕಾರ ಅವರನ್ನು ಮಣಿಸಲು ಸಾಧ್ಯವಿಲ್ಲ ವೆಂದರು. ದೊಡ್ಡ ಶಕ್ತಿಯಾಗಿ ಹೋರಾಟ ಮುಂದುವರಿಯುವದು ಎಂದು ಹೇಳಿದರು.

ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ದಿಡ್ಡಳ್ಳಿ ಹೋರಾಟದ ಮೂಲಕ ಆದಿವಾಸಿಗಳ, ದಲಿತರ ಹೋರಾಟಕ್ಕೆ ನ್ಯಾಯ ಸಿಕ್ಕಿದಂತಾಗಿದೆ. ಯಾವದೇ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾಗದೆ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು. ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿದರು.