ಶ್ರೀಮಂಗಲ, ಅ. 4: ಸತತವಾಗಿ ಕಳೆದ 2 ವರ್ಷದಿಂದ ವೀರಾಜಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಸರಕಾರ ಘೋಷಿಸಿದೆ. ಆದರೆ ಬರ ಪರಿಹಾರ ಕಾಮಗಾರಿಯಡಿ ಮಾಡಬೇಕಾದ ಕಾಮಗಾರಿ ಪಟ್ಟಿ ತಯಾರಿಸಿ ಅನುದಾನವನ್ನು ಸರಕಾರದಿಂದ ಕೋರಬೇಕಾಗಿದ್ದರೂ ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಆದ ಕಾರಣ ಬರ ಪರಿಹಾರ ಟಾಸ್ಕ್ ಫೋರ್ಸ್‍ನಿಂದ ಯಾವದೇ ಬರ ಪರಿಹಾರ ನಿಧಿ ಬಿಡುಗಡೆ ಮಾಡಿಲ್ಲ ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ಅವರು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಾಸ್ತವಾಂಶದ ಬಗ್ಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಬರ ಪರಿಹಾರದಡಿ ಕುಡಿಯುವ ನೀರು, ನೀರಿನ ಸಂಗ್ರಹ, ಬೆಳೆ ಹಾನಿ ಪರಿಹಾರ, ಜಾನುವಾರುಗಳಿಗೆ ಮೇವು, ಬರ ಪರಿಹಾರ ನಿಧಿ ಮೂಲಕ ಮಾಡಬಹುದಾದ ಕಾಮಗಾರಿಗಳ ಪಟ್ಟಿ ತಯಾರಿಸಿ ಸರಕಾರದಿಂದ ಅನುದಾನ ಕೋರಬೇಕು. ಈಗಾಗಲೇ ದಕಿಣ ಕನ್ನಡ ಜಿಲ್ಲೆಗೆ ಬರ ಪರಿಹಾರ ನಿಧಿಯಡಿ ವಿಶೇಷ ಪ್ಯಾಕೇಜ್ ಬಿಡುಗಡೆಯಾಗಿದೆ. ಆದರೆ ಜಿಲ್ಲೆಗೆ ಯಾವದೇ ಅನುದಾನ ಬಿಡುಗಡೆಯಾಗಿಲ್ಲ. ಇದಕ್ಕೆ ಅಧಿಕಾರಿಗಳು ಪೂರಕವಾದ ವರದಿ ಸರಕಾರಕ್ಕೆ ತಯಾರಿಸಿ ಸಲ್ಲಿಸದಿರುವದೇ ಕಾರಣ ಎಂದು ಆರೋಪಿಸಿದರು.
ಪರಿಹಾರಕ್ಕಾಗಿ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಬರ ಪರಿಹಾರದ ವಿಶೇಷ ಸಭೆ ಕರೆಯಬೇಕೆಂದು ಬಾನಂಡ ಪ್ರಥ್ಯು ಅವರು ಒತ್ತಾಯಿಸಿದ್ದಾರೆ.