ಗೋಣಿಕೊಪ್ಪಲು, ಡಿ. 11: ಜಿಲ್ಲೆಯಲ್ಲಿ ಬರ ಕಾಣಿಸಿಕೊಂಡ ಕಾರಣ ಕಳೆದ 2 ವರ್ಷಗಳಿಂದ ರೈತರ ಬೆಳೆಯಲ್ಲಿ ಕುಂಠಿತ, ಕುಡಿಯುವ ನೀರಿನ ಬವಣೆ, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ, ಜಾನುವಾರುಗಳಿಗೆ ಮೇವಿನ ಕೊರತೆ ಇತ್ಯಾದಿಗಳಿಂದ ಬಾಳೆಲೆ ಗ್ರಾಮದ ರೈತರು ತೀವ್ರ ಬವಣೆಗೆ ಒಳಗಾಗಿದ್ದಾರೆ. ಈ ಬಗ್ಗೆ ತಮ್ಮ ನೋವನ್ನು ಹಂಚಿಕೊಂಡ ರೈತರು ಹಿಂದೊಮ್ಮೆ ಭತ್ತದ ಕಣಜವಾಗಿದ್ದ ಕೊಡಗಿನಲ್ಲಿ ಇಂದು ಉತ್ಪಾದನ ವೆಚ್ಚದಿಂದ ಮತ್ತು ಕಾರ್ಮಿಕರ ಅಭಾವ, ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಭತ್ತದ ಗದ್ದೆಗಳು ಪಾಳು ಬಿದ್ದಿದ್ದು, ಕೆಲವೊಂದು ರೈತರು ಮಾತ್ರ ಭತ್ತದ ಬೆಳೆಯನ್ನು ಕಷ್ಟದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಶೇ. 90 ರಷ್ಟು ಗದ್ದೆಗಳು ಬಾಳೆಲೆ ಹೋಬಳಿಯಲ್ಲಿ ಪಾಳು ಬಿಟ್ಟಿದೆ ಎಂದಿದ್ದಾರೆ.
ಪ್ರಸ್ತುತ ಕೆಲವೊಂದು ಕಡೆಗಳಲ್ಲಿ ಯಾಂತ್ರೀಕರಣವನ್ನು ಬಳಸುತ್ತಿದ್ದಾರೆ. ಆದರೆ ಕೊಡಗಿನ ಮಣ್ಣು ಜೌಗು ಮಣ್ಣಾಗಿದ್ದು, ತೇವಾಂಶ ಅತೀ ಹೆಚ್ಚಿರುವದರಿಂದ ಎಲ್ಲ ಸ್ಥಳಗಳಲ್ಲಿ ಯಾಂತ್ರೀಕತೆ ನಡೆಯುತ್ತಿಲ್ಲ ಹಾಗೂ ಇಳುವರಿಯು ಕಡಿಮೆ ಇರುತ್ತದೆ. ಇದರಿಂದ ಭತ್ತದ ಬೇಸಾಯದಲ್ಲಿ ಲಾಭಾಂಶ ಕಡಿಮೆಯಿದ್ದು, ಭತ್ತದ ಗದ್ದೆಗಳು ಪಾಳು ಬೀಳುತ್ತಿವೆ. ಇದರಿಂದ ಮಳೆ ನೀರು ಸಮುದ್ರ ಪಾಲಾಗುತ್ತಿದ್ದು, ನೀರಿನ ಕೊರತೆಯನ್ನು ಇಂದು ಇಡೀ ರಾಜ್ಯವೇ ಅನುಭವಿಸುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ರೈತರ ಬೆಂಗಾವಲಿಗೆ ನಿಲ್ಲಬೇಕು. ರೈತರು ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಬೇಕಾಗಿದ್ದು, ಇದುವರೆಗೆ ಸರಕಾರ ಈ ಕಾರ್ಯಕ್ಕೆ ಮುಂದಾಗದಿರುವದು ರೈತರಲ್ಲಿ ನಿರಾಸೆಯನ್ನು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಭತ್ತಕ್ಕೆ ಉತ್ತಮ ಬೆಲೆಯಿಲ್ಲದಿದ್ದರೂ ಭತ್ತದ ಹುಲ್ಲಿಗೆ ನೆರೆಯ ಕೇರಳದಿಂದ ಉತ್ತಮ ಬೇಡಿಕೆ ಇದ್ದು, ರೈತರು ಹುಲ್ಲನ್ನು ಮಾರಿ ನಷ್ಟವನ್ನು ಸರಿದೂಗಿಸುವ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಸರಕಾರ ಇದೀಗ ಏಕಾಏಕಿ ಹುಲ್ಲನ್ನು ಬೇರೆ ಜಿಲ್ಲೆಗಳಿಗೆ ಮಾರಬಾರದು ಎಂದು ಆದೇಶ ಮಾಡಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ವರ್ಷ ಉತ್ತಮ ಮಳೆಯಾಗದೆ ಬೆಳೆಯು ಇಲ್ಲ, ಕಟಾವು ಮಾಡಿದ ಭತ್ತದ ಹುಲ್ಲನ್ನು ಮಾರಲು ಕಾನೂನಿನ ತೊಡಕಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಲ್ಲನ್ನು ಬೇರೆ ಜಿಲ್ಲೆಗೆ ಮಾರಬಾರದೆಂಬ ಕಾನೂನನ್ನು ಹೊರಡಿಸಿರುವ ಸರಕಾರ ರೈತರಿಂದ ನೇರವಾಗಿ ಹುಲ್ಲನ್ನು ಖರೀದಿಸುವ ಪ್ರಯತ್ನಕ್ಕೆ ಕೈಹಾಕದಿರುವದರಿಂದ ಹುಲ್ಲನ್ನು ಸುಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಉತ್ಪಾದನಾ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಯಾಂತ್ರೀಕರಣದಿಂದ ಭತ್ತ ಕಟಾವು ಮಾಡಲಾಗುತ್ತಿದ್ದು, ಇದರ ಹುಲ್ಲನ್ನು ಗದ್ದೆಯಲ್ಲಿಯೇ ಬಿಟ್ಟು ಹಾಳಾಗುತ್ತಿದೆ. ಯಾಂತ್ರೀಕರಣದಿಂದ ದನ-ಕರುಗಳ ಸಂಖ್ಯೆ ಕೂಡ ಕಡಿಮೆ ಇದ್ದು, ಹುಲ್ಲಿನ ಅವಶ್ಯಕತೆಯಿಲ್ಲ. ಆದುದರಿಂದ ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ನೀಡಿ ಸರಕಾರದಿಂದ ಹುಲ್ಲನ್ನು ಖರೀದಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ ಹೊರ ಜಿಲ್ಲೆಗೆ ಹುಲ್ಲನ್ನು ಮಾರಾಟ ಮಾಡಲು ಅನುಮತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಬಾಳೆಲೆ ಗ್ರಾ.ಪಂ. ಸದಸ್ಯ ಪೋಡಮಾಡ ಸುಕೇಶ್ ಭೀಮಯ್ಯ, ರೈತರಾದ ಅಡ್ಡೇಂಗಡ ಅರುಣ್, ಅಡ್ಡೇಂಗಡ ಯೋಗೇಶ್, ಅಡ್ಡೇಂಗಡ ರಾಕಿ ನಾಣಯ್ಯ, ಆದೇಂಗಡ ಮಂಜು, ಚಕ್ಕೆರ ನವೀನ್ ಈ ಸಂದರ್ಭ ಹಾಜರಿದ್ದರು.