ಮಡಿಕೇರಿ, ಜ. 18: ಕಾಸರಗೋಡಿನ ಬದಿಯಡ್ಕದಲ್ಲಿ ನಡೆಯಲಿರುವ ‘ವಿಶ್ವ ತುಳುವೆರ ಆಯುನೋ-2016’ರ ಪ್ರಚಾರಾರ್ಥ ಮಡಿಕೇರಿ ನಗರದಲ್ಲಿ ರಥಯಾತ್ರೆ ನಡೆಯಿತು.ವಿಶ್ವ ತುಳುವೆರ ಆಯುನೋ-2016 ಕಾಸರಗೋಡಿನ ಬದಿಯಡ್ಕದಲ್ಲಿ ಡಿ.9 ರಿಂದ 13ರವರೆಗೆ ನಡೆಯಲಿದೆ. ಈ ಪ್ರಯುಕ್ತ ಬದಿಯಡ್ಕದಿಂದ ಮಡಿಕೇರಿಗೆ ಪ್ರಚಾರಾರ್ಥ ರಥಯಾತ್ರೆ ಆಗಮಿಸಿತ್ತು. ನಗರದ ಗಾಂಧಿ ಮೈದಾನದಲ್ಲಿ ರಥಯಾತ್ರೆಗೆ ವಿಶ್ವ ತುಳುವೆರೆ ಆಯುನೋ-2016ರ ಕೊಡಗು ಸ್ವಾಗತ ಸಮಿತಿ ಅಧ್ಯಕ್ಷ ಬಿ.ಬಿ.ಐತಪ್ಪ ರೈ ಚಾಲನೆ ನೀಡಿದರು. ರಥಯಾತ್ರೆ ಜ. ತಿಮ್ಮಯ್ಯ ವೃತ್ತದ ಮೂಲಕ ಖಾಸಗಿ ಬಸ್ ನಿಲ್ದಾಣ, ಚೌಕ್, ಎಸ್ಬಿಐ ವೃತ್ತಕ್ಕಾಗಿ ಗಾಂಧಿ ಮೈದಾನದಲ್ಲಿ ಸಮಾಪನಗೊಂಡಿತು. ರಥಯಾತ್ರೆಯಲ್ಲಿ ಕಲ್ಲಡ್ಕದ ಚಿಲಿಪಿಲಿ ಕಲಾತಂಡದ ನೃತ್ಯದೊಂದಿಗೆ ನೂರಾರು ತುಳು ಭಾಷಿಕರು ಪಾಲ್ಗೊಂಡಿದ್ದರು. ರಥಯಾತ್ರೆ ಬಳಿಕ ಕೇರಳದತ್ತ ತೆರಳಿತು. ಈ ಸಂದರ್ಭ ಮಾತನಾಡಿದ ಐತಪ್ಪ ರೈ ತುಳು ಭಾಷಿಕ ಬಾಂಧವರು ತುಳು ಸಾಹಿತ್ಯ ಸಂಸ್ಕøತಿ ಬಗ್ಗೆ ಅರಿತುಕೊಳ್ಳಬೇಕು. ತುಳು, ಕರಾವಳಿಯ ಒಂದು ಶ್ರೀಮಂತ ಭಾಷೆ ಮತ್ತು ಸಂಸ್ಕøತಿಯಾಗಿದೆ. ಅದನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯ ಎಂದರು.
ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ಜಿಲ್ಲೆಯಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ತುಳು ಭಾಷಿಕರು ತುಳುವೆರ ಜನಪದ ಕೂಟದ ಅಡಿಯಲ್ಲಿ ಸಂಘಟಿತರಾಗುತ್ತಿದ್ದಾರೆ. ತುಳು ಭಾಷೆಗೆ ಎಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು. ಈ ಮೂಲಕ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ರಥಯಾತ್ರೆಯಲ್ಲಿ ತುಳುವೆರೆ ಜನಪದ ಕೂಟದ ಜಿಲ್ಲಾಧ್ಯಕ್ಷ ಶೇಖರ ಭಂಡಾರಿ, ಜಿಲ್ಲಾ ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ, ಜಿಲ್ಲಾ ಸಲಹೆಗಾರರಾದ ಬಾಲಕೃಷ್ಣ ರೈ, ಜಯಂತಿ ಶೆಟ್ಟಿ, ಮೆರವಣಿಗೆ ಸಮಿತಿ ಅಧ್ಯಕ್ಷ ಬಿ.ಡಿ. ನಾರಾಯಣ ರೈ, ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ಪೆರ್ಲ, ಸ್ವಾಗತ ಸಮಿತಿ ಖಜಾಂಚಿ ಆನಂದ್, ತುಳುವೆರೆ ಜನಪದ ಕೂಟದ ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರೈ ಹಾಗೂ ತುಳು ಭಾಷಿಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.