ಸೋಮವಾರಪೇಟೆ,ಆ.18: ಪೈಸಾರಿ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಇಂದಿಗೂ ಹಕ್ಕುಪತ್ರ ಪಡೆಯದೇ ಅತಂತ್ರರಾಗಿರುವ ಬಡವರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ತಕ್ಷಣ ಅಗತ್ಯ ದಾಖಲಾತಿಗಳೊಂದಿಗೆ ನೆಮ್ಮದಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಮುಂದಾಗ ಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮನವಿ ಮಾಡಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರ್ಗದ ಉದ್ದಾರಕ್ಕೆ ಹತ್ತು ಹಲವು ಯೋಜನೆಗಳನ್ನು ತಂದಿದೆ. ಈ ಬಗ್ಗೆ ಮಾಹಿತಿ ಕೊರತೆಯಿಂದ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಧಿಕಾರಿಗಳು ಸರ್ಕಾರದ ಯೋಜನೆಯ ಮಾಹಿತಿಯನ್ನು ಜನರಿಗೆ ತಲಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಲೋಕೇಶ್ ಅಭಿಪ್ರಾಯಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಂದಾಯ ಇಲಾಖೆಯಲ್ಲಿ ಹಲವಷ್ಟು ಸುಧಾರಣೆ ತಂದು ಕ್ರಾಂತಿಕಾರಕ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದರ ಭಾಗವಾಗಿ ಕಳೆದ ಹಲವು ದಶಕಗಳಿಂದ ಪೈಸಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ವಾಸದ ಮನೆ ನಿರ್ಮಿಸಿಕೊಂಡಿದ್ದ ಬಡವರಿಗೆ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿದೆ. ಹಕ್ಕುಪತ್ರ ಹೊಂದಿರದೇ ಇರುವವರು ಮನೆ ಎದುರು ನಿಂತಿರುವ ಭಾವಚಿತ್ರ, ಗ್ರಾಮ ಪಂಚಾಯಿತಿಯಿಂದ ದೃಡೀಕರಣ ಪತ್ರ, ಪಡಿತರ ಚೀಟಿ, ಪೈಸಾರಿ ಆರ್‍ಟಿಸಿ, ಮತದಾರರ ಗುರುತಿನ ಚೀಟಿಯೊಂದಿಗೆ ನೆಮ್ಮದಿ ಕೇಂದ್ರದಲ್ಲಿ ನಿಗದಿತ ಶುಲ್ಕದೊಂದಿಗೆ ತಾ. 27ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದರು.

ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಕೊರತೆಯಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿ ಹಕ್ಕುಪತ್ರಗಳಿಗೆ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಪ್ರಯೋಜನವನ್ನು ಪ್ರತಿಯೋರ್ವ ರಿಗೂ ತಲಪಿಸಬೇಕು ಎಂದು ಕೆ.ಎಂ. ಲೋಕೇಶ್ ಮನವಿ ಮಾಡಿದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಪಕ್ಷದ ಮುಖಂಡರಾದ ಬಸಪ್ಪ, ಇಂದ್ರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.