ಮಡಿಕೇರಿ, ಸೆ. 8: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ತಾ. 9 ರಂದು (ಇಂದು) ಕರೆ ನೀಡಿರುವ ಕರ್ನಾಟಕ ಬಂದ್ ಕರೆಗೆ ಕಾವೇರಿ ತವರು ಕೊಡಗಿನಲ್ಲಿ ನೈತಿಕ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ.ಕೊಡಗು ಜಿಲ್ಲೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರು ಕೊಡಗಿನಲ್ಲಿ ಖಾಸಗಿ ಬಸ್ಗಳ ಸಂಚಾರ ಎಂದಿನಂತೆ ನಡೆಯಲಿದೆ ಎಂದು ಖಚಿತ ಪಡಿಸಿದ್ದು, ಕೊಡಗಿನಾದ್ಯಂತ ಆಟೋ ರಿಕ್ಷಾಗಳು ಸಂಚರಿಸಲಿವೆ ಎಂದು ಅಧ್ಯಕ್ಷ ಮೇದಪ್ಪ ಸ್ಪಷ್ಟಪಡಿಸಿದ್ದಾರೆ. ಇನ್ನುಳಿದಂತೆ ಚೇಂಬರ್ ಆಫ್ ಕಾಮರ್ಸ್, ಜೀಪು ಮಾಲೀಕರ - ಚಾಲಕರ ಸಂಘ, ಲಾರಿ ಮಾಲೀಕರ - ಚಾಲಕರ ಸಂಘಗಳ ಪ್ರಮಖರುಗಳು ಬಂದ್ ಆಚರಿಸುವ ಬದಲು ಎಲ್ಲರೂ ಒಟ್ಟಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವದು ಎಂದು ಈಗಾಗಲೇ ಪತ್ರಿಕಾ ಹೇಳಿಕೆ ನೀಡಿರುವ ಹಿನ್ನೆಲೆ ಕೊಡಗಿನಲ್ಲಿ ಬಂದ್ ನಡೆಯುವ ಸಾಧ್ಯತೆ ಕಡಿಮೆ. ಸರ್ಕಾರಿ ಬಸ್ಗಳ ಸಂಚಾರದ ಬಗ್ಗೆ ಪರಿಸ್ಥಿತಿ ಅವಲೋಕಿಸಿ ಕ್ರಮಕೈಗೊಳ್ಳಲಾಗುವದು ಎಂದು ಡಿಪೋ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ.