ಮಡಿಕೇರಿ, ಜ. 9 : ಸರ್ಕಾರಿ ಭೂಮಿ ಒತ್ತುವರಿ ತೆರವು ನೆಪದಲ್ಲಿ ರೈತರು ಹಾಗೂ ನಿವೃತ್ತ ಸೈನಿಕರಿಗೆ ಕಿರುಕುಳ ನೀಡದೆ ಬಂಡವಾಳಶಾಹಿ ಕಂಪೆನಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ಮೊದಲು ತೆರವು ಗೊಳಿಸಲಿ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಡಾ| ಇ.ರಾ. ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಸೇನಾಧಿಕಾರಿಗಳ ಜಾಗವನ್ನು ತೆರವುಗೊಳಿಸಿದ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. ದೇಶ ಸೇವೆಯಲ್ಲಿ ತೊಡಗದೆ ಪೈಸಾರಿ ಜಾಗವನ್ನು ಸುಲಭವಾಗಿ ಅಕ್ರಮ ಸಕ್ರಮ ಸಮಿತಿಯಡಿ ಲಂಚ ನೀಡಿ ತಮ್ಮದಾಗಿಸಿಕೊಳ್ಳುವ ಬೆಳವಣಿಗೆ ಜಿಲ್ಲೆಯಲ್ಲಿದ್ದರೂ ಮಾಜಿ ಸೈನಿಕರಿಗೆ ವಿನಾಃ ಕಾರಣ ಕಿರುಕುಳ ನೀಡಲಾಗುತ್ತಿದೆÀ ಎಂದು ಆರೋಪಿಸಿ ದರು.

ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ರಾಜಕಾರಣಿಗಳು ಸಾವಿರಾರು ಏಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ದೊಡ್ಡ ಒತ್ತುವರಿಗಳನ್ನು ಮೊದಲು ತೆರವುಗೊಳಿಸಬೇಕು. ಆಗರ್ಭ ಶ್ರೀಮಂತರು ಸರ್ಕಾರಿ ಜಾಗವನ್ನು ಕಬಳಿಸಿ ಮೋಜಿಗಾಗಿ ಕೊಡಗು ಜಿಲ್ಲೆಯಲ್ಲಿ ತೋಟಗಳನ್ನು ಮಾಡುತ್ತಿದ್ದಾರೆ. ಪ್ರಭಾವಿ ರಾಜಕಾರಣಿಗಳು ಸ್ವಂತ ಜಾಗವನ್ನು ಅನುಭವಿಸುತ್ತಿದ್ದರು. ಸರ್ಕಾರಿ ಭೂಮಿಯನ್ನು ಕಬಳಿಸಿರುವ ಬಗ್ಗೆ ಉದಾಹರಣೆಗಳಿದ್ದು, ಸೂಕ್ತ ತನಿಖೆ ನಡೆಸಿದರೆ ಎಲ್ಲವೂ ಬಹಿರಂಗ ಗೊಳ್ಳುತ್ತದೆ ಎಂದು ದುರ್ಗಾಪ್ರಸಾದ್ ಅಭಿಪ್ರಾಯಪಟ್ಟರು.

ಸುಮಾರು 6 ಸಾವಿರ ಏಕರೆಯಷ್ಟು ಪ್ರದೇಶ ರಬ್ಬರ್ ತೋಟದ ಹೆಸರಿನಲ್ಲಿ ಅವಧಿಗೂ ಮೀರಿ ಖಾಸಗಿಯವರ ಅಧೀನಲ್ಲಿದೆ. ಖಾಸಗಿ ಸಂಸ್ಥೆಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೂ ಕಠಿಣ ಕ್ರಮ ಕೈಗೊಳ್ಳದ ಸರ್ಕಾರ, ರೈತರು ಹಾಗೂ ಮಾಜಿ ಸೈನಿಕರ ಮೇಲೆ ಗದಾ ಪ್ರಹಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ದೇಶ ರಕ್ಷಣೆÉಗಾಗಿ ತಮ್ಮ ಜೀವದ ಹಂಗು ತೊರೆದು ಗಡಿ ಕಾಯುವ ಸೈನಿಕರು ನಿವೃತ್ತಿಯಾದ ನಂತರ ಸೈನಿಕ ಕೋಟಾದಡಿ ಭೂಮಿಗಾಗಿ ಅರ್ಜಿ ಸಲ್ಲಿಸಿದರೆ ಭೂಮಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಕೃಷಿ ಕಾರ್ಯ ಮಾಡುತ್ತಿರುವ ಪೈಸಾರಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರೆ ಅರಣ್ಯ ಕಾಯ್ದೆಯ ನೆಪವೊಡ್ಡಿ ಸತಾಯಿಸಲಾಗುತ್ತದೆ. ಪ್ರತಿಯೊಂದು ಪ್ರದೇಶವನ್ನು ಅರಣ್ಯವೆಂದು ಪ್ರತಿಬಿಂಬಿಸುವ ಅಧಿಕಾರಿಗಳು, ಖಾಸಗಿ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಾಗ ಇದೇ ನಿಯಮ ವನ್ನು ಯಾಕೆ ಅನುಸರಿಸುತ್ತಿಲ್ಲ ವೆಂದು ದುರ್ಗಾಪ್ರಸಾದ್ ಪ್ರಶ್ನಿಸಿದರು.

ಸುದ್ದಿಗೊಷ್ಠಿಯಲ್ಲಿ ಪಕ್ಷದ ಪ್ರಮುಖ ಸಾಬು ಉಪಸ್ಥಿತರಿದ್ದರು.