ಕುಶಾಲನಗರ, ಜ. 8: ಹಾಕಿ ಮಾದರಿಯಲ್ಲಿಯೇ ಫುಟ್‍ಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ಫುಟ್‍ಬಾಲ್ ಕ್ರೀಡಾಪಟು ಗಳನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕುವ ಕೆಲಸ ಆಗಬೇಕಿದೆ ಎಂದು ಕೊಡಗು ಜಿಲ್ಲಾ ಫುಟ್‍ಬಾಲ್ ಸಂಸ್ಥೆ ಅಧ್ಯಕ್ಷ ಮೋಹನ್ ಅಯ್ಯಪ್ಪ ಹೇಳಿದರು.

ಕೊಡಗು ಜಿಲ್ಲಾ ಫುಟ್‍ಬಾಲ್ ಸಂಸ್ಥೆಯಿಂದ ಗುಡ್ಡೆಹೊಸೂರಿನ ಐಚೆಟ್ಟಿರ ನರೇನ್ ಸುಬ್ಬಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ 2017ನೇ ಸಾಲಿನ ಜಿಲ್ಲಾ ಮಟ್ಟದ ಫುಟ್‍ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಭ್ಯಾಸದಲ್ಲೂ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸಾಮಥ್ರ್ಯ ಹೊಂದಬೇಕು. ಕ್ರೀಡಾ ಜಿಲ್ಲೆ ಕೊಡಗಿಗೆ ಇನ್ನೂ ಹೆಚ್ಚಿನ ಕೀರ್ತಿ ತರುವಂತಾಗಬೇಕು ಎಂದರು.

4 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯನ್ನು ಕಾಫಿ ಬೆಳೆಗಾರ ಐಚೆಟ್ಟಿರ ಸೋಮಯ್ಯ ಶನಿವಾರ ಉದ್ಘಾಟಿಸಿದರು. ತಮ್ಮ ಪುತ್ರನ ಸ್ಮರಣಾರ್ಥ ಸುಮಾರು 6 ಎಕರೆ ಜಾಗದಲ್ಲಿ ಸುಸಜ್ಜಿತ ಫುಟ್‍ಬಾಲ್ ಕ್ರೀಡಾಂಗಣವನ್ನು ಸಜ್ಜುಗೊಳಿಸ ಲಾಗಿದೆ. ಕೊಡಗು ಜಿಲ್ಲಾ ಫುಟ್‍ಬಾಲ್ ಸಂಸ್ಥೆಯ ಎಲ್ಲಾ ಚಟುವಟಿಕೆಗಳು ಈ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದರು.

ಪ್ರಸಕ್ತ ನಡೆಯುತ್ತಿರುವ ಫುಟ್‍ಬಾಲ್ ಲೀಗ್ ಪಂದ್ಯಾವಳಿಗೆ ಜಿಲ್ಲೆಯಾದ್ಯಂತ ವಿವಿಧೆಡೆಗಳಿಂದ 13 ತಂಡಗಳು ಪಾಲ್ಗೊಂಡಿದ್ದು ಇದೇ ಮೊದಲ ಬಾರಿಗೆ ನಾಲ್ಕು ಮಹಿಳಾ ತಂಡಗಳು ನೋಂದಣಿಯಾಗಿವೆ.

ಬೆಳೆಗಾರರಾದ ಕಾಮಿನಿ ಸೋಮಯ್ಯ, ತೀರ್ಪುಗಾರರ ಸಂಘದ ಅಧ್ಯಕ್ಷ ಈಶ್ವರ್ ಹಾಲುಗುಂದ, ಕರ್ನಾಟಕದ ಪ್ರತಿನಿಧಿ ಪಿ.ಕೆ. ಜಗದೀಶ್, ಮೋಹನ್, ತೀರ್ಪುಗಾರರಾದ ಸುಂಟಿಕೊಪ್ಪದ ಜಾನ್, ಕೊಡಗರಹಳ್ಳಿಯ ಉಸ್ಮಾನ್, ದೇಚಮ್ಮ, ಪಾಲಿಬೆಟ್ಟದ ರತೀಶ್ ಕುಮಾರ್, ಫುಟ್‍ಬಾಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಪೊನ್ನಪ್ಪ ಮತ್ತಿತರರು ಇದ್ದರು.