ಮಡಿಕೇರಿ, ಜ. 28: ತನ್ನ ಜೀವನ ವನ್ನು ದೇಶ ಸೇವೆಗೆ ಮುಡಿಪಾಗಿಸಿ ಶಿಸ್ತು, ಪ್ರಾಮಾಣಿಕತೆಯಿಂದ ಬದುಕಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಈ ದೇಶದ ಹೆಮ್ಮೆ ಎಂದು ನೇವಲ್ ಅಕಾಡೆಮಿಯ ವೈಸ್ ಅಡ್ಮಿರಲ್ ವಿಶಿಷ್ಟ ಸೇವಾ ಮೆಡಲ್ ಪುರಸ್ಕøತರಾದ ಎಸ್.ವಿ. ಭೋಕರೆ ಅವರು ಹೇಳಿದರು.ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮ ದಿನಾಚರಣೆ ಪ್ರಯುಕ್ತ ಕೋಟೆ ಆವರಣದಲ್ಲಿ ಏರ್ಪಡಿಸಲಾ ಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ದೇಶದ ದಂಡನಾಯಕರಾಗಿ ಸೇವೆ ಸಲ್ಲಿಸಿದ ಕಾರ್ಯಪ್ಪ ಅವರು, ತನ್ನ ಪುತ್ರನನ್ನು ಎದುರಾಳಿಗಳು ಅಪಹರಿಸಿ ಕಾರ್ಯಪ್ಪ ಅವರ ಪುತ್ರ ಎಂದು ತಿಳಿದ ಬಳಿಕ ಬಿಡುಗಡೆ ಮಾಡುವದಾಗಿ ಎದುರಾಳಿ ನಾಯಕನಿಂದ ಕರೆ ಬಂದಾಗ ಅದಕ್ಕೆ ಮನ್ನಣೆ ನೀಡದೆ ಬಿಡುಗಡೆ ಮಾಡುವದಾದರೆ ನಮ್ಮವರೆಲ್ಲರನ್ನು ಬಿಡುಗಡೆ ಮಾಡಿ, ತನ್ನ ಮಗನೊಬ್ಬನನ್ನು ಬಿಡುಗಡೆ ಮಾಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ದೇಶಾಭಿಮಾನ ಮೆರೆದ ಕಾರ್ಯಪ್ಪ ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಭೋಕರೆ ನುಡಿದರು. ಕಾರ್ಯಪ್ಪ ಅವರು ಸೇನೆಯಿಂದ ನಿವೃತ್ತಿ ಹೊಂದಿದರೂ ಅವರನ್ನು ಸೇನೆ ಎಂದು ಮರೆಯ ಲಾರದು ಎಂದರಲ್ಲದೇ ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆ ಸಂಬಂಧ ನೌಕಾ ಪಡೆಯಿಂದ ಸಹಕಾರ ನೀಡುವದಾಗಿ ಘೋಷಿಸಿದರು.
ಪ್ರತಿಮೆಗೆ ಕಾರ್ಯಪ್ಪ ಅವರ ವಿರೋಧವಿತ್ತು
ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆ ವೇಳೆ ಫೀ.ಮಾ. ಕಾರ್ಯಪ್ಪ ಅವರು ವಿರೋಧಿಸಿದ್ದರು. ಸೇನೆಯಲ್ಲಿ ಜೀವನ ಪೂರ್ತಿ ಕಷ್ಟ ಪಟ್ಟು ನಿವೃತ್ತರಾದ ಮೇಲೂ ನಮ್ಮಂತವರನ್ನು ಪ್ರತಿಮೆ ಮಾಡಿ ನಿಲ್ಲಿಸಿ ಬಿಸಿಲಿನಲ್ಲಿ ಬೇಯಲು, ಕಾಗೆ ಬಂದು ಕೂರಲು ಅವಕಾಶ ಕೊಟ್ಟ ನಮ್ಮನ್ನು ಪುನಹ ಯಾಕೆ ಶಿಕ್ಷಿಸುತ್ತೀರ ಎಂದು ಕಾರ್ಯಪ್ಪ ಅವರು ಪ್ರಶ್ನಿಸಿದ್ದರು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಶ್ರಮಕ್ಕೆ ಫಲವಿದೆ ಎಂಬದಕ್ಕೆ ಕಾರ್ಯಪ್ಪ ಅವರೇ ಸಾಕ್ಷಿ. ನಿವೃತ್ತ ಸೈನಿಕರು 5 ಎಕರೆವರೆಗೆ ಒತ್ತುವರಿ ಮಾಡಿಕೊಂಡರೆ ಅದನ್ನು ಅವರಿಗೆ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರಲ್ಲದೆ, ಈ ಬಗ್ಗೆ ವಿಧಾನ ಸಭೆಯಲ್ಲೂ ಒತ್ತಾಯ ಮಾಡುವದಾಗಿ ಹೇಳಿದರು. ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗಿನ ಮಕ್ಕಳಿಗೆ ಶೇ. 25ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ
(ಮೊದಲ ಪುಟದಿಂದ) ಮನವಿ ಮಾಡುವ ದಾಗಿಯೂ ರಂಜನ್ ಹೇಳಿದರು.
ನಂಜಪ್ಪ ಬಿಚ್ಚಿಟ್ಟ ನೆನಪು
ಸಮಯ ಪಾಲನೆ, ಶಿಸ್ತು ಈ ವಿಚಾರದಲ್ಲಿ ಫೀ.ಮಾ. ಕಾರ್ಯಪ್ಪ ಅವರಿಗೆ ಕಾರ್ಯಪ್ಪ ಅವರೇ ಸಾಟಿ ಎಂದು ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ ಬಿ.ಎ. ನಂಜಪ್ಪ ಹೇಳಿದರು. ಕಾರ್ಯಪ್ಪ ಅವರನ್ನು ಭೇಟಿಯಾಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ನಂಜಪ್ಪ, ಕಾರ್ಯಪ್ಪ ಅವರು ತಮ್ಮನ್ನು ಯಾರೇ ಭೇಟಿ ಮಾಡಲು ಇಚ್ಚಿಸಿದರೆ, ಅವರು ಬರುವ ಸಮಯವನ್ನು ನಿಗದಿ ಮಾಡಿಸಿಕೊಂಡು ಅವರು ಬರುವ ಐದು ನಿಮಿಷಕ್ಕೆ ಮುಂಚಿತವಾಗಿ ಭೇಟಿಗೆ ಸಿದ್ಧವಾಗುತ್ತಿದ್ದರು. ಸೈನಿಕರಿಂದಲೇ ಓರ್ವ ಅಧಿಕಾರಿ ಸೇನೆಯಲ್ಲಿ ಮುಂದುವರೆಯಲು ಸಾಧ್ಯ ಎನ್ನುತ್ತಿದ್ದ ಕಾರ್ಯಪ್ಪ ಅವರು ತನ್ನ ತಂದೆ ತಾಯಿಯ ಭಾವಚಿತ್ರದೊಂದಿಗೆ ಸೈನಿಕ ಸಣ್ಣ ಪ್ರತಿಮೆಯೊಂದನ್ನು ಇಟ್ಟು ಪ್ರತಿನಿತ್ಯ ನಮಸ್ಕರಿಸುತ್ತಿದ್ದರು ಎಂದು ತಿಳಿಸಿದರು.
ಕಾರ್ಯಪ್ಪ ‘ಭಾರತ ರತ್ನ’ಕ್ಕೆ ಅರ್ಹರು
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನು ತಮ್ಮ ಫೋರಂನ ಪ್ರಯತ್ನದ ಫಲವಾಗಿ ದೆಹಲಿಯ ಆರ್ಮಿ ಪೆರೆಡ್ ಮೈದಾನಕ್ಕೆ ಕಾರ್ಯಪ್ಪ ಅವರ ಹೆಸರು ಬಂದಿದೆ. ಇಷ್ಟು ಮಾತ್ರವಲ್ಲದೇ ಈ ದೇಶದ ಘನತೆ ಎನಿಸಿಕೊಂಡಿರುವ ಫೀ.ಮಾ. ಕಾರ್ಯಪ್ಪ ಅವರಿಗೆ ಸರ್ಕಾರ ‘ಭಾರತ ರತ್ನ’ ಗೌರವ ನೀಡಬೇಕು. ಈ ನಿಟ್ಟಿನಲ್ಲಿ ಶ್ರಮವಹಿಸಲಾಗುವದೆಂದು ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ಹೇಳಿದರು.
ಯುವಜನತೆಗೆ ಸ್ಫೂರ್ತಿ
ಫೀ.ಮಾ. ಕಾರ್ಯಪ್ಪ ಕೊಡಗಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಮಹಾನ್ ವ್ಯಕ್ತಿ. ಅವರ ಬದುಕು, ಸಾಧನೆ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಬೇಕು. ಪ್ರತಿಯೊಬ್ಬರು ಶಿಕ್ಷಣಕ್ಕೆ ಒತ್ತು ನೀಡಬೇಕು. ತಾನು ಕೂಡ ಕೊಡಗಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬಯಕೆ ಹೊಂದಿದ್ದು, ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.
ವೇದಿಕೆಯಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಜನರಲ್ ಬಿ.ಎ. ಕಾರ್ಯಪ್ಪ, ಕೂಡಿಗೆ ಸೈನಿಕ ಶಾಲೆ ಪ್ರಾಂಶುಪಾಲ ಕ್ಯಾಪ್ಟನ್ ಬೆಹರ್ಸನ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಳ್ಳಯ್ಯ, ಕಮಾಡಂರ್ ಸಿ.ಎಂ. ಬೆಳ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮತ್ತಿತರರು ಇದ್ದರು.