*ಗೋಣಿಕೊಪ್ಪಲು, ನ. 26: ಕಾವೇರಿ ಕಾಲೇಜಿನ ಐವರ್‍ಬುಲ್ ಸ್ಮಾರಕ ವಿಜ್ಞಾನ ಭವನದಲ್ಲಿ ಪ್ರೌಢ ವಿದ್ಯಾರ್ಥಿಗಳ ಆವಿಷ್ಕಾರ ಪ್ರದರ್ಶನ ನಡೆಯಿತು. ಚರಂಡಿ ನೀರಿನ ಬಳಕೆಯಿಂದ ಕೃಷಿಗೆ ಬಳಕೆ ಮತ್ತು ಶುದ್ದೀಕರಣ, ಗಾಳಿಯಿಂದ ಬೀದಿ ದೀಪದ ಬಳಕೆ, ನೀರಿನಲ್ಲಿನ ಕಸ ಕಡ್ಡಿಗಳನ್ನು ತೆಗೆಯುವದು, ದೋಣಿ ಮೂಲಕ ನೀರಿನಲ್ಲಿರುವ ತ್ಯಾಜ್ಯಗಳನ್ನು ತೆಗೆದು ನೀರನ್ನು ಶುದ್ದೀಕರಿಸುವ ವಿಧಾನಗಳು, ಮಾದರಿ ಪಟ್ಟಣ ನಿರ್ಮಾಣ, ಸೂರ್ಯನ ಬೆಳಕಿನಿಂದ ಮೊಬೈಲ್ ಚಾರ್ಜ್ ಸೇರಿದಂತೆ ಹಲವು ಆವಿಷ್ಕಾರಗಳು ಚಿಂತನೆಯಲ್ಲಿ ಹೊರಬಂದಿತು.
ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಯೋಜನೆಯನ್ನು ರೂಪಿಸಿ ಈ ಬಗ್ಗೆ ವಿವರಿಸಿದರು. ಜಿಲ್ಲೆಯ 35ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗೋಣಿಕೊಪ್ಪಲು ಸಂತ ತೋಮಸ್, ಕಳತ್ಮಾಡು ಲಯನ್ಸ್, ಗೋಣಿಕೊಪ್ಪಲು ಜಿ.ಹೆಚ್.ಎಸ್., ಪಾಲಿಬೆಟ್ಟ ಲೂಡ್ರ್ಸ್, ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಸ್ಕೂಲ್, ಸಿದ್ದಾಪುರ ಶ್ರೀ ಕೃಷ್ಣ ವಿದ್ಯಾ ಮಂದಿರ, ಟಿ. ಶೆಟ್ಟಿಗೇರಿಯ ರೂಟ್ಸ್ ಎಜುಕೇಶನ್ ಟ್ರಸ್ಟ್, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಅಪ್ಪಚ್ಚ ಕವಿ ವಿದ್ಯಾಲಯ, ಕುಶಾಲನಗರದ ಫಿಲೋಮಿನಾ, ಸಿದ್ದಾಪುರ ಸಂತ ಅಂಥೋಣಿ, ವೀರಾಜಪೇಟೆಯ ತ್ರಿವೇಣಿ, ಗೋಣಿಕೊಪ್ಪಲು ನ್ಯಾಷನಲ್ ಅಕಾಡೆಮಿ, ಪೊನ್ನಂಪೇಟೆ ಸಾಯಿ ಶಂಕರ, ವೀರಾಜಪೇಟೆಯ ಕಾವೇರಿ, ಮೌನ್‍ಟೆನ್ ವ್ಯೂ, ಪ್ರಗತಿ, ಗೋಣಿಕೊಪ್ಪಲು ಸರಕಾರಿ ಶಾಲೆ, ವೀರಾಜಪೇಟೆ ಬ್ರೈಟ್ ಶಾಲೆ, ಅಮ್ಮತ್ತಿ, ನೇತಾಜಿ, ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್, ಕೊಡಗರಹಳ್ಳಿ ಶಾಂತಿನಿಕೇತನ, ನಾಪೋಕ್ಲು ಶ್ರೀ ರಾಮ ಟ್ರಸ್ಟ್, ಕುಟ್ಟ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಹುದಿಕೇರಿ ಗ್ರಾ.ಪಂ. ಸದಸ್ಯ ಚಂಗುಲಂಡ ಸೂರಜ್ ಚಾಲನೆ ನೀಡಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಉಪನ್ಯಾಸಕ ರಾದ ಅಕ್ರಮ್, ಚೇತನ್, ಸುದೇಶ್, ರಶ್ಮಿ, ಜಸಿಂತಾ, ಕುಮಾರ್ ಹಾಜರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ವಹಿಸಿದ್ದರು. ಅತಿಥಿಯಾಗಿ ಪಾರಿತೋಷಕ ಪ್ರಾಯೋಜಕ ಉಂಬಾಯಿ ಉಪಸ್ಥಿತರಿದ್ದರು.
ವಿಜೇತರು
ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆ ವಿದ್ಯಾರ್ಥಿಗಳು ನಿರ್ಮಿಸಿದ ಆ್ಯಂಬುಲೆನ್ಸ್ ವಿನೂತನ ಆವಿಷ್ಕಾರಕ್ಕೆ ಪ್ರಥಮ, ಗೋಣಿಕೊಪ್ಪಲು ಲಯನ್ಸ್ ವಿದ್ಯಾರ್ಥಿಗಳು ಪ್ರದರ್ಶಿಸಿದ ಟ್ರಾನ್ಸ್‍ಪೋರ್ಟ್ ಕಮ್ಯೂನಿಕೇಶನ್ ಆವಿಷ್ಕಾರಕ್ಕೆ ದ್ವಿತೀಯ, ಗೋಣಿಕೊಪ್ಪಲು ಕಾಪ್ಸ್ ಶಾಲೆ ವಿದ್ಯಾರ್ಥಿಗಳು ನಿರ್ಮಿಸಿದ ಸೋಲಾರ್ ಟೆಕ್ನಾಲಜಿಗೆ ತೃತೀಯ, ಎಸ್.ಎಂ.ಎಸ್. ಅಕಾಡೆಮಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಜಿಗ್‍ಬಿ ಟೆಕ್ನಾಲಜಿಗೆ ನಾಲ್ಕನೇ ಸ್ಥಾನ, ಗೋಣಿಕೊಪ್ಪಲು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಆವಿಷ್ಕರಿಸಿದ ಟಾರ್ಚ್ ಬೆಳಕಿನ ಟೆಕ್ನಾಲಜಿಗೆ ಐದನೇ ಬಹುಮಾನ ದೊರೆಯಿತು.