ಕುಶಾಲನಗರ, ಆ 21: ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಹಿನ್ನಡೆ ಕಾಣುವಂತಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಕುಶಾಲನಗರ ಕಳೆದ ಒಂದು ವಾರದಿಂದ ಪ್ರಕ್ಷುಬ್ಧ ಪರಿಸ್ಥಿತಿಗೆ ಒಳಗಾಗಿದ್ದೇ ಈ ಹಿನ್ನಡೆಗೆ ಕಾರಣವಾಗಿದೆ. ಆಟೋ ಚಾಲಕ ಪ್ರವೀಣ್ ಪೂಜಾರಿ ನಿಗೂಢ ಹತ್ಯೆ ಪ್ರಕರಣ ನಂತರದ ಬೆಳವಣಿಗೆಗಳು ಹೊರರಾಜ್ಯದ ಪ್ರವಾಸಿಗರಿಗೆ ಭಯದ ವಾತಾವರಣ ಸೃಷ್ಠಿಸಿದ್ದು ಈ ಹಿನ್ನಲೆಯಲ್ಲಿ ಕೇರಳ ಪ್ರವಾಸಿಗರ ಸಂಖ್ಯೆ ವಾರಾಂತ್ಯದಲ್ಲಿ ಕಂಡುಬರದೆ ಶೇ. 50 ರಷ್ಟು ಕುಂಠಿತಗೊಂಡಿರುವದು ಕಾಣಬಹುದು.

ಕಳೆದ ಟಿಪ್ಪು ಜಯಂತಿ ಸಂದರ್ಭದ ಘಟನೆಗಳ ನಂತರ ಜಿಲ್ಲೆಯ ಪ್ರವಾಸೋದ್ಯಮ ಚೇತರಿಕೆಯ ಹಂತದಲ್ಲಿ ಇರುವ ಸಂದರ್ಭದಲ್ಲಿ ಇದೀಗ ಇತ್ತೀಚಿನ ದಿನಗಳ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ನಂತರದ ಬೆಳವಣಿಗೆಗಳು ಅದರ ಬೆನ್ನಲ್ಲೇ ಪ್ರವೀಣ್ ಪೂಜಾರಿ ಹತ್ಯೆ ನಂತರದ ವರದಿಗಳು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು ಪ್ರವಾಸಿಗರು ಜಿಲ್ಲೆಗೆ ಬರಲು ಹಿಂದೇಟು ಹಾಕಲು ಕಾರಣ ಎನ್ನಲಾಗಿದೆ.

ಈ ವಾರಾಂತ್ಯದಲ್ಲಿ ಕುಶಾಲನಗರದ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೆ ಆಗಮಿಸಿದ ಪ್ರವಾಸಿಗರ ಸಂಖ್ಯೆ ಬಹುತೇಕ ಕ್ಷೀಣಗೊಂಡಿದೆ. ಪಟ್ಟಣದ ಲಾಡ್ಜ್ ಸೇರಿದಂತೆ ಈ ಭಾಗದ ಹೋಂಸ್ಟೇಗಳು ಕೂಡ ಖಾಲಿ ಬಿದ್ದಿದ್ದು ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.

ಪ್ರವೀಣ್ ಹತ್ಯೆ ಮಾಹಿತಿ ನೆರೆಯ ಕೇರಳ ರಾಜ್ಯದಲ್ಲಿ ಬಿತ್ತರಗೊಂಡಿದ್ದು, ಯಾವದೇ ಪ್ರವಾಸಿ ವಾಹನಗಳು ಕೊಡಗು ಜಿಲ್ಲೆಯತ್ತ ಮುಖ ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಫೇಸ್‍ಬುಕ್‍ಗಳಲ್ಲಿ ಓಡಾಡುತ್ತಿರುವ ಕುಶಾಲನಗರದ ದಿನನಿತ್ಯದ ಚಿತ್ರಣಗಳು ಪ್ರವಾಸಿಗರನ್ನು ಇನ್ನೂ ಭಯದತ್ತ ಮುಖ ಮಾಡುವಂತೆ ಮಾಡಿವೆ.

ಬೆರಳೆಣಿಕೆಯ ತಮಿಳುನಾಡು ನೋಂದಣಿ ವಾಹನಗಳು ಮಾತ್ರ ಪ್ರವಾಸಿ ಕೇಂದ್ರಗಳಲ್ಲಿ ಕಂಡುಬಂದಿದೆ. ಒಂದು ವಾರದಿಂದ ಜಾರಿಯಲ್ಲಿರುವ ಸೆಕ್ಷನ್ 144 ಹಾಗೂ ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಗ್ರಾಮಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಪೊಲೀಸರ ಓಡಾಟ ಕೂಡ ಎಲ್ಲರ ಸ್ವೇಛಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿದಂತೆ ಕಂಡುಬರುತ್ತಿದೆ.