ಗೋಣಿಕೊಪ್ಪಲು, ಡಿ.17: ಕೇರಳದಿಂದ ಯಾವದೇ ಪರವಾನಗಿ ಇಲ್ಲದೆ ಕೊಡಗಿನ ಗಡಿಭಾಗಕ್ಕೆ ಬಂದು ಇಲ್ಲಿನ ಪ್ರವಾಸಿಗರು ಹಾಗೂ ಭಕ್ತಾಧಿಗಳನ್ನು ಕೇರಳದ ಶಬರಿಮಲೈ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಬಾಡಿಗೆ ವಾಹನ ಮಾಲೀಕರು, ಚಾಲಕರು ಕರೆದೊಯ್ಯುತ್ತಿದ್ದು, ಕೊಡಗು ಆರ್.ಟಿ.ಓ.ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂ.ನಷ್ಟ ಸಂಭವಿಸುತ್ತಿದ್ದು, ಜಿಲ್ಲೆಯ ಪ್ರವಾಸಿ ವಾಹನ ಮಾಲೀಕರು ಹಾಗೂ ಚಾಲಕರಿಗೂ ಅಂತರರಾಜ್ಯ ಬಾಡಿಗೆ ಸಿಗದೆ ನಷ್ಟ ಉಂಟಾಗುತ್ತಿದೆ.

ಕೊಡಗಿನ ಮಾಕುಟ್ಟ, ಕುಟ್ಟ-ತೋಲ್‍ಪಟ್ಟಿ, ಕರಿಕೆ,ಪೆರುಂಬಾಡಿ, ಜಾಲ್ಸೂರು ವ್ಯಾಪ್ತಿಯಲ್ಲಿ ಕೇರಳದ ಅಧಿಕ ಟ್ಯಾಕ್ಸಿ ವಾಹನಗಳು ಆರ್.ಟಿ.ಓ. ನಿಯಂತ್ರಣವಿಲ್ಲದೆ ಓಡಾಡುತ್ತಿರುವ ದಾಗಿ ಕೊಡಗು ಪ್ರವಾಸಿ ವಾಹನ ಮಾಲೀಕರು ಮತ್ತು ಚಾಲಕರ ಸಂಘ ಆರೋಪಿಸಿದೆ. ತಾ. 19ರಂದು ಮಡಿಕೇರಿ ಆರ್‍ಟಿಓ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಆರ್.ಟಿ.ಓ. ಅಧಿಕಾರಿ, ಜಿಲ್ಲಾ ಪೆÇಲೀಸ್ ಅಧೀಕ್ಷಕರು ಹಾಗೂ ಉಪ ವಿಭಾಗಾಧಿಕಾರಿಗಳಿಗೂ ದೂರು ನೀಡಿದ್ದರೂ, ಯಾವದೇ ನಿಯಂತ್ರಣ ಸಾಧಿಸಿಲ್ಲ. ಕೊಡಗು ಜಿಲ್ಲೆಯಲ್ಲಿ 800ಕ್ಕೂ ಅಧಿಕ ಪ್ರವಾಸಿ ವಾಹನಗಳ ಮಾಲೀಕರಿಗೆ ಇದರಿಂದ ಅನ್ಯಾಯ ವಾಗಿದೆ. ಜಿಲ್ಲೆಯ ಎಲ್ಲೆಡೆ ಖಾಸಗಿ ವಾಹನಗಳು ಕಾನೂನು ಬಾಹಿರವಾಗಿ ಟ್ಯಾಕ್ಸಿ ವಾಹನಗಳಾಗಿ ಬಾಡಿಗೆಗೆ ತೆರಳುತ್ತಿವೆ. ಹಳದಿ ನಂಬರ್ ಪ್ಲೇಟ್ ಖಡ್ಡಾಯವಿದ್ದಾಗ್ಯೂ ತೆರಿಗೆ ವಂಚಿಸಲು ಇನ್ನೂ ಬಿಳಿ ಬೋರ್ಡ್ ನಲ್ಲಿಯೇ ಓಡಾಟ ನಡೆಸಿವೆ. ಇದರಿಂದಾಗಿ ಖಾಸಗಿ ಟ್ಯಾಕ್ಸಿ ಹಾಗೂ ಪ್ರವಾಸಿ ವಾಹನ ಮಾಲೀಕರು, ಚಾಲಕರ ನಡುವೆ ನಿರಂತರ ಘರ್ಷಣೆಗೆ ಕಾರಣವಾಗಿದೆ ಎಂದು ಜಿಲ್ಲಾ ಪ್ರವಾಸಿ ವಾಹನ ಮಾಲೀಕರು, ಚಾಲಕರ ಸಂಘದ ಅಧ್ಯಕ್ಷ ಚೇಕಂಡ ಸತ್ಯ, ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಪ್ರದೀಪ್, ನಿರ್ದೇಶಕರಾದ ಎಂ.ಎ. ರಫೀಕ್, ಪ್ರಭಾಕರ್ ಹಾಗೂ ರಾಮ ಚಂದ್ರ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮಡಿಕೇರಿ ಆರ್.ಟಿ.ಓ. ಕಚೇರಿ ಮುಂಭಾಗ ಪ್ರವಾಸಿ ವಾಹನ ಮಾಲೀಕರು, ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ ಪ್ರವಾಸಿ ವಾಹನ ಮಾಲೀಕರು, ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.