ಕುಶಾಲನಗರ, ಸೆ. 8: ಪ್ರಯಾಣಿಕರ ಸೋಗಿನಲ್ಲಿ ಆಟೋಗೆ ಏರಿದ ಮೂವರು ದುಷ್ಕರ್ಮಿಗಳು ಆಟೋ ಚಾಲಕನಿಗೆ ಚೂರಿಯಿಂದ ಇರಿದು ಆಟೋದೊಂದಿಗೆ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಕುಶಾಲನಗರದ ಗಂಧದಕೋಟೆ ನಿವಾಸಿ ಮಹಮ್ಮದ್ (56) ಎಂಬವರ ಆಟೋ (ಕೆಎ.12.9680) ಏರಿದ ಮೂವರು ದುಷ್ಕರ್ಮಿಗಳು ಬಸವನತ್ತೂರು ಕಡೆಗೆ ಬಾಡಿಗೆಗೆ ತೆರಳಿದ್ದಾರೆ. ಚಿಕ್ಕತ್ತೂರು ಗ್ರಾಮದ ಬಳಿ ತಲುಪಿದ ಸಂದರ್ಭ ಹಿಂಬದಿಯಿಂದ ಆಟೋ ಚಾಲಕನ ಮೇಲೆ ಏಕಾಏಕಿ ಚಾಕುವಿನಿಂದ ಧಾಳಿ ನಡೆಸಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಆಟೋ ಚಾಲಕ ಓಡಿ ಹೋಗಿ ಸ್ಥಳೀಯ ಮನೆಯೊಂದರಲ್ಲಿ ರಕ್ಷಣೆ ಪಡೆದರು ಎನ್ನಲಾಗಿದೆ. ದುಷ್ಕರ್ಮಿಗಳು ಆಟೋದೊಂದಿಗೆ ಪರಾರಿಯಾಗುವ ಸಂದರ್ಭ ಘಟನೆ ನಡೆದ ಸ್ಥಳದಿಂದ ಕೊಂಚ ದೂರದಲ್ಲಿ ಇಬ್ಬರು ಪಾದಚಾರಿಗಳಿಗೆ ಆಟೋ ಡಿಕ್ಕಿಯಾಗಿ ಮಗುಚಿ ಬಿದ್ದ ಹಿನ್ನೆಲೆಯಲ್ಲಿ ಆಟೋ ಬಿಟ್ಟು ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರವಾಗಿ ಚಾಕು ಇರಿತದಿಂದ ಗಾಯಗೊಂಡ ಆಟೋ ಚಾಲಕ ಮಹಮ್ಮದ್ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಮೊಕ್ಕಾಂ ಹೂಡಿರುವ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಡಿವೈಎಸ್ಪಿ ಟಿ.ಕುಮಾರ್ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಗಾಯಗೊಂಡ ಆಟೋ ಚಾಲಕನ ಕ್ಷೇಮ ವಿಚಾರಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ನೇತೃತ್ವದಲ್ಲಿ ಠಾಣಾಧಿಕಾರಿಗಳಾದ ಜೆ.ಇ.ಮಹೇಶ್, ಜಗದೀಶ್ ಅವರುಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಲಿಂಗಪ್ಪ ಅವರ ನೇತೃತ್ವದಲ್ಲಿ ತನಿಖಾ ತಂಡವೊಂದು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದು ಆಟೋ ಚಾಲಕ ಮಹಮ್ಮದ್ ಹಾಗೂ ಆಟೋ ಡಿಕ್ಕಿಪಡಿಸಿದ ಸಂದರ್ಭ ಗಾಯ ಗೊಂಡ ಮೋಹನ್ ಮತ್ತು ಜಯಣ್ಣ ಎಂಬವರು ದೂರು ದಾಖಲಿಸಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.