ಮಡಿಕೇರಿ, ಜು. 20: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ 2016-17ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ತಾ. 15 ರವರೆಗೆ ಅಂತಿಮ ದಿನ ನಿಗದಿ ಮಾಡಲಾಗಿತ್ತು. ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ತರಗತಿಗೆ ದಾಖಲಾತಿ ಬಯಸುವ ಎಲ್ಲಾ ವಿದ್ಯಾರ್ಥಿಗಳಿಗೆ ತಾ.23 ರವರೆಗೆ ವಿಸ್ತರಿಸಲಾಗಿದೆ.

ದಾಖಲಾತಿಗೆ ನಿಗಧಿಪಡಿಸಿರುವ ಶುಲ್ಕಗಳೊಂದಿಗೆ ವಿದ್ಯಾರ್ಥಿಗಳಿಂದ ಅವರ ಹಾಜರಾತಿಯನ್ನು ಶೇ. 75 ರಷ್ಟು ಕಾಯ್ದಿರಿಸಿಕೊಳ್ಳುವ ಕುರಿತು ಮುಚ್ಚಳಿಕೆಯನ್ನು ಪಡೆದುಕೊಂಡು ನಂತರವೇ ಕಾಲೇಜಿನ ಪ್ರಾಂಶುಪಾಲರು ಈ ಕೆಳಕಂಡ ದಂಡ ಶುಲ್ಕ ಪಡೆದು ನಿಯಮಾನುಸಾರ ದಾಖಲಾತಿಯನ್ನು ಮಾಡಿಕೊಳ್ಳುವದು. ಎಸ್.ಎಸ್.ಎಲ್.ಸಿ. ಮಾರ್ಚ್-2016ರ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ದಾಖಲಾತಿ ಕುರಿತು ದಂಡ ಶುಲ್ಕ ರೂ. 504, ವಿಶೇಷ ದಂಡ ಶುಲ್ಕ ರೂ. 1,680 ಒಟ್ಟು 2,184 ಆಗಿರುತ್ತದೆ. ಎಸ್.ಎಸ್.ಎಲ್.ಸಿ. ಜೂನ್-2016ರ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ದಾಖಲಾತಿಗೆ ದಂಡ ಶುಲ್ಕ ಇರುವದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.