ಸೋಮವಾರಪೇಟೆ,ಆ.12: ಹಾರಂಗಿ ಅಣೆಕಟ್ಟೆ ಹಿನ್ನೀರು ಮುಳುಗಡೆ ಪ್ರದೇಶದ ಕಂದಾಯ ಗ್ರಾಮದ ಆದೇಶ ಜಾರಿಯಾಗಿದ್ದು, ನಂತರದ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಈ ಮಧ್ಯೆ ಶಾಸಕ ಅಪ್ಪಚ್ಚು ರಂಜನ್ ಬಿಜೆಪಿ ಕಾರ್ಯಕರ್ತರನ್ನು ಸೇರಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಿರುವದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಮುಖಂಡ ಹಾಗೂ ಯಡವನಾಡು ಗ್ರಾಮ ನಿವಾಸಿ ಎಚ್.ಸಿ.ನಾಗೇಶ್ ವ್ಯಂಗ್ಯವಾಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರಂಗಿ ಹಿನ್ನೀರಿನಿಂದ ಮುಳುಗಡೆ ಗೊಂಡಿರುವ ಅತ್ತೂರು-ನಲ್ಲೂರು, ಯಡವನಾಡು ಗ್ರಾಮದ ಮುಳುಗಡೆ ಸಂತ್ರಸ್ಥರ ಕಂದಾಯ ಗ್ರಾಮದ ಕನಸ್ಸನ್ನು ನನಸು ಮಾಡಿರುವುದು ಕಾಂಗ್ರೆಸ್ ನೇತೃತ್ವದ ಇಂದಿನ ರಾಜ್ಯ ಸರ್ಕಾರ ಎಂದು ಹೇಳಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಅವರು ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಗಮನ ಸೆಳೆದು ಅವರ ಮೂಲಕ ಕಂದಾಯ ಗ್ರಾಮದ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಾಜಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೆಚ್ಚಿನ ಗಮನಹರಿಸಿದರು. ನಂತರ ಬಂದ ಮಾಜಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಟ್ಟು ಕಂದಾಯ ಗ್ರಾಮದ ಆದೇಶ ಹೊರಡಿಸುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.

ಈಗ ಅಪ್ಪಚ್ಚು ರಂಜನ್ ತಾನು ಮಾಡಿದ್ದು ಎಂದು ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ. 18 ವರ್ಷ ಶಾಸಕರಾಗಿದ್ದಾರೆ. ಅಲ್ಲದೆ 5 ವರ್ಷ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಿದೆ. ಅಪ್ಪಚ್ಚು ರಂಜನ್ ಸಚಿವರೂ ಆಗಿದ್ದರು. ಆ ದಿನಗಳಲ್ಲಿ ಕಂದಾಯ ಗ್ರಾಮದ ಆದೇಶ ಮಾಡಿಸಲಿಲ್ಲ ಏಕೆ ? ಎಂದು ಪ್ರಶ್ನಿಸಿದರು.

2004ರಲ್ಲಿ ಯಡವಾರೆ, ಯಡವನಾಡು ರಸ್ತೆಗೆ 6.50ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗೆ ತಾನೇ ಹಣ ತಂದಿದ್ದು ಎಂದು ಶಾಸಕರಾದ ಅಪ್ಪಚ್ಚು ರಂಜನ್ ಪೂಜೆ ನಡೆಸಿ, ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪ ಮಾಡುವ ಶಾಸಕರು ಪೂಜೆಗೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಚ್ಚಂಡ ಅಶೋಕ್ ವ್ಯಂಗ್ಯವಾಡಿದರು. ಗೋಷ್ಠಿಯಲ್ಲಿ ಐಗೂರು ಗ್ರಾ.ಪಂ. ಸದಸ್ಯ ಕೆ.ಪಿ.ದಿನೇಶ್, ಯಡವನಾಡು ಗ್ರಾಮದ ವಿಶ್ವನಾಥ್, ಪ.ಪಂ. ಸದಸ್ಯ ಬಿ.ಜಿ.ಇಂದ್ರೇಶ್ ಇದ್ದರು.