ಮಡಿಕೇರಿ, ಸೆ. 17: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾಗಿರುವ ತಮ್ಮ ವಿರುದ್ಧ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಾ.ಪಂ ಸದಸ್ಯ ಅಪ್ರು ರವೀಂದ್ರ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪಕ್ಷ ನಿಷ್ಠೆಯ ಬಗ್ಗೆ ಅರಿವಿಲ್ಲದ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಇಲ್ಲಸಲ್ಲದ ಆರೋಪ ಮಾಡಿರುವದು ಖಂಡನೀಯವೆಂದರು.

ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಮರಗೋಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಕಟ್ಟಿ ಬೆಳೆಸಿದ್ದೇನೆ. ಮರಗೋಡು ಕ್ಷೇತ್ರದಲ್ಲಿ 2 ಬಾರಿ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದು, ಇದೀಗ ತಾ.ಪಂ ಸದಸ್ಯನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದೆಲ್ಲವನ್ನೂ ನಾನು ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ಮಾಡಿದ್ದು, ಮುಂದೆಯೂ ಮಾಡಲಿದ್ದೇನೆ.

ನಗರಸಭೆÉಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆÉಯ ಸಂದರ್ಭ ಕಾಂಗ್ರೆಸ್‍ಗೆ ವಿರುದ್ಧವಾಗಿ ನಾನು ನಡೆದುಕೊಂಡಿದ್ದೇನೆ ಎಂದು ಪ್ರಕಾಶ್ ಆಚಾರ್ಯ ಮಾಡಿರುವ ಆರೋಪ ಕಪೋಲಕಲ್ಪಿತವಾಗಿದೆ ಎಂದರು.

ನನ್ನ ಸಹೋದರಿ ಶ್ರೀಮತಿ ಬಂಗೇರ ಅವರು, ರಾಜಕೀಯ ಒತ್ತಡದಿಂದ ಅನಾರೋಗ್ಯ ಹೆಚ್ಚಾದ ಕಾರಣ ಬೆಂಗಳೂರಿಗೆ ತೆರಳುವಾಗ ನನ್ನನ್ನು ಕೂಡ ಆಹ್ವಾನಿಸಿದ ಹಿನ್ನೆಲೆ ನನ್ನ ಕಾರಿನಲ್ಲಿ ತೆರಳಿದ್ದೇನೆ. ರಾಜಕೀಯಕ್ಕಿಂತ ನನ್ನ ಸಹೋದರಿಯ ಆರೋಗ್ಯ ರಕ್ಷಣೆ ಮುಖ್ಯವಾಗಿತ್ತು. ಪ್ರಕಾಶ್ ಆಚಾರ್ಯ ಹೇಳುವಂತೆ ನಾನು ಕಾಂಗ್ರೆಸ್ ಪಕ್ಷಕ್ಕೆ ಅನ್ಯಾಯ ಮಾಡಲು ಹೋಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು.

ಪಕ್ಷದಲ್ಲಿನ ವಿಚಾರಗಳನ್ನು ಆಂತರಿಕವಾಗಿ ಚರ್ಚಿಸದೆ ಬಹಿರಂಗ ವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಪಕ್ಷದ ಮುಖಂಡರು ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪ್ರಕಾಶ್ ಆಚಾರ್ಯ ವಿರುದ್ಧ ದೂರು ನೀಡುವದಾಗಿ ತಿಳಿಸಿದರು.

ಹೊಸ್ಕೇರಿ ಕಾಂಗ್ರೆಸ್ ವಲಯಾಧ್ಯಕ್ಷ ಸದಾ ಡೆನ್ನಿಸ್ ಮಾತನಾಡಿ ಮರಗೋಡು ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸಿರುವ ಅಪ್ರು ರವೀಂದ್ರ ಅವರು ಪಕ್ಷ ನಿಷ್ಠರಾಗಿದ್ದು, ಪ್ರಕಾಶ್ ಆಚಾರ್ಯ ಅವರ ಟೀಕೆ ಖಂಡನೀಯವೆಂದರು.

ಪಕ್ಷದ ಪ್ರಮುಖ ಕುಶಾಲಪ್ಪ ಮಾತನಾಡಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪಕ್ಷದ ನಾಯಕರು ಸ್ಪಂದಿಸದೇ ಇರುವದರಿಂದ ಅಪ್ರು ರವೀಂದ್ರ ಅವರು ಮರಗೋಡು ಜನರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಾ ಈ ಭಾಗದಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.

ಸ್ಥಳೀಯ ಅಂಬೇಡ್ಕರ್ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಬಿಜೆಪಿಯ ಗೂಡಾಗಿರುವ ಮರಗೋಡಿನಲ್ಲಿ ಅಪ್ರು ರವೀಂದ್ರ ಅವರ ಶ್ರಮದಿಂದ ಕಾಂಗ್ರೆಸ್ ಪಕ್ಷ ನೆಲೆ ನಿಂತಿದ್ದು, ಪ್ರಕಾಶ್ ಆಚಾರ್ಯ ಅವರು ಸುಳ್ಳು ಆರೋಪಗಳನ್ನು ಮಾಡುವದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಮಂಜುಳಾ ಹಾಗೂ ಜಯಣ್ಣ ಉಪಸ್ಥಿತರಿದ್ದರು.