ಮಡಿಕೇರಿ, ಅ. 3: ಮಂಜಿನ ನಗರಿ ಮಡಿಕೇರಿಯನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಸೇವೆ ಸ್ಮರಣೀಯ ವಾದುದು ಎಂದು ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದರು.ನಗರಸಭೆ ವತಿಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರ ಶ್ರೇಯೋ ಭಿವೃದ್ಧಿಗೆ ಸರ್ಕಾರ ರೂಪಿಸಿದ ಯೋಜನೆಗಳ ಸೌಲಭ್ಯ ಪಡೆಯಲು ಪೌರಕಾರ್ಮಿಕರು ಮುಂದಾಗಬೇಕಿದೆ ಎಂದು ಕಾವೇರಮ್ಮ ಸೋಮಣ್ಣ ಹೇಳಿದರು.ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಮಾತನಾಡಿ ನಗರದ ಶುಚಿತ್ವವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಅಗತ್ಯತೆ ಸಾಕಷ್ಟಿದೆ. ಪೌರ ಕಾರ್ಮಿಕರಿಗೆ 2016-17ನೇ ಸಾಲಿನಲ್ಲಿ ಶೇ.24.1 ಯೋಜನೆಯಡಿ ಯಲ್ಲಿ ಬೆಳಗಿನ ಉಪಾಹಾರ, ಉಚಿತ ಆರೋಗ್ಯ ಶಿಬಿರ, ರಕ್ಷಣಾ ಸಾಮಗ್ರಿಗಳನ್ನು ವಿತರಣೆ, ಉಚಿತ ಪ್ರವಾಸ ಕಾರ್ಯಕ್ರಮಗಳು ಸೇರಿದಂತೆ ಪೌರ ಕಾರ್ಮಿಕ ಮಕ್ಕಳಿಗೆ ವಿಮಾ ಸೌಲಭ್ಯ ಕೊಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಸತಿ ಇಲ್ಲದ ಪೌರ ಕಾರ್ಮಿಕರಿಗೆ ನಿವೇಶನ ಸೌಲಭ್ಯ, ಈಗಾಗಲೇ 12 ವಸತಿ ನಿರ್ಮಾಣಕ್ಕಾಗಿ ಸಹಾಯಧನವನ್ನು ಮಂಜೂರು ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.

ನಗರಸಭಾ ಸದಸ್ಯ ಉಸ್ಮಾನ್ ಮಾತನಾಡಿ ಪ್ರತಿ ದಿನದ ಕೆಲಸ ಕಾರ್ಯಗಳಲ್ಲಿ ಪೌರ ಕಾರ್ಮಿಕರು ನಗರ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇವರಿಗೆ ಸರ್ಕಾರದ ಪ್ರೋತ್ಸಾಹ ಹಾಗೂ ಸೌಲಭ್ಯ ಹೆಚ್ಚಾಗಿ ಸಿಗುವಂತಾಗಬೇಕು ಎಂದರು.

ನಗರಸಭಾ ಸದಸ್ಯ ಮನ್ಸೂರ್ ಮಾತನಾಡಿ ಜಿಲ್ಲೆಯು ನಗರ ಸ್ವಚ್ಛತೆಯಲ್ಲಿ 11ನೇ ಸ್ಥಾನ ಪಡೆದಿದೆ. ಇದಕ್ಕೆ ಮೂಲ ಕಾರಣ ಪೌರ ಕಾರ್ಮಿಕರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸ್ವಚ್ಛತೆಗೆ ಆದ್ಯತೆ ನೀಡಿ ಪ್ರಥಮ ಸ್ಥಾನವನ್ನು ಪಡೆಯುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಮತ್ತೋರ್ವ ಸದಸ್ಯ ಕೆ.ಜೆ. ಪೀಟರ್ ಮಾತನಾಡಿ ಪೌರ ಕಾರ್ಮಿಕರು ಮಕ್ಕಳಿಗೆ ಉಚಿತ ಶಿಕ್ಷಣ, ಸಮವಸ್ತ್ರ, ಇನ್ನಿತರ ಮೂಲ ಸೌಲಭ್ಯಗಳನ್ನು ಪಡೆಯುವಲ್ಲಿ ಮುಂದಾಗುವಂತೆ ಸಲಹೆ ನೀಡಿದರು.

ಉತ್ತಮ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸಿದ ರಾಮು ಮತ್ತು ನೆಭಿಸಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ನಂತರ ಪೌರ ಕಾರ್ಮಿಕರ ಮಕ್ಕಳಿಗೆ ವಿಮಾ ಬಾಂಡ್‍ನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ಅನಿತಾ ಪೂವಯ್ಯ, ಚುಮ್ಮಿ ದೇವಯ್ಯ, ತಜಸುಂ ಪೌರಕಾರ್ಮಿಕರ ನೌಕರರ ಸಂಘದ ಕಾರ್ಯದರ್ಶಿ ಓಬಳಿ, ಮತ್ತಿತರರು ಇದ್ದರು. ನಂತರ ನಗರದ ಗಾಂಧಿ ಮೈದಾನದಲ್ಲಿ ಪೌರ ಕಾರ್ಮಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.